ADVERTISEMENT

ಹೈಪರ್‌ಲೂಪ್‌ ಮಿಂಚಿನ ಸಂಚಾರ: ಬೆಂಗಳೂರು, ಮುಂಬೈಗೆ ಬರಲಿದೆ ಭವಿಷ್ಯದ ಸಾರಿಗೆ

ಮೊದಲ ಪ್ರಯಾಣಿಕ ಪರೀಕ್ಷೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 19:30 IST
Last Updated 11 ನವೆಂಬರ್ 2020, 19:30 IST
ಕೊಳವೆಯೊಳಗೆ ಪಾಡ್ ಕಳುಹಿಸುತ್ತಿರುವ ಸಿಬ್ಬಂದಿ
ಕೊಳವೆಯೊಳಗೆ ಪಾಡ್ ಕಳುಹಿಸುತ್ತಿರುವ ಸಿಬ್ಬಂದಿ   
""
""
""
""
""

ಅತಿವೇಗದ ಸಾರಿಗೆ ಎಂಬ ಶ್ರೇಯ ಈಗ ಇರುವುದು ಬುಲೆಟ್ ರೈಲಿಗೆ. ನಮ್ಮ ದೇಶದಲ್ಲಿ ಅದು ಇನ್ನೂ ಶೈಶವಾವಸ್ಥೆಯಲ್ಲಿ ಇರುವಾಗಲೇ ಅದರ ವೇಗವನ್ನೂ ಮೀರಿಸುವ ‘ಹೈಪರ್‌ಲೂಪ್’ ಎಂಬ ಭವಿಷ್ಯದ ಸಾರಿಗೆ ವ್ಯವಸ್ಥೆ ಪ್ರಯಾಣಿಕರ ಬಳಕೆಗೆ ಸನ್ನಿಹಿತವಾಗುತ್ತಿದೆ.

ವೇಗದ ಸಾರಿಗೆಯ ಕನಸು ಕಂಡಿದ್ದು ಇಲಾನ್ ಮಸ್ಕ್ ಎಂಬ ಯುವ ಉದ್ಯಮಿ. ಸ್ಪೇಸ್‌ ಎಕ್ಸ್, ಟೆಸ್ಲಾ ಮೊದಲಾದ ಅತ್ಯಾಧುನಿಕ ಸಂಸ್ಥೆಗಳನ್ನು ಕಟ್ಟಿರುವ ಮಸ್ಕ್‌, ಯಾವುದೇ ಅಡೆತಡೆ ಇಲ್ಲದೆ ಸಂಚರಿಸುವ ವ್ಯವಸ್ಥೆಯ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದೇ ಹೈಪರ್‌ಲೂಪ್ ಅಸ್ತ್ರ. ಆದರೆ, ಹೈಪರ್‌ಲೂಪ್ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಉದ್ಯಮಿ ರಿಚರ್ಡ್ ಬ್ರಾನ್ಸನ್‌ ಅವರ ‘ವರ್ಜಿನ್ ಹೈಪರ್‌ಲೂಪ್’ ಸಂಸ್ಥೆ ಮುಂಚೂಣಿಗೆ ಬಂದಿದ್ದು, ಹೊಸ ಮಜಲಿಗೆ ಕಾಲಿರಿಸಿದೆ. ಪ್ರಯಾಣಿಕ ಸಂಚಾರ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದೆ.

ಅಮೆರಿಕದಲ್ಲಿ ನಡೆಸಿದ ಪ್ರಯಾಣಿಕ ಪರೀಕ್ಷೆಯಲ್ಲಿ ವಿನೂತನ ತಂತ್ರಜ್ಞಾನ ಆಧರಿತ ಸಾರಿಗೆ ವ್ಯವಸ್ಥೆ ಯಶ ಕಂಡಿದೆ. ಲಾಸ್ ಏಂಜಲೀಸ್‌ ಸಮೀಪದ ನೆಲೆಯಲ್ಲಿ ಪರೀಕ್ಷಾರ್ಥವಾಗಿ 500 ಮೀಟರ್ ಉದ್ದದ ಸುರಂಗವನ್ನು ನಿರ್ಮಿಸಲಾಗಿದೆ. 15 ಸೆಕೆಂಡ್‌ಗಳಲ್ಲಿ ಈ ದೂರವನ್ನು ಕ್ರಮಿಸುವ ಮೂಲಕ ಗಂಟೆಗೆ 160 ಕಿಲೋಮೀಟರ್ ವೇಗವನ್ನು ಹೈಪರ್‌ಲೂಪ್ ದಾಖಲಿಸಿತು.

