ADVERTISEMENT

ವಚನಾಮೃತ: ಶರೀರವನ್ನು ಕೆಡಿಸಿಕೊಳ್ಳಬೇಡಿರಿ

ಡಾ.ಅಲ್ಲಮಪ್ರಭು ಸ್ವಾಮೀಜಿ
Published 14 ಏಪ್ರಿಲ್ 2021, 5:42 IST
Last Updated 14 ಏಪ್ರಿಲ್ 2021, 5:42 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ವ್ಯಾಧನೊಂದು ಮೊಲನ ತಂದಡೆ ಸಲುವ

ಹಾಗಕ್ಕೆ ಬಿಲಿವರಯ್ಯಾ,

ನೆಲನಾಳ್ದನ ಹೆಣನೆಂದಡೆ ಒಂದಡಿಕೆಗೆ

ADVERTISEMENT

ಕೊಂಬವರಿಲ್ಲ ನೋಡಯ್ಯಾ!

ಮೊಲನಿಂದ ಕರಕಷ್ಟ ನರನ ಬಾಳುವೆ!

ಸಲೆ ನಂಬೊ ನಮ್ಮ ಕೂಡಲಸಂಗಮದೇವನ.

ನಶ್ವರವಾದ ಈ ಶರೀರದ ಕುರಿತಾಗಿ ಬಸವಣ್ಣನವರು ಮಾರ್ಮಿಕವಾಗಿ ಹೇಳಿದ್ದಾರೆ. ಬೇಟೆಗಾರನು ಮೊಲವನ್ನು ಬೇಟೆಯಾಡಿ ಮಾರುಕಟ್ಟೆಯಲ್ಲಿ ಮಾರಲಿಕ್ಕೆ ತಂದರೆ ಅದನ್ನು ತೆಗೆದುಕೊಳ್ಳಲು ಜನ ಮುಗಿಬಿಳುತ್ತಾರೆ. ಅದೇ ನೆಲವನ್ನು ಆಳುವ ರಾಜನು ತೀರಿಕೊಂಡರೆ ಅವನ ಶರೀರಕ್ಕೆ ಯಾರೂ ಬೆಲೆ ಕೊಡುವುದಿಲ್ಲ. ಮೊಲಕ್ಕಿಂತ ಮಾನವನ ದೇಹದ ಬೆಲೆ ಕನಿಷ್ಠವಾಗಿದೆ. ಆದರೂ ನಮ್ಮ ದೇಹದ ಕುರಿತಾಗಿ ಅತಿಯಾದ ವ್ಯಾಮೋಹ, ಪ್ರೀತಿಯನ್ನು ನಾವು ಹೊಂದಿದ್ದೇವೆ. ನಾವು ಮಾಡುವ ಪರೋಪಕಾರಗಳು, ಪುಣ್ಯದ ಕೆಲಸಗಳಿಂದ ನಮ್ಮ ಹೆಸರು ಉಳಿಯುತ್ತದೆಯೇ ಹೊರತು ಶರೀರದಿಂದಲ್ಲ. ಶರೀರವು ನಮ್ಮ ಕಾರ್ಯಸಾಧನೆಗೆ ನೆಪ ಮಾತ್ರ. ಅಂತಹ ಪ್ರಸಾದಕಾಯ (ಶರೀರ)ವನ್ನು ಕೆಡಿಸದೆ ಸದ್ಬಳಕೆ ಮಾಡಿಕೊಳ್ಳೋಣ. ಇದಕ್ಕಾಗಿ ದುಶ್ಚಟಗಳಿಂದ ದೂರವಿರಬೇಕಾಗುತ್ತದೆ. ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಬಸವಣ್ಣನವರು ವಚನದ ಮೂಲಕ ಈ ಸಂದೇಶವನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.