ADVERTISEMENT

ವೇದವ್ಯಾಸರ ಶಿವಪುರಾಣಸಾರ: ದಕ್ಷನ ಬೆವರಲ್ಲಿ ಹುಟ್ಟಿದ ರತಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 20 ಮೇ 2022, 19:30 IST
Last Updated 20 ಮೇ 2022, 19:30 IST
ವೇದವ್ಯಾಸರ ಶಿವಪುರಾಣಸಾರ
ವೇದವ್ಯಾಸರ ಶಿವಪುರಾಣಸಾರ   

ಬ್ರಹ್ಮ ಮತ್ತವನ ಮಕ್ಕಳ ಕಾಮವಿಕಾರವನ್ನು ಸಹಿಸದ ಧರ್ಮಪುರುಷ ಶಿವನಲ್ಲಿ ಮೊರೆ ಇಟ್ಟ. ‘ಮಹಾದೇವನೇ! ಜಗತ್ತಿನ ಸೃಷ್ಟಿ, ಸ್ಥಿತಿ, ಪ್ರಳಯಗಳಿಗೆ ನೀನೇ ಕರ್ತನು. ನೀನು ಮಾಯಾಮಯವಾದ ರಜಸ್ಸು, ಸತ್ತ್ವ ಮತ್ತು ತಮಸ್ಸು ಎಂಬ ಮೂರು ಗುಣಗಳಿಂದ ಬ್ರಹ್ಮ, ವಿಷ್ಣು, ಮತ್ತು ರುದ್ರರೂಪಗಳನ್ನು ಧರಿಸಿ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ನಾಶಗಳನ್ನು ನಡೆಸುತ್ತಲಿರುವೆ. ಹೀಗಿದ್ದರೂ ಪಾರಮಾರ್ಥಿಕವಾಗಿ ನೀನು ನಿರ್ಗುಣನು, ಯಾವ ಗುಣಗಳೂ ಇಲ್ಲದವನು.’

‘ಓ ಪರಮೇಶ್ವರನೇ! ನೀನು ಪಾರಮಾರ್ಥಿಕವಾಗಿ ಸತ್ತ್ವ-ರಜಸ್ಸು-ತಮಸ್ಸು ಎಂಬ ಮೂರು ಗುಣಗಳಿಲ್ಲದ ಮಂಗಳರೂಪ. ಜಡವಾದ ಪ್ರಕೃತಿಯ ಸಂಬಂಧವಿಲ್ಲದ ಚೇತನಸ್ವರೂಪ. ಆದುದರಿಂದಲೇ ಪ್ರಕೃತಿ ಸಂಬಂಧವಾದ ಯಾವ ಗುಣಗಳೂ ಇಲ್ಲದವನಾಗಿದ್ದೀಯ. ಜನ್ಮ, ಸ್ಥಿತಿ, ನಾಶ ಮುಂತಾದ ವಸ್ತುವಿಕಾರಗಳಿಲ್ಲದೇ ನಿತ್ಯನಾದವನಾಗಿದ್ದೀಯ, ಮಾಯಾಮಯನಾಗಿ ಅನೇಕ ಲೀಲೆಗಳನ್ನು ಮಾಡುವವನಾದ ನೀನು, ಪಾಪ ಬುದ್ಧಿಯುಳ್ಳವರಾದ ನನ್ನ ತಂದೆ ಬ್ರಹ್ಮ ಮತ್ತವನ ಮಕ್ಕಳಾದ ನನ್ನ ಸಹೋದರರ ಪಾಪಕೃತ್ಯ ತಡೆಹಿಡಿ. ಸಂಧ್ಯೆ ಮೇಲೆ ಮೋಹಗೊಂಡಿರುವ ಅವರೆಲ್ಲರಿಗೂ ಸದ್ಬುದ್ಧಿ ಕೊಡು’ ಎಂದು ಧರ್ಮಪುರುಷ ಶಿವನಲ್ಲಿ ಪ್ರಾರ್ಥಿಸುತ್ತಾನೆ.

