ADVERTISEMENT

ಆಳ–ಅಗಲ: ಜಗತ್ತಿಗೆ ಓಮಿಕ್ರಾನ್‌ ಆತಂಕ

ಪ್ರಜಾವಾಣಿ ವಿಶೇಷ
Published 28 ನವೆಂಬರ್ 2021, 19:30 IST
Last Updated 28 ನವೆಂಬರ್ 2021, 19:30 IST
ಕೊರೊನಾ ವೈರಾಣು –ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಾಣು –ಪ್ರಾತಿನಿಧಿಕ ಚಿತ್ರ   

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮಿಕ್ರಾನ್‌ಗೆ ಮನುಷ್ಯನ ರೋಗನಿರೋಧಕ ಶಕ್ತಿಯನ್ನು ದಾಟಿಕೊಂಡು ಹೋಗುವ ಗುಣವಿದೆ ಎಂದು ವಿಜ್ಞಾನಿಗಳು ಹೇಳಿರುವುದು ಆತಂಕ ಮೂಡಿಸಿದೆ. ಈಗಿರುವ ಲಸಿಕೆಗಳು ಹೊಸ ತಳಿಯ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸಲಾರವು ಎಂಬ ಅಭಿಪ್ರಾಯವಿದೆ. ರೂಪಾಂತರದ ವಿರುದ್ಧ ಯಾವ ಲಸಿಕೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಈಗ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ.

ಲಸಿಕೆ ತಯಾರಿಕಾ ಸಂಸ್ಥೆಗಳು ಹೊಸ ತಳಿ ವಿರುದ್ಧ ಹೋರಾಡುವ ಲಸಿಕೆ ಕುರಿತು ಅಧ್ಯಯನ ಆರಂಭಿಸಿವೆ. ಬೂಸ್ಟರ್‌ ಡೋಸ್‌ಗಳಿಗೆ ಅಧಿಕ ಡೋಸ್‌ ಸೇರಿಸುವುದು,ಹೊಸ ತಳಿಗೆ ಹೊಂದಿಕೆಯಾಗುವ ಬೂಸ್ಟರ್‌ ಡೋಸ್‌ಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಮುಖ್ಯವಾಗಿ ಓಮಿಕ್ರಾನ್‌ ಕೇಂದ್ರೀಕರಿಸಿದ ಬೂಸ್ಟರ್‌ ಡೋಸ್‌ಗಳ ಪರೀಕ್ಷೆಯನ್ನು ಕೆಲವು ಕಂಪನಿಗಳು ಆರಂಭಿಸಿವೆ. ಭಾರತದಲ್ಲಿ ತಯಾರಾಗುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಹೊಸ ತಳಿಯ ವಿರುದ್ಧ ಹೊಂದಿರುವ ಕಾರ್ಯಕ್ಷಮತೆ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಮೊಡೆರ್ನಾ:ಅಮೆರಿಕದ ಲಸಿಕೆ ತಯಾರಿಕಾ ಸಂಸ್ಥೆ ಮೊಡೆರ್ನಾ, ಹೊಸ ತಳಿ ವಿರುದ್ಧ ಕೆಲಸ ಮಾಡಬಲ್ಲ ಬೂಸ್ಟರ್ ಡೋಸ್ ಅಭಿವೃದ್ಧಿಪಡಿಸುವುದಾಗಿ ತಿಳಿಸಿದೆ. ಈಗಿರುವ ಬೂಸ್ಟರ್ ಡೋಸ್‌ನ ಪ್ರಮಾಣವನ್ನು 50ರಿಂದ 100 ಮೈಕ್ರೊಗ್ರಾಮ್‌ಗೆ ಹೆಚ್ಚಿಸುವುದು ಅಥವಾ ಎರಡು ಬೂಸ್ಟರ್ ಡೋಸ್ ನೀಡುವುದು ಅಥವಾ ಓಮಿಕ್ರಾನ್‌ ಪ್ರತಿಬಂಧಿಸುವ ಹೊಸ ಲಸಿಕೆ ಅಭಿವೃದ್ಧಿಪಡಿಸುವ ಪ್ರಸ್ತಾವನೆಗಳ ಬಗ್ಗೆ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ.ಓಮಿಕ್ರಾನ್‌ ಸೃಷ್ಟಿಸಿರುವ ಆತಂಕದ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರದಲ್ಲಿ ಸ್ಪಷ್ಟ ನಿರ್ಧಾರ ತಿಳಿಸುವುದಾಗಿ ಸಂಸ್ಥೆಯ ಸಿಇಒ ಸ್ಟೀಫನ್ ಬನ್ಸೆಲ್ ತಿಳಿಸಿದ್ದಾರೆ.

