ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನ ವರಿಸಿದ ದಾಕ್ಷಾಯಿಣಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 15 ಮೇ 2022, 19:30 IST
Last Updated 15 ಮೇ 2022, 19:30 IST
ವೇದವ್ಯಾಸರ ಶಿವಪುರಾಣಸಾರ
ವೇದವ್ಯಾಸರ ಶಿವಪುರಾಣಸಾರ   

ರುದ್ರಸಂಹಿತೆಯಲ್ಲಿ ಎರಡನೇ ಖಂಡವಾದ ಸತೀಖಂಡವು ದಕ್ಷಯಜ್ಞನ ಮಗಳಾದ ದಾಕ್ಷಾಯಿಣಿ ಅಥವಾ ಸತೀಕಥೆಯಾಗಿದೆ. ಇದರ ಮೊದಲ ಅಧ್ಯಾಯವನ್ನು ವ್ಯಾಸರ ಪರಮ ಶಿಷ್ಯ ಸೂತಮುನಿಯು ಬ್ರಹ್ಮ ತನ್ನ ಮಗ ನಾರದನಿಗೆ ಹೇಳಿದ ಕಥೆಯಂತೆ ಪ್ರಯಾಗದ ಋಷಿಗಳಿಗೆ ತಿಳಿಸುತ್ತಾನೆ.

ನಾರದಮುನಿಯು ‘ಓ ಬ್ರಹ್ಮದೇವನೇ ! ಶಿವಪಾರ್ವತಿಯರ ಅದ್ಭುತವಾದ ಅನೇಕ ಕಥೆಗಳನ್ನು ನನಗೆ ಹೇಳಿರುವೆ. ನಿನ್ನ ಮುಖಕಮಲದಿಂದ ಹೊರಡುವ ಉತ್ತಮವಾದ ಶಿವಕಥೆಯನ್ನು ಕೇಳಿದಷ್ಟೂ ನನಗೆ ತೃಪ್ತಿಯೇ ಆಗುತ್ತಿಲ್ಲ. ಆದುದರಿಂದ ಈಗ ಮತ್ತಷ್ಟು ಶಿವಕಥೆಯನ್ನು ಹೇಳು. ಶಿವನ ಪೂಣಾರ್ಣಾಂಶಸ್ವರೂಪನೆಂದು ಯಾವ ರುದ್ರನನ್ನು ವರ್ಣಿಸಿರುವೆಯೋ, ಆ ಕೈಲಾಸವಾಸಿ ರುದ್ರನು ಸದಾ ಕಾಮಿನೀ ಮುಂತಾದ ವಿಷಯಗಳಲ್ಲಿ ಅಭಿಲಾಷೆಯಿಲ್ಲದ ಯೋಗಿ. ವಿಕಾರವಿಲ್ಲದ ಶುದ್ಧ ಮನಸ್ಸಿನ ಮಹಾ ವಿರಕ್ತ. ಯಾವಾಗಲೂ ಆತ್ಮಾರಾಮನಾಗಿ ವಿಹರಿಸುತ್ತಲಿರುವನು ಎಂದು ಹೇಳಿರುವೆ.’

