ADVERTISEMENT

ಆಳ-ಅಗಲ | ಈಕ್ವಿಟಿ: ಭಯ ತೊರೆದರೇ ಸಣ್ಣ ಹೂಡಿಕೆದಾರರು?

ವಿಜಯ್ ಜೋಷಿ
Published 28 ಜೂನ್ 2021, 22:06 IST
Last Updated 28 ಜೂನ್ 2021, 22:06 IST
ಈಕ್ವಿಟಿ
ಈಕ್ವಿಟಿ   

ಲಾಕ್‌ಡೌನ್‌ ಜಾರಿಯಾದ ನಂತರದಲ್ಲಿ ಭಾರತದ ಷೇರು ಮಾರುಕಟ್ಟೆಗಳಲ್ಲಿ ಸಣ್ಣ ಹೂಡಿಕೆದಾರರು ಹಣ ತೊಡಗಿಸುತ್ತಿರುವುದು ಹೆಚ್ಚಾಗಿದೆ ಎಂಬ ಮಾತನ್ನು ಹಲವರು ಹೇಳಿದ್ದಾರೆ. ಈ ಮಾತಿನಲ್ಲಿ ನಿಜವಿದೆ. ಆದರೆ, ಲಾಕ್‌ಡೌನ್‌ ಜಾರಿಯ ನಂತರವಷ್ಟೇ ಭಾರತೀಯರಿಗೆ ಈಕ್ವಿಟಿಗಳ ಮೇಲೆ ಹೂಡಿಕೆ ಹೆಚ್ಚಿಸಬೇಕು ಎಂಬ ಮನಸ್ಸು ಬಂದಿದ್ದಲ್ಲ; ಅದಕ್ಕೂ ಮೊದಲಿನಿಂದಲೇ ಅವರು ಈ ಕಡೆ ಆಕರ್ಷಿತರಾಗಿದ್ದಾರೆ ಎಂದು ಹೇಳುತ್ತಿವೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಆಗಿರುವ ಹೂಡಿಕೆಗೆ ಸಂಬಂಧಿಸಿದ ಅಂಕಿ–ಅಂಶಗಳು.

ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟವಾದ ಎಎಂಎಫ್‌ಐ ನೀಡಿರುವ ಮಾಹಿತಿಯ ಪ್ರಕಾರ, 2014ರ ಮಾರ್ಚ್‌ ತಿಂಗಳ ನಂತರದಲ್ಲಿ ಭಾರತದಲ್ಲಿ ಮ್ಯೂಚುವಲ್‌ ಫಂಡ್‌ ಖಾತೆಗಳ ಸಂಖ್ಯೆ ಏರಿಕೆಯ ಹಾದಿಯಲ್ಲಿಯೇ ಸಾಗಿದೆ. 2014ರ ಮಾರ್ಚ್‌ ತಿಂಗಳಲ್ಲಿ ದೇಶದಲ್ಲಿ ಇದ್ದ ಒಟ್ಟು ಮ್ಯೂಚುವಲ್‌ ಫಂಡ್‌ ಖಾತೆಗಳ (ಇದನ್ನು ಮ್ಯೂಚುವಲ್‌ ಫಂಡ್‌ ಕಂಪನಿಗಳು ಫೋಲಿಯೊ ಎಂದು ಕರೆಯುತ್ತವೆ) ಸಂಖ್ಯೆ 3.95 ಕೋಟಿ. ಈ ಖಾತೆಗಳ ಸಂಖ್ಯೆಯು ಈ ವರ್ಷದ ಮಾರ್ಚ್‌ ವೇಳೆಗೆ 9.79 ಕೋಟಿಗೆ ಏರಿಕೆ ಕಂಡಿದೆ.