ADVERTISEMENT

ಫೈಝರ್ ಮತ್ತುಬಯೊಎನ್‌ಟೆಕ್: ಈಗಿರುವ ಲಸಿಕೆಯು ಹೊಸ ತಳಿಯ ವಿರುದ್ಧ ಕೆಲಸ ಮಾಡುವ ಬಗ್ಗೆ ಈಗಲೇ ಹೇಳಲಾಗದು ಎಂದು ಫೈಝರ್ ಹಾಗೂ ಬಯೊಎನ್‌ಟೆಕ್ ಕಂಪನಿಗಳು ತಿಳಿಸಿವೆ.ಓಮಿಕ್ರಾನ್‌ ಕುರಿತ ಹೆಚ್ಚಿನ ದತ್ತಾಂಶ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿವೆ. ಮುಂದಿನ ಎರಡು ವಾರಗಳಲ್ಲಿ ದತ್ತಾಂಶ ಸಂಗ್ರಹವಾಗುವ ಸಾಧ್ಯತೆಯಿದೆ. ಈ ದತ್ತಾಂಶವು, ಈಗ ನೀಡುತ್ತಿರುವ ಲಸಿಕೆಯನ್ನು ಮಾರ್ಪಡಿಸಬೇಕೇ ಎಂದು ತಿಳಿದುಕೊಳ್ಳಲು ನೆರವಾಗುತ್ತದೆ. ಒಂದು ವೇಳೆ ಓಮಿಕ್ರಾನ್‌ಗಾಗಿ ಬೇರೆ ಲಸಿಕೆ ಅಗತ್ಯ ಎಂದಾದಲ್ಲಿ, 100 ದಿನಗಳಲ್ಲಿ ಅದನ್ನು ಸಿದ್ಧಪಡಿಸುವ ವಿಶ್ವಾಸವನ್ನು ಈ ಕಂಪನಿಗಳು ವ್ಯಕ್ತಪಡಿಸಿವೆ.

ಸ್ಪುಟ್ನಿಕ್:ಓಮಿಕ್ರಾನ್ ವಿರುದ್ದ ಹೋರಾಡಬಲ್ಲ ಹೊಸ ಲಸಿಕೆಯನ್ನು ಮುಂದಿನ 100 ದಿನಗಳಲ್ಲಿ ಅಭಿವೃದ್ಧಿಪಡಿಸುದಾಗಿ ರಷ್ಯಾದ ಸ್ಪುಟ್ನಿಕ್ ಲಸಿಕೆಯ ತಯಾರಿಕಾ ಸಂಸ್ಥೆ ತಿಳಿಸಿದೆ.

ಜಾನ್ಸನ್ ಅಂಡ್ ಜಾನ್ಸನ್: ಈಗಾಗಲೇ ಬಳಕೆಯಲ್ಲಿರುವ ಲಸಿಕೆಯು ಹೊಸ ರೂಪಾಂತರ ತಳಿಯ ವಿರುದ್ಧ ಪರಿಣಾಮಕಾರಿಯೇ ಎಂಬ ಬಗ್ಗೆ ಪರೀಕ್ಷೆ ನಡೆಸುವುದಾಗಿ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ತಿಳಿಸಿದೆ.