‘ವಿಷ್ಣುವಿನ ಪ್ರಾರ್ಥನೆಯಂತೆ ರುದ್ರದೇವ ಮಂಗಳರೂಪಳು, ತನ್ನನ್ನೇ ಕುರಿತು ತಪಸ್ಸನ್ನಾಚರಿಸುತ್ತಿರುವಳೂ ಆದಂತಹ ಸತೀದೇವಿಯನ್ನು ಪ್ರೀತಿ ಯಿಂದ ಮದುವೆಯಾಗಿ ಗ್ರಹಸ್ಥಾಶ್ರಮವನ್ನು ಸ್ವೀಕರಿಸಿದ ಎಂಬುದನ್ನು ಕೇಳಿದ್ದೇನೆ. ಮೊದಲಿಗೆ ರುದ್ರನು ದಕ್ಷಪುತ್ರಿಯಾದ ಸತಿಯನ್ನು ವರಿಸಿದ. ಸತಿ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿದಳು. ನಂತರ ಹಿಮವಂತನ ಮಗಳು ಪಾರ್ವತಿಯಾಗಿ ಜನಿಸಿ, ಘೋರ ತಪಸ್ಸು ಮಾಡಿ ಶಿವನನ್ನು ಮದುವೆಯಾದಳು ಎಂಬುದನ್ನು ಸಹ ಕೇಳಿರುವೆ. ಆದರೆ ಸತಿಯು ಒಂದೇ ಶರೀರದಿಂದ ದಕ್ಷ ಮತ್ತು ಹಿಮವಂತರಿಬ್ಬರಿಗೂ ಹೇಗೆ ಮಗಳಾಗಿ ಜನಿಸಿದಳು? ಸತೀದೇವಿಯು ಪಾರ್ವತಿಯಾಗಿ ಜನಿಸಿ ಮತ್ತೆ ಶಿವನನ್ನು ಹೇಗೆ ಮದುವೆಯಾದಳು? ಇದೆಲ್ಲವನ್ನೂ ನನಗೆ ಹೇಳು’ ಎಂದು ಕೋರುತ್ತಾನೆ.

ADVERTISEMENT

‘ಎಲೈ ವತ್ಸ! ಶುಭವಾದ ಶಿವಪಾರ್ವತಿಯರ ಕಥೆಯನ್ನು ಹೇಳುವೆನು ಕೇಳು. ಅದನ್ನು ಕೇಳಿದರೆ ಜನ್ಮ ಸಾರ್ಥಕವಾಗುವುದು’ಚಎಂದು ಶಿವನ ಕಥೆಯನ್ನು ಬ್ರಹ್ಮ ತನ್ನ ಮಗ ನಾರದನಿಗೆ ಹೇಳತೊಡಗುತ್ತಾನೆ.

ಬಹಳ ಹಿಂದೆ ನನ್ನ ಪುತ್ರಿಯಾದ ಸಂಧ್ಯಾದೇವಿಯನ್ನು ನೋಡಿ ಮನ್ಮಥಬಾಣಗಳಿಂದ ಪೀಡಿತನಾಗಿ ಚಿತ್ತಚಾಂಚಲ್ಯ ಹೊಂದಿದೆ. ಇದರಿಂದ ನನ್ನ ಸುತರಾದ ದಕ್ಷಬ್ರಹ್ಮ ಮೊದಲಾದವರೂ ಮನೋವಿಕಾರವುಳ್ಳವರಾದರು. ವೇದವಾದಿಯಾದ ನಾನು ತಿಳಿವಳಿಕೆಯಿಲ್ಲದೆ ಸ್ವಪುತ್ರಿಯಲ್ಲಿ ಮೋಹ ಗೊಳ್ಳುವಂತಹ ಅಕಾರ್ಯವನ್ನು ಮಾಡಿದೆ. ಆಗ ಜಗತ್ರಭುವಾದ ರುದ್ರ ಬಂದು, ನನ್ನನ್ನೂ ಮತ್ತು ನನ್ನ ದಕ್ಷಾದಿ ಪುತ್ರರಿಗೆ ಬುದ್ಧಿ ಹೇಳಿ, ಧರ್ಮವನ್ನುಪದೇಶಿಸಿ ತನ್ನ ಸ್ಥಾನಕ್ಕೆ ತೆರಳಿದ.