ಧರ್ಮಪುರುಷನ ಮೊರೆ ಕೇಳಿ ಮಹಾದೇವನು ಧಾವಿಸಿ ಬಂದು, ‘ಎಲೈ ಬ್ರಹ್ಮನೇ, ನಿನಗೂ ಈ ಮದನವಿಕಾರವುಂಟಾಯಿತೇ?ನಿನ್ನ ಸ್ವಂತ ಮಗಳನ್ನು ನೋಡಿ ಈ ರೀತಿ ಭೋಗಾಭಿಲಾಷೆಯುಳ್ಳವರಾಗುವುದು ವೇದಮಾರ್ಗವನ್ನನುಸರಿಸಿ ನಡೆಯುವ ನಿಮ್ಮಂಥವರಿಗೆ ಯೋಗ್ಯವಲ್ಲ.

ADVERTISEMENT

ತಾಯಿ, ತಂಗಿ, ಅಕ್ಕ, ಅತ್ತಿಗೆ, ಮಗಳನ್ನು ಕಾಮದೃಷ್ಟಿಯಿಂದ ತಿಳಿವಳಿಕೆ ಇದ್ದವನು ನೋಡಬಾರದು ಎಂಬ ನೀನೇ ಉಪದೇಶಿಸಿರುವೆಯಲ್ಲವೇ? ನಿನ್ನ ಮನಸ್ಸು ತುಂಬಾ ಕಲುಷಿತವಾಗಿರುವುದರಿಂದಲೇ ನೀಚನಾದ ಕಾಮನು ನಿನ್ನ ಚಂಚಲಗೊಳಿಸಿದ. ದಕ್ಷ, ಮರೀಚ ಮುಂತಾದ ನಿನ್ನ ಪುತ್ರರೂ ಸ್ತ್ರೀಯಲ್ಲಿ ಹೇಗೆ ಅಭಿಲಾಷೆಯುಳ್ಳವರಾದರು? ಮೂಢನಾದ ಮನ್ಮಥ ತಿಳಿವಳಿಕೆಯಿಲ್ಲದೆ, ದೇಶಕಾಲಗಳನ್ನು ತಿಳಿಯದೇ ಉದ್ದಟತನವನ್ನಾಶ್ರಯಿಸಿ ನಿಮ್ಮೆಲ್ಲರನ್ನೂ ತನ್ನ ಬಾಣಗಳಿಂದ ಕಾಮವಿಕಾರವುಳ್ಳವರನ್ನಾಗಿ ಮಾಡಿದ್ದಾನೆ. ಯಾರ ಮನಸ್ಸನ್ನು ಕಾಮಿನಿಯು ಅಪಹರಿಸಿ, ಅಸ್ಥಿರವಾದ ವಿಷಯಕೂಪದಲ್ಲಿ ಮುಳುಗಿಸುವಳೋ, ಅಂತಹ ಮನಸ್ಸುಳ್ಳವನ ಶಾಸ್ತ್ರಜ್ಞಾನಕ್ಕೆ ಧಿಕ್ಕಾರವಿರಲಿ, ಅವನು ತಿಳಿದಿರುವುದೆಲ್ಲವೂ ವ್ಯರ್ಥವೆನಿಸುತ್ತೆ’ ಎಂದು ಪರಮಾತ್ಮ ಛೀಮಾರಿ ಹಾಕಿದ.

ಶಿವನ ಮಾತುಗಳನ್ನು ಕೇಳಿ ಬ್ರಹ್ಮನಾದ ನಾನು ನಾಚಿಕೆಯಿಂದ ಮತ್ತಷ್ಟು ಹೆಚ್ಚಾದ ಬೆವರುಗಳುಳ್ಳವನಾಗಿ ತುಂಬಾ ಲಜ್ಜೆಗೊಂಡೆ. ನಾನು ಕಾಮೇಚ್ಛೆಯಿಂದ ಸುಂದರಿಯಾದ ಸಂಧ್ಯೆಯನ್ನು ಸ್ವೀಕರಿಸಬೇಕೆಂಬ ಇಚ್ಛೆಯುಳ್ಳವನಾಗಿದ್ದರೂ ಶಿವನ ಹೆದರಿಕೆಯಿಂದ ಮನಸ್ಸನ್ನು ಬಿಗಿಹಿಡಿದು ಕಾಮವಿಕಾರವನ್ನು ತ್ಯಜಿಸಿದೆ. ಆಗ ನನ್ನ ಶರೀರದಿಂದ ಬೆವರನೀರು ಕೆಳಗೆ ಬಿದ್ದಿತು. ಅದರಿಂದ ಅಗ್ನಿಷ್ವಾತ್ತರು ಎಂಬ ಪಿತೃದೇವತೆಗಳು ಮತ್ತು ಬರ್ಹಿಷದರು ಎಂಬ ಪಿತೃಗಣಗಳೂ ಜನಿಸಿದುವು.

