ADVERTISEMENT

ಎಲ್ಲರ ಹಿತವನ್ನೂ ಬಯಸೋಣ: ಡಾ.ಅಲ್ಲಮಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 8:26 IST
Last Updated 28 ಜುಲೈ 2021, 8:26 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು?

ADVERTISEMENT

ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ?

ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ

ಕೂಡಲಸಂಗಮದೇವಾ!

ಮಾನವನಷ್ಟು ಸ್ವಾರ್ಥ ಜೀವಿಯು ಈ ಜಗತ್ತಿನಲ್ಲಿ ಬೇರೆ ಯಾವ ಜೀವಿಯೂ ಇಲ್ಲ ಎನಿಸುತ್ತದೆ. ತಾನೆ ಶ್ರೇಷ್ಠ, ಎಲ್ಲವೂ ತನಗೆ ಮಾತ್ರ ಸೀಮಿತವಾಗಿರಬೇಕು ಎನ್ನುವುದು ಅವನ ಉದ್ದೇಶ. ಕೇವಲ ತನ್ನ ಬದುಕಿನ ಅವಶ್ಯಕತೆಗಳಿಗಾಗಿಯೆ ಚಿಂತಿಸುವುದು ಅವನ ಜೀವನ ಧ್ಯೇಯವಾಗಿದೆ. ಆದರೆ, ಉಳಿದ ಪಶು–ಪಕ್ಷಿಗಳು ಹಾಗಲ್ಲ. ತಮ್ಮ ಜೊತೆಗಿರುವವರ ಕುರಿತಾಗಿಯೂ ಅವು ಚಿಂತಿಸುತ್ತವೆ ಎನ್ನುವುದನ್ನು ಈ ಮೇಲಿನ ವಚನ ತಿಳಿಸುತ್ತದೆ. ಕಾಗೆಯು ಒಂದು ಅನ್ನದ ಅಗುಳ ಕಂಡ ಕೂಡಲೆ ತನ್ನ ಬಳಗವನ್ನೆಲ್ಲಾ ಕರೆದುಕೊಂಡು ಬಂದು ಆ ಅಗುಳನ್ನು ತಿನ್ನುತ್ತದೆ. ಕೋಳಿಯು ಒಂದು ಕಾಳನ್ನು ಕಂಡ ತಕ್ಷಣ ತನ್ನ ಕುಲವನ್ನೆಲ್ಲ ಕರೆದು ಆ ಕಾಳನ್ನು ತಿನ್ನುತ್ತದೆ; ಹಂಚಿಕೊಳ್ಳುತ್ತದೆ. ಭಗವಂತನ ಆರಾಧನೆಯೆ ಮಾನವನ ಜೀವನದ ಅವಿಭಾಜ್ಯ ಅಂಗ. ಅಂತಹ ಮಾನವನು ಭಕ್ತಿಯನ್ನು ಮಾಡದಿದ್ದರೆ ಆ ಕಾಗೆ, ಕೋಳಿಗಳಿಗಿಂತ ಕೀಳಾಗುತ್ತಾನೆ. ಭಗವಂತನ ಆರಾಧನೆಯನ್ನು ಕೇವಲ ತಾನು ಮಾತ್ರವಲ್ಲದೆ ತನ್ನ ಬಂಧು ಬಳಗದೊದಿಗೆ ಮಾಡಬೇಕು ಮತ್ತು ಎಲ್ಲರಿಗೂ ಹಿತವನ್ನು ಬಯಸಬೇಕು ಎನ್ನುವುದು ಈ ವಚನದ ತಾತ್ಪರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.