ADVERTISEMENT

ಏನಿದು ಹೈಪರ್‌ಲೂಪ್

ನೆಲದಡಿ ಅಥವಾ ಸೇತುವೆಯ ಮೇಲೆ ನಿರ್ಮಿಸಿದ ಸುರಂಗದಲ್ಲಿ ಸಾಗುವ ಟ್ಯೂಬ್ ಅಥವಾ ಪಾಡ್‌ನಲ್ಲಿ ಪ್ರಯಾಣಿಕರು ಕುಳಿತು ಸಂಚರಿಸುವ ವ್ಯವಸ್ಥೆಯೇ ಹೈಪರ್‌ಲೂಪ್‌. ನಮ್ಮ ಮೆಟ್ರೊದಲ್ಲಿ ಬಳಕೆಯಲ್ಲಿರುವ ಬೋಗಿಯನ್ನೇ ಇದು ಬಹುತೇಕ ಹೋಲುತ್ತದೆ. ಆದರೆ ಒಳಾಂಗಣ ವಿನ್ಯಾಸ, ತಂತ್ರಜ್ಞಾನ ಭಿನ್ನ. ಅಯಸ್ಕಾಂತೀಯ ಶಕ್ತಿ, ಗಾಳಿಯ ಕಡಿಮೆ ಒತ್ತಡದಿಂದ ಪಾಡ್‌ ಬಹುತೇಕ ತೇಲುತ್ತಾ ಸಂಚರಿಸುತ್ತದೆ.

ಸಾಮರ್ಥ್ಯ: ಗಂಟೆಗೆ ಗರಿಷ್ಠ 1,300 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಂದು ಪಾಡ್‌ನಲ್ಲಿ 28 ಜನರು ಪ್ರಯಾಣಿಸಬಹುದು. 15ರಿಂದ 18 ಅಡಿ ಉದ್ದದ ಒಂದು ಪಾಡ್ 2.5 ಟನ್ ತೂಕ ಹೊಂದಿರುತ್ತದೆ. ಪಾಡ್‌ನ ಒಳಗೆ ಕುಳಿತು ನಡೆಸುವ ಪ್ರಯಾಣ ಆರಾಮದಾಯಕ, ಆಪ್ತ ಎನಿಸುವಂತೆ ವಿನ್ಯಾಸ ಮಾಡಲಾಗಿದೆ.

ವೇಗದ ಸರದಾರ: ಅತಿ ವೇಗದ ಪ್ರಯಾಣದಲ್ಲಿ ಸುರಕ್ಷೆ, ಆರಾಮ ಮತ್ತು ಘರ್ಷಣೆರಹಿತತೆಯೇ ಹೈಪರ್‌ಲೂಪ್ ಸೃಷ್ಟಿ ಹಿಂದಿನ ಉದ್ದೇಶ. ಉದಾಹರಣೆಗೆ ಅಮೆರಿಕದ ಉತ್ತರ ಕರೋಲಿನಾದ ರೇಲಿ ಮತ್ತು ಡರ್ಹಾಮ್‌ ನಡುವಿನ 46 ಕಿಲೋಮೀಟರ್ ದೂರವನ್ನು ಹೈಪರ್‌ಲೂಪ್ ಕೇವಲ 9 ನಿಮಿಷಗಳಲ್ಲಿ ಕ್ರಮಿಸುತ್ತದೆ. ರಸ್ತೆ ಮೂಲಕ ಹೋದರೆ ಈ ದೂರ ಕ್ರಮಿಸಲು 40 ನಿಮಿಷ ಹಿಡಿಯುತ್ತದೆ. ನ್ಯೂಯಾರ್ಕ್‌ನಿಂದ ವಾಷಿಂಗ್ಟನ್ ನಡುವಿನ ಸುಮಾರು 300 ಕಿಲೋಮೀಟರ್ ದೂರವನ್ನು ಕೇವಲ 29 ನಿಮಿಷಗಳಲ್ಲಿ ಕ್ರಮಿಸಲಿದೆ ಎಂಬುದು ಈ ತಂತ್ರಜ್ಞಾನದ ಹೆಗ್ಗಳಿಕೆ.

