ADVERTISEMENT

ಅರಣ್ಯವಲ್ಲ ಇದು ಕೃಷಿ ಭೂಮಿ!

ಇಂಗಳಗಿಯ ರೈತ ಬಸವರಾಜ ಬಮ್ಮನಹಳ್ಳಿ ಸಾಧನೆ

ಸುಭಾಸ ಎಸ್.ಮಂಗಳೂರ
Published 12 ಜೂನ್ 2019, 19:30 IST
Last Updated 12 ಜೂನ್ 2019, 19:30 IST
ದೇವರಹಿಪ್ಪರಗಿ ತಾಲ್ಲೂಕು ಇಂಗಳಗಿಯ ಬಸವರಾಜ ಬಮ್ಮನಹಳ್ಳಿ ಅವರು ತಮ್ಮ ಜಮೀನಿನಲ್ಲಿ ಅರಣ್ಯ ಕೃಷಿ ಮಾಡಿರುವುದು
ದೇವರಹಿಪ್ಪರಗಿ ತಾಲ್ಲೂಕು ಇಂಗಳಗಿಯ ಬಸವರಾಜ ಬಮ್ಮನಹಳ್ಳಿ ಅವರು ತಮ್ಮ ಜಮೀನಿನಲ್ಲಿ ಅರಣ್ಯ ಕೃಷಿ ಮಾಡಿರುವುದು   

ವಿಜಯಪುರ: 500 ಶ್ರೀಗಂಧ, 500 ನುಗ್ಗೆ ಗಿಡ, 300 ಸೀತಾಫಲ, 100 ನಿಂಬೆ ಗಿಡ, 80 ಪೇರು, 40 ಮಾವು, 20 ಸಪೋಟಾ...ಇದು ಯಾವುದೋ ಅರಣ್ಯ ಭೂಮಿಯಲ್ಲ; ಬದಲಿಗೆ ಕೃಷಿಭೂಮಿ.

ದೇವರಹಿಪ್ಪರಗಿ ತಾಲ್ಲೂಕು ಇಂಗಳಗಿ ರೈತ ಬಸವರಾಜ ಬಮ್ಮನಹಳ್ಳಿ ಅವರು ತಮ್ಮ 5 ಎಕರೆ ಕೃಷಿ ಭೂಮಿಯಲ್ಲಿ ಈ ಗಿಡಗಳನ್ನು ನೆಟ್ಟಿದ್ದಾರೆ. ಇವುಗಳ ಜತೆಯಲ್ಲೇ ಅಂಜೂರ, ಹಲಸು, ಹುಣಸೆ, ನೇರಳೆ, ಮಹಾಗನಿ, ಸಿಲ್ವರ್ ಓಕ್, ತೆಂಗು, ಬಾಳೆ, ನೆಲ್ಲಿ, ಬಿದಿರು ಸೇರಿ ಸುಮಾರು ಎರಡು ಸಾವಿರ ಮರಗಳನ್ನು ಬೆಳೆಸಿದ್ದಾರೆ.

ಕುಷ್ಟಗಿಯ ರೈತ ರಮೇಶ ಬಳೂಟಗಿ ಅವರು ತಮ್ಮ 100 ಎಕರೆ ಜಮೀನಿನಲ್ಲಿ ಅರಣ್ಯ ಕೃಷಿ ಕೈಗೊಂಡಿದ್ದಾರೆ. ಇದನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸಿದ ಬಸವರಾಜ ಅವರ ಪುತ್ರ ಗುರುರಾಜ ಅವರು ತಾವೇಕೆ ಅರಣ್ಯ ಕೃಷಿ ಮಾಡಬಾರದು ಎಂದು ಯೋಚಿಸಿದ್ದರ ಫಲವೇ ಇಂದು ಐದು ಎಕರೆ ಜಮೀನು ಅರಣ್ಯ ಭೂಮಿಯಾಗಿ ಪರಿವರ್ತನೆಗೊಂಡಿದೆ.

ADVERTISEMENT

ಎರಡು ಎಕರೆ ಪ್ರದೇಶದಲ್ಲಿ 500 ಹೆಬ್ಬೇವು ನಾಟಿ ಮಾಡಿದ್ದಾರೆ. 15 ಅಡಿ ಅಂತರದಲ್ಲಿ ಗಿಡ ನೆಟ್ಟು, ಅದರ ಮಧ್ಯೆ ಶ್ರೀಗಂಧದ ಗಿಡಗಳನ್ನು ನಾಟಿ ಮಾಡಿದ್ದಾರೆ. ಇವುಗಳ ಮಧ್ಯೆಯೇ ಸೀತಾಫಲ ಗಿಡಗಳನ್ನು ನೆಟ್ಟಿದ್ದಾರೆ. ಎರಡು ಎಕರೆಯಲ್ಲಿ ಪೇರು, ಮಾವು, ನುಗ್ಗೆ ಗಿಡಗಳನ್ನುಬೆಳೆಸಿದ್ದಾರೆ.

