ADVERTISEMENT

ವಚನಾಮೃತ: ಮನಪೂರ್ವಕವಾಗಿ ದೇವರನ್ನು ಆರಾಧಿಸಬೇಕು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 8:02 IST
Last Updated 1 ಸೆಪ್ಟೆಂಬರ್ 2021, 8:02 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲ‍ಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

–––––

ವಚನದಲ್ಲಿ ನಿಮ್ಮ ನಾಮಾಮೃತ ತುಂಬಿ

ADVERTISEMENT

ನಯನದಲ್ಲಿ ನಿಮ್ಮ ಮೂರುತಿ ತುಂಬಿ,‌

ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ

ಮನದಲ್ಲಿ ನಿಮ್ಮ ನೆನಹು ತುಂಬಿ ಕೂಡಲಸಂಗಮದೇವಾ

ನಿಮ್ಮ ಚರಣಕಮಲದೊಳಗಾನು ತುಂಬಿ.

ಭಗವಂತನ ಆರಾಧನೆಯು ಯಾವ ರೀತಿಯಾಗಿರಬೇಕು ಎನ್ನುವುದನ್ನು ಬಸವಣ್ಣನವರು ಇಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಮಾನವನಿಗೆ ಪಂಚೇದ್ರಿಯಗಳು ಅತ್ಯಮೂಲ್ಯವಾದವು. ಅವುಗಳಲ್ಲಿ ಒಂದು ಅಂಗದ ಕೊರತೆಯಾದರೂ ಆತನ ಜೀವನವು ಪರಿಪೂರ್ಣ ಎನಿಸದು. ಸಕಲ ಇಂದ್ರಿಯಗಳನ್ನು ಒಳಗೊಂಡ ನಾವು ಎಲ್ಲ ಇಂದ್ರಿಯಗಳಿಂದಲೂ ದೇವರ ಆರಾಧನೆ ಮಾಡಬೇಕು. ಸದಾ ಕಾಲ ಭಗವಂತನ ನಾಮಸ್ಮರಣೆಯನ್ನು ನಾವು ಮಾಡುತ್ತಿರಬೇಕು. ನಮ್ಮ ನಯನದಲ್ಲಿ ಯಾವಾಗಲೂ ಆತನದೆ ಮೂರ್ತಿ ಇರಬೇಕು. ಕಿವಿಯಲ್ಲಿ ಆತನ ಸ್ಮರಣೆಯೆ ಕೇಳುತ್ತಿರಬೇಕು. ಮನದಲ್ಲಿ ನಿತ್ಯವೂ ಅವನದೇ ಧ್ಯಾನವಿರಬೇಕು. ಭಗವಂತನ ಚರಣಸೇವೆಯೇ ನಮ್ಮ ಆದ್ಯ ಕರ್ತವ್ಯವಾಗಬೇಕು. ಭಕ್ತಿಯು ಪರಿಶುದ್ಧವಾಗಿರಬೇಕು.ಮನಪೂರ್ವಕವಾಗಿ ಆರಾಧಿಸಬೇಕು. ಆಗ, ಫಲ ದೊರೆಯುತ್ತದೆ. ಬದುಕು ಹಸನಾಗುತ್ತದೆ ಎನ್ನುವುದು ಈ ವಚನದ ಸಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.