ಗ್ರೀಕ್‌ ಅಕ್ಷರಮಾಲೆಯಿಂದ ಹೆಸರು

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಹೊಸ ವೈರಾಣು ತಳಿಗಳಿಗೆ ಗ್ರೀಕ್‌ ಅಕ್ಷರಮಾಲೆಯಿಂದ ಹೆಸರುಗಳನ್ನು ಸೂಚಿಸುತ್ತದೆ. ಅಕ್ಷರಮಾಲೆಯ ಮೊದಲ ಅಕ್ಷರದಿಂದ ಆರಂಭಿಸಿ, ಅನುಕ್ರಮವಾಗಿ ಹೆಸರು ನೀಡಲಾಗುತ್ತದೆ. ಈ ಬಾರಿ ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನದಲ್ಲಿ ಪತ್ತೆಯಾದ ಈ ತಳಿಗೆ ಗ್ರೀಕ್ ಅಕ್ಷರಮಾಲೆ ಪ್ರಕಾರ, ಎನ್‌ಯು (Nu) ಅಕ್ಷರದಿಂದ ಹೆಸರಿಡಬೇಕಿತ್ತು. ಆದರೆ ಇದು ‘ನ್ಯೂ’ (New) ಎಂದು ಜನರು ಭಾವಿಸಿ ಗೊಂದಲ ಉಂಟಾಗಬಹುದು ಎಂಬ ಕಾರಣಕ್ಕೆ ಇದನ್ನು ಕೈಬಿಡಲಾಯಿತು. ವರ್ಣಮಾಲೆ ಪ್ರಕಾರ ಮುಂದಿನ ಅಕ್ಷರ ಕ್ಸಿ (Xi). ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಹೆಸರಿನೊಂದಿಗೆ ಹೋಲಿಕೆಯಾಗುತ್ತದೆ ಎಂಬ ಕಾರಣಕ್ಕೆ ಇದನ್ನೂ ಕೈಬಿಡಲಾಯಿತು. ನಂತರ ಸರದಿಯಲ್ಲಿದ್ದ ಅಕ್ಷರದ ಪ್ರಕಾರ, ‘ಓಮಿಕ್ರಾನ್’ ಹೆಸರು ಅಂತಿಮವಾಯಿತು.

ಪ್ರತೀ ರೂಪಾಂತರ ತಳಿಗೆ ಹೊಸ ಹೆಸರು: ಪ್ರತೀ ಬಾರಿ ಸೃಷ್ಟಿಯಾಗುವ ಹೊಸ ರೂಪಾಂತರ ತಳಿಗೆ ಹೊಸ ಹೆಸರು ಇಡುವ ರೂಢಿಯಿದೆ. ಯಾವ ವೈರಾಣು ಎಂದು ಜನರಲ್ಲಿ ಉಂಟಾಗುವ ಗೊಂದಲವನ್ನು ತಪ್ಪಿಸುವುದು ಹಾಗೂ ಸರಳವಾಗಿ ಗುರುತಿಸುವಂತೆ ಮಡುವುದು ಇದರ ಉದ್ದೇಶ. ವುಹಾನ್ ವೈರಾಣು, ಬೋಟ್ಸ್‌ವಾನ ವೈರಾಣು ಎಂದು ಕರೆದರೂ, ಅದರಲ್ಲಿ ಮತ್ತೆ ರೂಪಾಂತರಗಳು ಸೃಷ್ಟಿಯಾದಾಗ, ಏನೆಂದು ಕರೆಯುವುದು ಎಂಬ ಗೊಂದಲ ತಪ್ಪಿಸಲು ನಾಮಕರಣ ಪದ್ಧತಿ ಶುರುವಾಯಿತು. ಗ್ರೀಕ್ ವರ್ಣಮಾಲೆಯ 24 ಅಕ್ಷರಗಳು ಮುಗಿದಾಗ, ಮತ್ತೊಂದು ವರ್ಣಮಾಲೆ ಸರಣಿ ಆರಂಭವಾಗಲಿದೆ.

ಹೆಸರಿಡುವ ಕಾರ್ಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ವೈರಸ್ ಎವಲೂಷನ್ ವರ್ಕಿಂಗ್ ಗ್ರೂಪ್ ನಿರ್ವಹಿಸುತ್ತದೆ. ಗ್ರೀಕ್ ದೇವತೆಗಳ ಹೆಸರಿಡುವ ಪ್ರಸ್ತಾವ ಮೊದಲಿಗೆ ಇತ್ತು. ಅಂಕಿಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆದು, ಇದು ಜನರಲ್ಲಿ ಇನ್ನಷ್ಟು ಗೊಂದಲ ಮೂಡಿಸುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಕೈಬಿಡಲಾಯಿತು. ಕೊನೆಗೆ ಗ್ರೀಕ್ ವರ್ಣಮಾಲೆಯ ಅಕ್ಷರಗಳಿಂದ ಹೆಸರು ಆರಂಭಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿತು.