‘ಆರಂಭದಲ್ಲಿ ಅರಣ್ಯ ಕೃಷಿಗೆ ಮನೆಯವರು ಒಪ್ಪಲಿಲ್ಲ. ಯುಟ್ಯೂಬ್‌ನಲ್ಲಿನ ವಿಡಿಯೊಗಳನ್ನು ತೋರಿಸಿದ ಬಳಿಕ ಒಪ್ಪಿಕೊಂಡರು. ಎರಡು ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ತಲಾ ಒಂದು ಇಂಚು ನೀರು ಲಭ್ಯವಾಗಿದೆ. ಕೃಷಿ ಹೊಂಡ ನಿರ್ಮಿಸಿ, ವಿದ್ಯುತ್ ಸರಬರಾಜು ಇದ್ದಾಗ ನೀರನ್ನು ಕೃಷಿಹೊಂಡಕ್ಕೆ ಬಿಡುತ್ತೇವೆ. ಆ ಬಳಿಕ ಹನಿ ನೀರಾವರಿ ಮೂಲಕ ಎಲ್ಲಾ ಗಿಡಗಳಿಗೆ ನೀರುಣಿಸುತ್ತೇವೆ’ ಎಂದು ಗುರುರಾಜ ಬಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೋದ ವರ್ಷ ನುಗ್ಗೇಕಾಯಿ ಮಾರಾಟದಿಂದ ₹60 ಸಾವಿರ, ಅವರೇಕಾಯಿಯಿಂದ ₹50 ಸಾವಿರ, ಕಡಲೆ, ಬದನೆ, ಟೊಮೆಟೊ ಮಾರಾಟದಿಂದ ಒಟ್ಟು ₹2 ಲಕ್ಷ ನಿವ್ವಳ ಆದಾಯ ಬಂದಿದೆ. ಜೋಳ, ಗೋಧಿ ಬೆಳೆಯುವುದರಿಂದ ಇಷ್ಟು ಲಾಭ ಸಿಗುವುದಿಲ್ಲ. ದ್ರಾಕ್ಷಿ ಬೆಳೆದರೆ ಖರ್ಚು ಹೆಚ್ಚು, ಆದಾಯ ಕಡಿಮೆ. ಹೀಗಾಗಿ ಅರಣ್ಯ ಕೃಷಿ ಮಾಡಿದ್ದೇವೆ; ನೆಮ್ಮದಿಯಾಗಿ ಇದ್ದೇವೆ’ ಎಂದು ಖುಷಿಯಿಂದಲೇ ತಮ್ಮ ಅನುಭವ ಹಂಚಿಕೊಂಡರು.

‘2019ರ ಮೇ 19ರಂದು ನನ್ನ ಸಹೋದರ ಸುರೇಶ ಬಮ್ಮನಹಳ್ಳಿ ಮದುವೆ ಸಮಾರಂಭ ಜರುಗಿತು. ಮದುವೆಗೆ ಬಂದಿದ್ದ ಸುಮಾರು 800 ಜನರಿಗೆ ವಿವಿಧ ತಳಿಯ ಸಸಿಗಳನ್ನು ವಿತರಿಸಿದೆವು. ಗಿಡಗಳು ಪಕ್ಷಿಗಳಿಗೆ ಆಸರೆಯಾಗಿವೆ. ನಮಗೆ ಆಮ್ಲಜನಕ ಕೊಡುತ್ತವೆ. ಬಿಸಿಲಲ್ಲಿ ಬಸವಳಿದವರಿಗೆ ನೆರಳು ಕೊಡುತ್ತವೆ. ಹೀಗಾಗಿ ಜನ್ಮ ದಿನವನ್ನು ಆಚರಿಸಿಕೊಳ್ಳುವ ಬದಲು ಪ್ರತಿಯೊಬ್ಬರೂ ಪ್ರತಿ ವರ್ಷ ಒಂದೊಂದು ಸಸಿಯನ್ನು ನೆಟ್ಟು, ಬೆಳೆಸಬೇಕು ಎಂಬುದು ನನ್ನ ಆಶಯವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.