9.78 ಕೋಟಿ ಖಾತೆಗಳಲ್ಲಿ ಸಣ್ಣ ಹೂಡಿಕೆದಾರರು ಹೊಂದಿರುವ ಖಾತೆಗಳ ಪ್ರಮಾಣ ಶೇಕಡ 90.1ರಷ್ಟು (ಒಟ್ಟು 8.82 ಕೋಟಿ ಖಾತೆಗಳು). 2014ರ ನಂತರ ಮ್ಯೂಚುವಲ್‌ ಫಂಡ್‌ ಖಾತೆಗಳ ಸಂಖ್ಯೆ ಏರಿಕೆ ಆಗುತ್ತಲೇ ಇರುವುದು ಹಾಗೂ ಅವುಗಳಲ್ಲಿ ಬಹುಪಾಲು ಖಾತೆಗಳು ಸಣ್ಣ ಹೂಡಿಕೆದಾರರಿಗೆ ಸೇರಿವುದನ್ನು ಗಮನಿಸಿದರೆ, ಸಣ್ಣ ಹೂಡಿಕೆದಾರರು ಸಾಂಪ್ರದಾಯಿಕ ಹೂಡಿಕೆ ಉತ್ಪನ್ನಗಳಾದ ನಿಶ್ಚಿತ ಠೇವಣಿ, ಆರ್‌.ಡಿ. (ರೆಕರಿಂಗ್ ಡೆಪಾಸಿಟ್), ಅಂಚೆ ಕಚೇರಿ ಉಳಿತಾಯ ಯೋಜನೆ ಮಾತ್ರವೇ ಅಲ್ಲದೆ, ಹೊಸ ಕಾಲದ ಮ್ಯೂಚುವಲ್‌ ಫಂಡ್‌ಗಳತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿರುವುದು ಸ್ಪಷ್ಟವಾಗುತ್ತದೆ.

ADVERTISEMENT

ಇಲ್ಲಿ ಇನ್ನೂ ಒಂದು ಮುಖ್ಯವಾದ ಅಂಶ ಇದೆ.

ಈಕ್ವಿಟಿ ಆಧಾರಿತ (ಅಂದರೆ, ಪ್ರಧಾನವಾಗಿ ಬೇರೆ ಬೇರೆ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ) ಮ್ಯೂಚುವಲ್‌ ಫಂಡ್‌ಗಳಲ್ಲಿ ಸಣ್ಣ ಹೂಡಿಕೆದಾರರು ಹೊಂದಿರುವ ಪಾಲು ಶೇಕಡ 93.2ರಷ್ಟು ಎಂದು ಎಎಂಎಫ್‌ಐ ಹೇಳಿದೆ. ಮ್ಯೂಚುವಲ್‌ ಫಂಡ್‌ ಮೂಲಕ ಮಾಡುವ ಹೂಡಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಿಸ್ಕ್‌ ಇರುವುದು ಈಕ್ವಿಟಿ ಆಧಾರಿತ ಹೂಡಿಕೆ ಯೋಜನೆಗಳಲ್ಲಿ. ಅಲ್ಲಿಯೂ ಸಣ್ಣ ಹೂಡಿಕೆದಾರರೇ ಹೆಚ್ಚಿನ ಪ್ರಮಾಣದಲ್ಲಿ ಪಾಲು ಹೊಂದಿದ್ದಾರೆ ಎಂದಾದರೆ, ಹೂಡಿಕೆಯಲ್ಲಿ ತೊಡಗಿರುವವರು ಈಕ್ವಿಟಿ ಹೂಡಿಕೆಗಳಲ್ಲಿ ಇರುವ ರಿಸ್ಕ್‌ ವಿಚಾರವಾಗಿ ಹೆಚ್ಚಿನ ಭಯ ಹೊಂದಿಲ್ಲ ಎಂದು ಭಾವಿಸಲು ಅಡ್ಡಿಯಿಲ್ಲ.