ವರ್ಜಿನ್ ಹೈಪರ್‌ಲೂಪ್ ಪರೀಕ್ಷೆ: ಕಳೆದ ಭಾನುವಾರ ವರ್ಜಿನ್ ಸಂಸ್ಥೆ ನಡೆಸಿದ ಮೊದಲ ಪ್ರಯಾಣಿಕ ಪರೀಕ್ಷೆ ಅಷ್ಟು ಸುಲಭಕ್ಕೆ ದಕ್ಕಿದ್ದಲ್ಲ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸಬಹುದೇ ಎಂಬು ದನ್ನು ಖಚಿತಪಡಿಸಿಕೊಳ್ಳಲು 400ಕ್ಕೂ ಹೆಚ್ಚು ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪಾಡ್‌ನಲ್ಲಿ ಕುಳಿತ ಪ್ರಯಾಣಿಕರಿಗೆ ವೇಗ ಹಾಗೂ ಆರಾಮದ ಅನುಭೂತಿ ಸಿಕ್ಕಿದೆ ಎಂದು ವರ್ಜಿನ್ ಹೈಪರ್‌ಲೂಪ್ ಕಂಪನಿ ಹೇಳಿಕೊಂಡಿದೆ.

‘ವಿಮಾನ ಟೇಕ್‌ಆಫ್ ಆದಾಗ ಆಗುವ ಅನುಭವವೇ ಹೈಪರ್‌ಲೂಪ್ ಟೇಕ್‌ಆಫ್ ಆದಾಗ ಉಂಟಾಗುತ್ತದೆ. ಶಾಂಘೈನ ಹೈಸ್ಪೀಡ್ ರೈಲುಗಳಲ್ಲಿ ಬಳಸಾಗುತ್ತಿರುವ ಮ್ಯಾಗ್ನೆಟಿಕ್ ಲೆವಿಟೇಷನ್ ತಂತ್ರಜ್ಞಾನಕ್ಕೆ ಧನ್ಯವಾದಗಳು’ ಎಂದು ಸಂಸ್ಥೆಯ ಸಹಸ್ಥಾಪಕ ಜೀಗೆಲ್ ಹೇಳಿದ್ದಾರೆ. ‘ಹೈಪರ್‌ಲೂಪ್ ಎಷ್ಟು ಸುರಕ್ಷಿತ ಎಂಬುದಕ್ಕೆ ಇಂದಿನ ಪ್ರಾಯೋಗಿಕ ಪರೀಕ್ಷೆಯ ಮೂಲಕ ಉತ್ತರ ನೀಡಿದ್ದೇವೆ ಎಂದು ಸಂಸ್ಥೆಯ ಸಿಇಒ ಜೇ ವಾಲ್ಡರ್ ಹೇಳಿದ್ದಾರೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದು, ಅದನ್ನು ಹೊರಗಿನ ಸಂಸ್ಥೆಯಿಂದ ಪ್ರಮಾಣೀಕರಿಸಲೂ ಸಂಸ್ಥೆ ಬದ್ಧವಾಗಿದೆ’ ಎಂದವರು ತಿಳಿಸಿದ್ದಾರೆ. ಭಾರತೀಯ ಎಂಜಿನಿಯರ್ ತನಯ್ ಮಂಜ್ರೇಕರ್ ಅವರೂ ಪ್ರಯಾಣದ ಅನುಭವ ಪಡೆದಿದ್ದಾರೆ.