ಆಗ ನಾನು ಶಿವಮಾಯೆಯಿಂದ ಮೋಹಿತನಾಗಿದ್ದರಿಂದ ಕೋಪಗೊಂಡೆ. ಶಿವನನ್ನು ಹೇಗಾದರೂ ಮೋಹಗೊಳಿಸಬೇಕೆಂದು ನನ್ನ ಪುತ್ರರಾದ ದಕ್ಷ ಮತ್ತಿತರರೊಡನೆ ಆಲೋಚಿಸಿ, ಅನೇಕ ಉಪಾಯಗಳನ್ನು ಮಾಡಿದೆ. ನನ್ನ ಪುತ್ರರಾದ ದಕ್ಷಾದಿಗಳೂ ಪರಮೇಶ್ವರನಾದ ರುದ್ರನನ್ನು ಮೋಹಗೊಳಿಸಲು ಅನೇಕ ಉಪಾಯಗಳನ್ನು ಮಾಡಿದರು. ಆದರೆ ಆ ಉಪಾಯಗಳೆಲ್ಲವೂ ನಿಷ್ಫಲವಾದವು. ಆಗ ನಾನು ಹರಿಯನ್ನು ಸ್ಮರಿಸಿದಾಗ ಶಿವಭಕ್ತನೂ ಬುದ್ಧಿಶಾಲಿಯೂ ಆದ ಹರಿ ಬಂದು, ನನಗೂ ಮತ್ತು ನನ್ನ ಪುತ್ರರಾದ ದಕ್ಷಾದಿಗಳಿಗೂ ಬುದ್ಧಿ ಹೇಳಿದ. ಶಿವನ ವಿರುದ್ಧ ಷಡ್ಯಂತರ ಮಾಡಬಾರದೆಂದು ಚೆನ್ನಾಗಿ ಉಪದೇಶ ಮಾಡಿದ. ಹರಿಯು ಶಿವಸ್ವರೂಪವನ್ನು ನನಗೆ ಮನದಟ್ಟಾಗುವಂತೆ ಉಪದೇಶಿಸಿದ್ದರಿಂದ ಶಿವನ ಮೇಲೆ ನನಗಿದ್ದ ದ್ವೇಷ ಹೋಯಿತು. ಆದರೆ ಶಿವನನ್ನು ಮೋಹ ಗೊಳಿಸುವ ಹಠ ಮಾತ್ರ ಹೋಗಲಿಲ್ಲ. ಇದಕ್ಕಾಗಿ ನಾನು ಆದಿಶಕ್ತಿಯನ್ನು ಪೂಜಿಸಿ ಒಲಿಸಿಕೊಂಡೆ. ಆ ದೇವಿಯ ಅನುಗ್ರಹದಿಂದ ನನ್ನ ಪುತ್ರನಾದ ದಕ್ಷಬ್ರಹ್ಮನ ಪತ್ನಿಯಾದ ವೀರಿಣೀದೇವಿಯಲ್ಲಿ ಶಿವನನ್ನು ಮೋಹಗೊಳಿಸುವ ಆದಿಶಕ್ತಿ ಜನಿಸುವಂತೆ ಮಾಡಿದೆ.

ಆದಿಶಕ್ತಿ ದೇವಿ ತನ್ನ ಭಕ್ತರ ಹಿತ ಕಾಪಾಡಲು ದಕ್ಷಪುತ್ರಿಯಾಗಿ ಜನಿಸಿದಳು. ಮಹಾ ವಿರಾಗಿಯಾದ ಶಿವನನ್ನು ಒಲಿಸಿಕೊಳ್ಳಲು ಅಸಾಧ್ಯವಾದ ತಪಸ್ಸನ್ನಾಚರಿಸಿ, ರುದ್ರನ ಪತ್ನಿಯಾದಳು. ಜಗತ್ಪ್ರಭುವಾದ ರುದ್ರ ತನ್ನ ಪತ್ನಿ ಸತೀದೇವಿಯೊಂದಿಗೆ ಕೈಲಾಸಗಿರಿಯಲ್ಲಿ ವಾಸಿಸುತ್ತಾ, ಲೀಲಾವಿನೋದಗಳಿಂದ ವಿಹರಿಸುತ್ತಲಿದ್ದ. ಸತೀದೇವಿಯೊಡನೆ ಶಿವ ನಿರ್ವಿಕಾರವಾಗಿ ಸುಖಭೋಗ ವನ್ನನುಭವಿಸುತ್ತಾ, ಅನೇಕ ವರ್ಷಗಳ ಕಾಲ ಸುಖವಾಗಿ ಕಳೆದ.⇒l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.