‘ಮ್ಯೂಚುವಲ್‌ ಫಂಡ್‌ಗಳ ಮೂಲಕ ವಿವಿಧ ಕಡೆ ಹೂಡಿಕೆ ಆಗುತ್ತಿರುವ ಹಣದ ಮೊತ್ತವು ಜಾಸ್ತಿ ಆಗುತ್ತಲೇ ಇದೆ. ಇದಕ್ಕೆ ಒಂದು ಕಾರಣ ಹಣವನ್ನು ಹೂಡಿಕೆ ಮಾಡುವ ಪ್ರಕ್ರಿಯೆಯು ಸುಲಭ ಆಗಿರುವುದು. ಸುಲಭವಾಗಿ ಮ್ಯೂಚುವಲ್‌ ಫಂಡ್‌ ಖಾತೆ ತೆರೆದು, ಹೂಡಿಕೆ ಮಾಡಲು ಅವಕಾಶ ಕಲ್ಪಿಸುವ ಆನ್‌ಲೈನ್‌ ವೇದಿಕೆಗಳು ಬಂದಿವೆ. ಹಾಗೆಯೇ, ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟವು ಜಾಹೀರಾತುಗಳ (ಮ್ಯೂಚುವಲ್‌ ಫಂಡ್‌ ಸಹಿ ಹೈ ಎಂಬ ಶೀರ್ಷಿಕೆ ಹೊಂದಿರುವವು) ಮೂಲಕ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಭಿಯಾನ ನಡೆಸಿದೆ. ಇದು ಕೂಡ ಅಲ್ಲಿ ಹೂಡಿಕೆ ಜಾಸ್ತಿ ಆಗಲು ಒಂದು ಮುಖ್ಯ ಕಾರಣ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಪ್ರೈಮ್‌ಇನ್ವೆಸ್ಟರ್ ಡಾಟ್‌ ಇನ್‌ ಸಂಸ್ಥೆಯ ಸಹಸಂಸ್ಥಾಪಕಿ ವಿದ್ಯಾ ಬಾಲಾ. ಆದರೆ, ಫೋಲಿಯೊ ಸಂಖ್ಯೆಯೊಂದನ್ನು ಮಾತ್ರ ಗಮನಿಸಿ ಹೂಡಿಕೆದಾರರ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗದು ಎಂದು ಅವರು ಹೇಳಿದರು. ಒಬ್ಬರು ಒಂದಕ್ಕಿಂತ ಹೆಚ್ಚಿನ ಫೋಲಿಯೊ ಹೊಂದಿರಲು ಅವಕಾಶ ಇರುವ ಕಾರಣ, ಫೋಲಿಯೊಗಳ ಸಂಖ್ಯೆಯೇ ಹೂಡಿಕೆದಾರರ ಸಂಖ್ಯೆ ಎಂದು ಹೇಳಲು ಆಗದು.

ಈಕ್ವಿಟಿ ಆಧಾರಿತ ಫಂಡ್‌ಗಳಲ್ಲಿ ಹೂಡಿಕೆ ಮಾಡಿದವರು, ಹಣವನ್ನು ಹೆಚ್ಚಿನ ಅವಧಿಗೆ ಅಲ್ಲಿಯೇ ಬಿಡುತ್ತಿದ್ದಾರೆ. ಈಕ್ವಿಟಿಗಳಲ್ಲಿ ಹೂಡಿಕೆಯಾಗಿರುವ ಮೊತ್ತದಲ್ಲಿ ಶೇಕಡ 43.2ರಷ್ಟು ಹಣವು ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಅಲ್ಲಿಯೇ ಇರುತ್ತದೆ. ಹೆಚ್ಚಿನ ಅವಧಿಗೆ ಹಣವು ಷೇರುಗಳಲ್ಲಿ ಹೂಡಿಕೆ ಆಗಿರುತ್ತದೆ ಎಂದರೆ, ಸಣ್ಣ ಹೂಡಿಕೆದಾರರು ಹೆಚ್ಚು ಪ್ರಬುದ್ಧರಾಗಿದ್ದಾರೆ ಎಂದು ಅರ್ಥ. ಮಾರುಕಟ್ಟೆಯ ದೈನಂದಿನ ಏರಿಳಿತಗಳಿಂದ ಅವರು ಅಧೀರರಾಗುವುದಿಲ್ಲ ಎಂದೂ ಅರ್ಥ. ‘ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ರಿಸ್ಕ್ ಜಾಸ್ತಿ ಇದ್ದರೂ ಅಧಿಕ ಲಾಭ ಸಿಗುವ ಸಾಧ್ಯತೆಯೂ ಹೆಚ್ಚು. ಈ ಕಾರಣದಿಂದಾಗಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಹೆಚ್ಚಾಗಿರಬಹುದು. ಫಂಡ್ ಮ್ಯಾನೇಜರ್‌ಗಳು ಜನಸಾಮಾನ್ಯರ ಹೂಡಿಕೆಯ ಹಣವನ್ನು ನಿಭಾಯಿಸುವ ಕಾರಣ, ಷೇರು ಮಾರುಕಟ್ಟೆಯ ಏರಿಳಿತದ ಬಗ್ಗೆ ಹೂಡಿಕೆದಾರರು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಾರುಕಟ್ಟೆಯ ಏರಿಳಿತಗಳಿಂದ ಹೂಡಿಕೆದಾರರಿಗೆ ಒಂದಿಷ್ಟು ರಕ್ಷಣೆ ಒದಗಿಸುವ ವ್ಯವಸ್ಥಿತ ಹೂಡಿಕೆ ಯೋಜನೆಗಳು (ಎಸ್‌ಐಪಿ) ಕೂಡ ಈಕ್ವಿಟಿ ಹೂಡಿಕೆಗಳ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಕಾರಣ’ ಎಂದು ಸುವಿಷನ್ ಹೋಲ್ಡಿಂಗ್ಸ್ ‍ಪ್ರೈವೇಟ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಮೋದ್ ಬಿ.ಪಿ. ಹೇಳಿದರು.