ಸಂಸ್ಥೆಗಳ ಪೈಪೋಟಿ: 2012ರಿಂದಲೂ ಹೈಪರ್‌ಲೂಪ್ ವಿಧಾನದ ಸಾರಿಗೆಯನ್ನು ಅಭಿವೃದ್ಧಿಪಡಿಸಲು ನಾನಾ ಕಂಪನಿಗಳು ಪೈಪೋಟಿಗೆ ಇಳಿದು ಕೆಲಸ ಮಾಡುತ್ತಿವೆ. ಈ ಪೈಕಿ ವರ್ಜಿನ್ ಮುಂಚೂಣಿಯಲ್ಲಿದ್ದು, ಮೊದಲ ಬಾರಿಗೆ ಪ್ರಯಾಣಿಕ ಪರೀಕ್ಷೆಯನ್ನು ನಡೆಸಿದೆ. ಇಲಾನ್ ಮಸ್ಕ್ ಅವರ ಹೈಪರ್‌ಲೂಪ್ ಒನ್ ಪರೀಕ್ಷಾ ಹಂತದಲ್ಲಿದೆ. ನ್ಯೂಯಾರ್ಕ್–ಫಿಲಡೆಲ್ಫಿಯಾ–ಬಾಲ್ಟಿಮೋರ್–ವಾಷಿಂಗ್ಟನ್ ಮಾರ್ಗಕ್ಕೆ ಅನುಮೋದನೆ ಪಡೆದಿದ್ದಾಗಿ ಅವರು ತಿಳಿಸಿದ್ದರು. ಟ್ರಾನ್ಸ್‌ಪಾಡ್ ಸಂಸ್ಥೆಯು ಫ್ರಾನ್ಸ್‌ನ ಲಿಮೊಗೆಸ್‌ನಲ್ಲಿ 3 ಕಿಲೋಮೀಟರ್ ಉದ್ದದ ಟ್ರ್ಯಾಕ್ ನಿರ್ಮಿಸುತ್ತಿದೆ. ಆದರೆ ಅಭಿವೃದ್ಧಿಯಲ್ಲಿ ತೊಡಗಿದ್ದ ಅರ್ರಿವೊ ಎಂಬ ಸಂಸ್ಥೆ 2018ರಲ್ಲಿ ಬಂದ್ ಆಯಿತು. ತಂತ್ರಜ್ಞಾವನ್ನೇ ನೆಚ್ಚಿಕೊಂಡಿರುವ ಹೊಸ ತಲೆಮಾರಿನ ಈ ಸಾರಿಗೆ ವ್ಯವಸ್ಥೆಯು ವೇಗದ ಜಗತ್ತಿಗೆ ಉತ್ತರವಾಗಲಿದೆಯೇ ಎಂಬುದು ಮೂರ್ನಾಲ್ಕು ವರ್ಷಗಳಲ್ಲಿ ಸ್ಪಷ್ಟಗೊಳ್ಳಲಿದೆ.

ವರ್ಜಿನ್‌ ಹೈಪರ್‌ಲೂಪ್‌ನ ಒಳಾಂಗಣ ವಿನ್ಯಾಸ

ಮುಂಬೈ, ಬೆಂಗಳೂರಿನಲ್ಲೂ ಹೈಪರ್‌ಲೂಪ್

ಹೈಪರ್‌ಲೂಪ್‌ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರು, ಮುಂಬೈ, ಚಂಡೀಗಡ, ವಿಜಯವಾಡ ಮೊದಲಾದ ಕಡೆ ನಿರ್ಮಾಣವಾಗುವ ಸಾಧ್ಯತೆಯಿದೆ.ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೈಪರ್‌ಲೂಪ್ ಓಡಿಸುವ ಸಂಬಂಧ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ತಿಂಗಳಷ್ಟೇ ವರ್ಜಿನ್ ಸಂಸ್ಥೆ ಜೊತೆ ಒಪ್ಪಂದ ಏರ್ಪಟ್ಟಿದೆ.

ಮುಂಬೈ ಹಾಗೂ ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್‌ ಸಂಚರಿಸುವ ಎಲ್ಲ ಸಾಧ್ಯತೆಗಳಿವೆ. ಕಳೆದ ವರ್ಷ ಆರಂಭಿಕವಾಗಿ, ₹5,000 ಕೋಟಿ ವೆಚ್ಚದಲ್ಲಿ 11.8 ಕಿ.ಮೀ. ದೂರದ ಹೈಪರ್‌ಲೂಪ್‌ ವ್ಯವಸ್ಥೆ ನಿರ್ಮಾಣ ಯೋಜನೆಯ ಒಪ್ಪಂದ ಆಗಿದೆ.2029ರ ವೇಳೆಗೆ ಹೈಪರ್‌ಲೂಪ್ ಸಾಕಾರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ವರ್ಜಿನ್ ಸಂಸ್ಥೆಯು ಪಂಜಾಬ್ ಸರ್ಕಾರದ ಜತೆಗೂ ಒಪ್ಪಂದ ಮಾಡಿಕೊಂಡಿದ್ದು ಚಂಡೀಗಡ ಮತ್ತು ಅಮೃತಸರದ ಮಧ್ಯೆ ಸಂಚರಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಅನುಕೂಲಗಳು

* ಭೂಮಿಯಲ್ಲಿ ವಿಮಾನದ ವೇಗ

* ಕಡಿಮೆ ಇಂಧನ ಸಾಕು

* ದೀರ್ಘಾವಧಿಯಲ್ಲಿ ಕಡಿಮೆ ಖರ್ಚಿನ ಸಾರಿಗೆ ವ್ಯವಸ್ಥೆ

* ಹವಾಮಾನ ವೈಪರೀತ್ಯದ ಗೊಡವೆ ಇಲ್ಲ

* ಭೂಕಂಪ ನಿರೋಧಕ ತಂತ್ರಜ್ಞಾನ

* ಅತ್ಯಂತ ಸುರಕ್ಷಿತ ಸಾರಿಗೆ ವ್ಯವಸ್ಥೆ

ಲಾಸ್‌ವೆಗಾಸ್‌ನಲ್ಲಿರುವ ವರ್ಜಿನ್ ಸಂಸ್ಥೆಯ ಪರೀಕ್ಷಾ ಕೇಂದ್ರ

ಸವಾಲುಗಳು

* ಆರಂಭಿಕ ಯೋಜನಾ ವೆಚ್ಚ ತೀರಾ ದುಬಾರಿ

* ನಿರ್ವಾತ ಕೊಳವೆ ನಿರ್ಮಾಣಕ್ಕೆ ಹೆಚ್ಚಿನ ತಾಂತ್ರಿಕ ಕೌಶಲ ಅಗತ್ಯ. ನಿರ್ವಹಣೆಯೂ ಕಷ್ಟ

* ಅತಿವೇಗದಲ್ಲಿ ಅವಘಡ ಸಂಭವಿಸಿದರೆ ಪ್ರಾಣಾಪಾಯ ಖಚಿತ

* ಸೀಮಿತ ಸ್ಥಳಾವಕಾಶದ ಕಾರಣ ಜನರು ಆರಾಮವಾಗಿ ಕುಳಿತುಕೊಳ್ಳುವುದು ಕಷ್ಟ

* ಟ್ರ್ಯಾಕ್ ನಿರ್ಮಾಣಕ್ಕೆ ಉಕ್ಕು ಬಳಕೆ ಮಾಡಲಾಗುತ್ತಿದ್ದು, ವಾತಾವರಣದ ಉಷ್ಣತೆಗೆ ತಕ್ಕಂತೆ ಅದರ ಆಕಾರ ಬದಲಾಗಿ ಅಪಾಯವೂ ಎದುರಾಗಬಹುದು

ಖರ್ಚು ಎಷ್ಟು

ಹೈಪರ್‌ಲೂಪ್ ಎಂದರೆ ಸುಮ್ಮನೆ ಆಗುವಂತಹದ್ದಲ್ಲ. ಭೂಸ್ವಾಧೀನ, ಕೊಳವೆ ಮಾರ್ಗ, ಪಾಡ್‌ ನಿರ್ಮಾಣ, ಒಳಾಂಗಣ ವಿನ್ಯಾಸ, ಇಂಧನ, ತಂತ್ರಜ್ಞಾನ, ಸಿಬ್ಬಂದಿ–ಹೀಗೆ ಖರ್ಚಿನ ದೊಡ್ಡ ಪಟ್ಟಿಯೇ ಇದೆ. ಆದರೆ ಹೈಸ್ಪೀಡ್ ರೈಲುಗಳಿಂಗಿತ ಕಡಿಮೆ ವೆಚ್ಚದಲ್ಲಿ ಹೈಪರ್‌ಲೂಪ್ ನಿರ್ಮಿಸಬಹುದು ಎಂಬುದು ಸಂಸ್ಥೆಗಳ ವಾದ. ಹೈಸ್ಪೀಡ್ ರೈಲು ನಿರ್ಮಾಣ ವೆಚ್ಚದ ಹತ್ತನೇ ಒಂದು ಭಾಗ ಸಾಕು ಎಂದುಎಲಾನ್‌ ಮಸ್ಕ್ ಹೇಳುತ್ತಾರೆ. ಆದರೆ ಟ್ರಾನ್ಸ್‌ಪಾಡ್ ಸಂಸ್ಥೆಯು ಹೈಸ್ಪೀಡ್ ರೈಲಿನ ಅರ್ಧದಷ್ಟು ಹಣ ಬೇಕು ಎಂಬ ವಾದ ಮಂಡಿಸಿದೆ.