ಪಿತೃದೇವತೆಗಳೆಲ್ಲರೂ ಅಂಜನಖಂಡದಂತೆ ಕಪ್ಪುವರ್ಣದವರಾಗಿದ್ದರು. ಅವರಲ್ಲಿ ಕೆಲವರು ಸಂಸಾರದಲ್ಲಿ ವಿರಕ್ತರಾದ ಮಹಾಯೋಗಿಗಳಾಗಿದ್ದರೆ, ಇನ್ನೂ ಕೆಲವರು ಕರ್ಮಯೋಗಿಗಳಾಗಿದ್ದರು. ಅವರಲ್ಲಿ ಅಗ್ನಿಷ್ವಾತ್ತರು ಎಂಬ ಪಿತೃದೇವತೆಗಳು ಅರವತ್ತು ನಾಲ್ಕು ಸಾವಿರ ಸಂಖ್ಯೆಯಲ್ಲಿದ್ದರೆ, ಬರ್ಹಿಷದರು ಎಂಬ ಪಿತೃಗಣಗಳು ಎಂಬತ್ತಾರು ಸಾವಿರ ಇದ್ದರು. ಇಂಥ ಸಂದರ್ಭದಲ್ಲಿ ದಕ್ಷಪ್ರಜಾಪತಿಯ ಶರೀರದಿಂದಲೂ ಬೆವರನೀರು ಬಿದ್ದಿತು. ಅದರಿಂದ ಸಕಲ ಗುಣಪರಿಪೂರ್ಣಳಾದ ಓರ್ವ ಉತ್ತಮ ಸ್ತ್ರೀ ಜನಿಸಿದಳು. ಅವಳು ತೆಳ್ಳನೆ ಬಳುಕುವ ಶರೀರವುಳ್ಳ, ಕೋಮಲವಾದ ನಡುವುಳ್ಳ, ಸೂಕ್ಷ್ಮವಾದ ರೋಮಪಂಕ್ತಿಯಿಂದ ಕೂಡಿದ, ಮನೋಹರವಾದ ದಂತಪಂಕ್ತಿಯುಳ್ಳ, ಪುಟಕ್ಕೆ ಹಾಕಿದ ಚಿನ್ನದಂತೆ ಶರೀರಕಾಂತಿಯುಳ್ಳವಳಾಗಿದ್ದಳು. ಅವಳ ಹೆಸರು ರತಿದೇವಿ. ಅವಳು ವಿರಕ್ತರಾದ ಮುನಿಗಳನ್ನೂ ಮೋಹಗೊಳಿಸುವಷ್ಟು ಸುಂದರಿಯಾಗಿದ್ದಳು.
ಅವಳನ್ನು ನೋಡಿದ ಮರೀಚಿ ಮೊದಲಾದ ಆರು ಜನ ಮುನಿಗಳು ತಮ್ಮ ಇಂದ್ರಿಯಗಳನ್ನು ನಿಗ್ರಹಿಸಿ ಕಾಮವಿಕಾರವನ್ನು ತಡೆದರು. ಕ್ರತುಮುನಿ, ವಸಿಷ್ಠ , ಪುಲಸ್ತ್ಯ, ಅಂಗಿರಸ್ಸು ಕಾಮವಿಕಾರಕ್ಕೆ ತುತ್ತಾಗಿ, ಅವರ ವೀರ್ಯವು ಭೂಮಿಯಲ್ಲಿ ಬಿದ್ದಿತು. ಆ ವೀರ್ಯದಿಂದ ಸೋಮಪರು, ಆಜ್ಯಪರು, ಸುಕಾಲಿ ಮತ್ತು ಹವಿಷ್ಮಂತ ಎಂಬ ನಾಲ್ಕು ವಿಧದ ಕೆಲವು ಪಿತೃದೇವತೆಗಳು ಜನಿಸಿದರು. ಇವರೆಲ್ಲರೂ ಶ್ರಾದ್ಧದಲ್ಲಿನ ಕವ್ಯ(ಹವಿಸ್ಸು)ವನ್ನು ಸೇವಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.