ವೈಯಕ್ತಿಕ ಹೂಡಿಕೆದಾರರು ಷೇರು ಮಾರುಕಟ್ಟೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿರುವುದನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿದ ಮಾಸಿಕ ‘ಎಕೊವ್ರ್ಯಾಪ್’ ವರದಿಯಲ್ಲಿ ಕೂಡ ಉಲ್ಲೇಖಿಸಲಾಗಿದೆ. ‘2020–21ನೆಯ ಆರ್ಥಿಕ ವರ್ಷದಲ್ಲಿ ದೇಶದ ವೈಯಕ್ತಿಕ ಹೂಡಿಕೆದಾರರ ಸಂಖ್ಯೆಯು 142 ಲಕ್ಷದಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೊಸದಾಗಿ 44.7 ಲಕ್ಷ ಸಣ್ಣ ಹೂಡಿಕೆದಾರರ ಖಾತೆಗಳು ತೆರೆಯಲ್ಪಟ್ಟಿವೆ. ಷೇರು ಮಾರುಕಟ್ಟೆಗಳಲ್ಲಿನ ಒಟ್ಟು ವಹಿವಾಟಿನಲ್ಲಿ ವೈಯಕ್ತಿಕ ಹೂಡಿಕೆದಾರರ ಪಾಲು ಮೊದಲು ಶೇಕಡ 39ರಷ್ಟು ಇದ್ದುದು ಈಗ ಶೇ 45ರಷ್ಟಕ್ಕೆ ಹೆಚ್ಚಳವಾಗಿದೆ’ ಎಂದು ಎಸ್‌ಬಿಐ ವರದಿ ಹೇಳಿದೆ. ಈ ವರದಿಯಲ್ಲಿ ಉಲ್ಲೇಖವಾಗಿರುವುದು ಮ್ಯೂಚುವಲ್‌ ಫಂಡ್‌ ಖಾತೆಗಳ ವಿವರ ಅಲ್ಲ; ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಇದು.

‘ವಿಶ್ವಾಸ ಹೆಚ್ಚಾಗಿದೆ’: ತಂತ್ರಜ್ಞಾನದ ಕಾರಣದಿಂದಾಗಿ ಹೂಡಿಕೆ ಸುಲಭವಾಗಿರುವುದಷ್ಟೇ ಅಲ್ಲದೆ, ಬಿಗಿ ನಿಯಮಗಳು ಜಾರಿಗೆ ಬಂದಿರುವುದರಿಂದಾಗಿ ಹೂಡಿಕೆದಾರರ ವಿಶ್ವಾಸ ಈಕ್ವಿಟಿಯಲ್ಲಿ ಹೆಚ್ಚಾಗಿದೆ ಎಂದು ಹೇಳಿದರು ‘ಪೇಟಿಎಂ ಮನಿ’ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವರುಣ್ ಶ್ರೀಧರ್.