ಹೆಚ್ಚಿನ ಮಾಹಿತಿ ಇಲ್ಲ

ಓಮಿಕ್ರಾನ್‌ ರೂಪಾಂತರ ತಳಿ ರಚನೆಯನ್ನು ತಿಳಿಯಲು ಹಲವು ಅಧ್ಯಯನಗಳನ್ನು ನಡೆಸಲಾಗಿದೆ. ಆದರೆ ಅದು, ಈಗಿನ ಅಪಾಯಕಾರಿ ತಳಿ ಡೆಲ್ಟಾಗಿಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂಬುದು ಮಾತ್ರವೇ ಪತ್ತೆಯಾಗಿದೆ. ಓಮಿಕ್ರಾನ್‌ ತಳಿಯ ಸಂಪೂರ್ಣ ರಚನೆ, ಹರಡುವ ವೇಗ, ಅದು ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮ, ಚಿಕಿತ್ಸೆಯ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದೆ. ಆದರೆ ಇದು ಕಳವಳಕಾರಿ ತಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿದೆ.

* ಓಮಿಕ್ರಾನ್‌ ಕೊರೊನಾ ವೈರಸ್‌ನ ಮೇಲ್ಮೈನಲ್ಲಿ ಮುಳ್ಳಿನ ರೀತಿಯ 50ಕ್ಕೂ ಹೆಚ್ಚು ಸ್ಪೈಕ್‌ ಪ್ರೊಟೀನ್‌ಗಳು ಇವೆ. ಇವುಗಳಲ್ಲಿ 30ಕ್ಕೂ ಹೆಚ್ಚು ಸ್ಪೈಕ್ ಪ್ರೊಟೀನ್‌ಗಳು ಪರಸ್ಪರ ಭಿನ್ನವಾಗಿವೆ

* ಸ್ಪೈಕ್‌ ಪ್ರೊಟೀನ್‌ ಮುಳ್ಳುಗಳ ಮೂಲಕ ಕೊರೊನಾವೈರಸ್‌ ಮನುಷ್ಯನ ಜೀವಕೋಶವನ್ನು ಸೇರುತ್ತದೆ. ಇಂತಹ ಸ್ಪೈಕ್‌ ಪ್ರೊಟೀನ್‌ಗಳ ಸಂಖ್ಯೆ ಹೆಚ್ಚು ಇದ್ದಷ್ಟೂ, ಅದು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುತ್ತದೆ. 50ಕ್ಕೂ ಹೆಚ್ಚು ಸ್ಪೈಕ್‌ ಪ್ರೊಟೀನ್‌ಗಳು ಇರುವ ಕಾರಣ ಓಮಿಕ್ರಾನ್‌ ಸಹ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ

* ಈಗಾಗಲೇ ಕೋವಿಡ್‌ ಬಂದು ಗುಣಮುಖರಾಗಿರುವವರಿಗೆ ಓಮಿಕ್ರಾನ್ ಮೂಲಕ ಕೋವಿಡ್‌ ಬರುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಪತ್ತೆಯಾಗಿಲ್ಲ.ಓಮಿಕ್ರಾನ್‌ನಿಂದ ಕೋವಿಡ್‌ ಬಂದಾಗ, ರೋಗ ತೀವ್ರತೆ ಎಷ್ಟಿರುತ್ತದೆ ಎಂಬುದು ಇನ್ನೂ ಪತ್ತೆಯಾಗಿಲ್ಲ

* ಈಗ ಬಳಕೆಯಲ್ಲಿರುವ ಕೋವಿಡ್‌ ಲಸಿಕೆಗಳು ಓಮಿಕ್ರಾನ್‌ ಮೂಲಕ ಕೋವಿಡ್‌ ಹರಡುವುದನ್ನು ತಡೆಯುತ್ತವೆಯೇ ಅಥವಾ ಇಲ್ಲವೇ ಎಂಬುದು ಪತ್ತೆಯಾಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.