ಭಾರಿ ವೇಗದಿಂದಾಗಿ ತಲೆ ಸುತ್ತು

‘ಹೈಪರ್‌ಲೂಪ್‌ನಲ್ಲಿ ಪ್ರಯಾಣ ಮಾಡುವುದರಿಂದ, ಪ್ರಯಾಣಿಕರ ರಕ್ತಚಲನೆಯಲ್ಲಿ ಸ್ವಲ್ಪ ಏರುಪೇರಾಗುತ್ತದೆ’ ಎಂದು ಅಧ್ಯಯನ ವರದಿ ಹೇಳಿದೆ. ಹೈಪರ್‌ಲೂಪ್ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದ್ದು ಮತ್ತು ಈ ಕುರಿತು ಸಂಶೋಧನೆ ಆರಂಭಿಸಿದ್ದು ಇಲಾನ್‌ ಮಸ್ಕ್. ಮಸ್ಕ್ ಅವರು 2012ರಲ್ಲಿ ತಮ್ಮ ಸ್ಪೇಸ್‌ಎಕ್ಸ್‌ ಕಂಪನಿಯ ಮೂಲಕ ಹೈಪರ್‌ಲೂಪ್‌ ತಂತ್ರಜ್ಞಾನವನ್ನು ಜನರ ಮುಂದೆ ತೆರೆದಿಟ್ಟರು. ಈ ತಂತ್ರಜ್ಞಾನವನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು ಎಂದು ಹೇಳಿದರು.ಈ ಪರಿಕಲ್ಪನೆಯ ಆಧಾರದ ಮೇಲೆ ವಿಶ್ವದ ಹಲವೆಡೆ, ಹಲವು ಕಂಪನಿಗಳು ಸಂಶೋಧನೆ ಆರಂಭಿಸಿದವು. ಹೈಪರ್‌ಲೂಪ್‌ ಅನ್ನು ನಿರ್ಮಿಸುವುದರ ಬಗೆಗಿನ ತಂತ್ರಜ್ಞಾನ ಬಹುತೇಕ ಎಲ್ಲ ಕಂಪನಿಗಳಿಗೂ ಸಿಕ್ಕಿತು. ಹೀಗಾಗಿ ಪ್ರೊಟೊಟೈಪ್‌ ಹೈಪರ್‌ಲೂಪ್‌ ಅನ್ನು ಹಲವು ಕಂಪನಿಗಳು ನಿರ್ಮಿಸಿದವು.

ಹೈಪರ್‌ಲೂಪ್‌ನಲ್ಲಿ ಪಾಡ್‌ಗಳು ಗಂಟೆಗೆ ಗರಿಷ್ಠ 1,300 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ. ಇಷ್ಟು ವೇಗದಲ್ಲಿ ಪ್ರಯಾಣಿಸಿದರೆ, ಪ್ರಯಾಣಿಕರ ದೇಹದೊಳಗೆ ರಕ್ತಪರಿಚಲನೆಯಲ್ಲಿ ಏರುಪೇರಾಗುತ್ತದೆ. ಪ್ರಯಾಣದ ವೇಳೆ ತಲೆ ಸುತ್ತುತ್ತದೆ ಎಂದು ಇಲಾನ್‌ ಮಸ್ಕ್ ಅವರ ಸಂಶೋಧಕರ ತಂಡವು ಹೇಳಿತ್ತು. ಆದರೆ, ಪಾಡ್‌ಗಳ ಕಾರ್ಯಾಚರಣೆಯ ವೇಗವನ್ನು ಇಳಿಕೆ ಮಾಡುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂಬುದನ್ನು ನಂತರದ ಅಧ್ಯಯನಗಳಲ್ಲಿ ಕಂಡುಕೊಳ್ಳಲಾಯಿತು.

ಇದರ ಹೊರತಾಗಿ ಕಾರ್ಯಾಚರಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಈವರೆಗಿನ ಅಧ್ಯಯನಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.