ADVERTISEMENT

ನಿಜವಾದ ವಿದ್ಯೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 24 ಆಗಸ್ಟ್ 2021, 7:19 IST
Last Updated 24 ಆಗಸ್ಟ್ 2021, 7:19 IST
ಓದು
ಓದು   

ಕಪಾಲಸ್ಥಂ ಯಥಾ ತೋಯಂ ಶ್ವದೃತೌ ಚ ಯಥಾ ಪಯಃ ।

ಹೇಯಂ ದುಃಸ್ಥಾನದೋಷೇಣ ವೃತ್ತಹೀನಂ ತಥಾ ಶ್ರುತಮ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ತಲೆಬುರುಡೆಯಲ್ಲಿರುವ ನೀರು, ನಾಯಿಯ ಚರ್ಮದಲ್ಲಿ ತಂದಿರುವಂಥ ಹಾಲು – ಇಂಥವು ಸ್ಥಾನದೋಷದಿಂದ ಹೇಗೆ ಅಸಹ್ಯವೋ ಅಥವಾ ತ್ಯಾಜ್ಯವೋ ಅಂತೆಯೇ ನಡತೆ ಇಲ್ಲದವನ ವಿದ್ಯೆಯೂ ಹೇಯವಾಗುತ್ತದೆ.’

ಯಾವುದೂ ತನ್ನಷ್ಟಕ್ಕೆ ತಾನೆ ಮೌಲ್ಯವನ್ನು ಪಡೆಯುವುದಿಲ್ಲ; ಆ ವಸ್ತು ಅಥವಾ ವಿಷಯ ನಿಂತಿರುವ ದೇಶ–ಕಾಲಗಳ ಮರ್ಯಾದೆಯನ್ನು ಅನುಸರಿಸಿಯೇ ಅವುಗಳ ಮೌಲ್ಯ ಸಿದ್ಧವಾಗುವುದು ಎನ್ನುವುದು ಸುಭಾಷಿತದ ನಿಲವು.

ನೀರು ನಮಗೆ ಜೀವದ್ರವ್ಯ. ನೀರಿಲ್ಲದೆ ನಮ್ಮ ಪ್ರಾಣವೇ ಉಳಿಯದು. ಹೀಗೆಂದು ನಾವು ಎಲ್ಲೆಲ್ಲೋ ನಿಂತಿರುವ ನೀರನ್ನು ಅನಾಮತ್ತಾಗಿ ಕುಡಿಯುತ್ತೇವೆಯೋ? ಸುಭಾಷಿತ ಅದಕ್ಕೊಂದು ಉದಾಹರಣೆಯನ್ನು ನೀಡುತ್ತಿದೆ: ತಲೆಬುರುಡೆಯಲ್ಲಿರುವ ನೀರನ್ನು ನಾವು ಕುಡಿಯುತ್ತೇವೆಯೆ?

ಲೋಟದಲ್ಲೋ ಬಾಟಲಿಯಲ್ಲೋ ನೀರನ್ನು ಕುಡಿಯುತ್ತೇವೆ. ತಲೆಬುರುಡೆ ಎಂಬುದು ಅಪವಿತ್ರ ಎಂದಷ್ಟೆ ಅಲ್ಲ, ಅಸಹ್ಯಕರವೂ ಜುಗುಪ್ಸಾಹಕರವೂ ಹೌದು. ಮನಸ್ಸಿಗೆ ಅಹಿತವಾದ ಕೆಲಸವನ್ನು ನಾವು ಯಾರೂ ಮಾಡುವುದಿಲ್ಲಷ್ಟೆ. ನೀರು ಅನಿವಾರ್ಯ, ಹೌದು. ಆದರೆ ‘ಅದು ಎಲ್ಲಿಯ ನೀರು‘ ಎಂಬುದನ್ನೇ ಅವಲಂಬಿಸಿಯೇ ನಮ್ಮ ಸ್ವೀಕಾರಬುದ್ಧಿ ಕೆಲಸ ಮಾಡುತ್ತದೆ.

ಇದೇ ರೀತಿ ಇನ್ನೊಂದು ಉದಾಹರಣೆಯನ್ನೂ ಸುಭಾಷಿತ ನೀಡಿದೆ. ಹಾಲು ನಮಗೆ ಕುಡಿಯಲೂ ಬೇಕು, ದೇವರ ಅಭಿಷೇಕಕ್ಕೂ ಬೇಕು. ಆದರೆ ನಾವು ಎಲ್ಲ ಹಾಲನ್ನೂ ಕುಡಿಯುವುದಿಲ್ಲ. ಮಾತ್ರವಲ್ಲ, ನಾವು ಬಳಸುವ ಹಸುವಿನ ಹಾಲನ್ನೂ ಹೇಗೆಂದರೆ ಹಾಗೆ ಬಳಸುವುದಿಲ್ಲ. ನಾಯಿಯ ಚರ್ಮದ ಬ್ಯಾಗಿನಲ್ಲಿ ತಂದು ಹಾಲನ್ನು ಕುಡಿಯಲು ಮನಸ್ಸು ಒಪ್ಪುತ್ತದೆಯೆ?

ಸುಭಾಷಿತ ಇಷ್ಟೆಲ್ಲ ಹೇಳುತ್ತಿರುವುದು ವಿದ್ಯೆಗೂ ವ್ಯಕ್ತಿತ್ವಕ್ಕೂ ಇರುವ ಸಂಬಂಧವನ್ನು ನಿರೂಪಿಸಲು. ಶಿಕ್ಷಣವನ್ನು ಪಡೆದವರೆಲ್ಲರೂ ವಿದ್ಯಾವಂತರಲ್ಲ ಎಂದು ಅದು ಹೇಳುತ್ತಿದೆ. ಮೌಲ್ಯಗಳನ್ನು ರೂಢಿಸಿಕೊಂಡವನ ವಿದ್ಯೆಗೆ ಮಾತ್ರವೇ ಮನ್ನಣೆ ದೊರೆಯುತ್ತದೆಯಷ್ಟೆ. ಅಯೋಗ್ಯನೊಬ್ಬ ಪಡೆದ ಶಿಕ್ಷಣಕ್ಕೆ, ಪದವಿಪತ್ರಗಳಿಗೆ ಏನೂ ಬೆಲೆಯಿರದು. ಡಿಗ್ರಿಗಳನ್ನು ಸಂಪಾದಿಸಿದವನು ಬಂದೂಕನ್ನು ಹಿಡಿದು, ಜನರನ್ನು ವಿನಾಕಾರಣ ಕೊಲ್ಲುತ್ತಿದ್ದರೆ ಅಂಥವನನ್ನು ವಿದ್ಯಾವಂತ ಎನ್ನಲಾಗುತ್ತದೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.