ಪ್ರಮುಖ ಷೇರು ಮಾರುಕಟ್ಟೆಗಳು ಡಿಜಿಟೈಸ್ ಆಗುತ್ತಿವೆ. ಇದರ ಪರಿಣಾಮವಾಗಿ ಮ್ಯೂಚುವಲ್‌ ಫಂಡ್‌ ಹಾಗೂ ಇತರ ಈಕ್ವಿಟಿ ಹೂಡಿಕೆಗೆ ಸಂಬಂಧಿಸಿದ ಶುಲ್ಕಗಳು ಹಿಂದೆಂದಿಗಿಂತ ಕಡಿಮೆ ಆಗಿವೆ. ಹೊಸ ಕಾಲದ ಹೂಡಿಕೆ ವೇದಿಕೆಗಳು ಕೆವೈಸಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಆಗಿ ನಿಭಾಯಿಸುತ್ತಿವೆ. ಹೂಡಿಕೆದಾರರ ಹಿತರಕ್ಷಣೆಯ ಉದ್ದೇಶದ ನಿಯಂತ್ರಣ ಕಾನೂನುಗಳು ಮಾರುಕಟ್ಟೆಗಳ ಬಗ್ಗೆ ವಿಶ್ವಾಸ ಹೆಚ್ಚಿಸಿವೆ. ಮ್ಯೂಚುವಲ್‌ ಫಂಡ್‌ ಹಾಗೂ ಈಕ್ವಿಟಿ ಉತ್ಪನ್ನಗಳತ್ತ ಹೂಡಿಕೆದಾರರು ಹೆಚ್ಚು ಆಕರ್ಷಿತರಾಗಲು ಇವೆಲ್ಲವೂ ಕಾರಣ ಎಂದು ಶ್ರೀಧರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದು ಶಾಶ್ವತವೋ, ತಾತ್ಕಾಲಿಕವೋ?
ಹಣದ ಉಳಿತಾಯಕ್ಕೆ ಇರುವ ಬೇರೆ ಉತ್ಪನ್ನಗಳಲ್ಲಿ ಸಿಗುತ್ತಿರುವ ಬಡ್ಡಿಯ ಪ್ರಮಾಣ ಕಡಿಮೆ ಇರುವುದು ಸಣ್ಣ ಹೂಡಿಕೆದಾರರು ಷೇರು ಮಾರುಕಟ್ಟೆಯತ್ತ ಹೆಚ್ಚಿನ ಆಸಕ್ತಿ ತೋರಿಸಲು ಮುಖ್ಯ ಕಾರಣ ಎಂದು ಎಸ್‌ಬಿಐ ವರದಿ ಹೇಳಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಜನ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದು ಕೂಡ ಅವರು ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟಿದೆ.

ಆದರೆ, ಈಕ್ವಿಟಿಗಳಲ್ಲಿ ಸಣ್ಣ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಹೆಚ್ಚುತ್ತ ಸಾಗಿರುವುದು ತಾತ್ಕಾಲಿಕ ಬೆಳವಣಿಗೆಯೇ ಅಥವಾ ಇದು ಬಹುಕಾಲ ಉಳಿದುಕೊಳ್ಳುವಂತಹ, ಹೂಡಿಕೆದಾರರ ಮನೋಭಾವದಲ್ಲಿಯೇ ಆಗಿರುವ ಬದಲಾವಣೆಯೇ ಎಂಬುದನ್ನು ಕಾದುನೋಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ‘ಸಣ್ಣ ಹೂಡಿಕೆದಾರರ ಪಾಲ್ಗೊಳ್ಳುವಿಕೆಯಲ್ಲಿ ಸ್ಥಿರತೆ ಕಂಡುಬಂದರೆ, ಭಾರತದ ಮೂಲಸೌಕರ್ಯ ಯೋಜನೆಗಳಿಗೆ ದೊಡ್ಡ ಹಣಕಾಸಿನ ಮೂಲವೊಂದು ಸಿಕ್ಕಂತೆ ಆಗುತ್ತದೆ’ ಎನ್ನುವುದು ಎಸ್‌ಬಿಐನ ಅರ್ಥಶಾಸ್ತ್ರಜ್ಞರ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.