ADVERTISEMENT

ಮಹಿಳಾ ಕ್ರಿಕೆಟ್‌ ಅಂಗಳಕ್ಕೆ ಹೆಜ್ಜೆ ಇಟ್ಟ ಅನ್ನಪೂರ್ಣ, ಅನುಶ್ರೀ

ವಿಜಯಪುರದ ಕೀರ್ತಿ ಪತಾಕೆ ಹಾರಿಸಲು ಅಣಿಯಾದ ಯುವತಿಯರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 15:20 IST
Last Updated 18 ಸೆಪ್ಟೆಂಬರ್ 2021, 15:20 IST
ಅನುಶ್ರೀ ಸಮಗೊಂಡ
ಅನುಶ್ರೀ ಸಮಗೊಂಡ   

ವಿಜಯಪುರ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ರಾಜಸ್ತಾನದ ಜೈಪುರದಲ್ಲಿ ಸೆಪ್ಟೆಂಬರ್‌ 28ರಿಂದ ಅಕ್ಟೋಬರ್‌ 4ರ ವರೆಗೆ ನಡೆಯಲಿರುವ 19 ವರ್ಷದೊಳಗಿನ ಮಹಿಳೆಯರ ಏಕ ದಿನ ಕ್ರಿಕೆಟ್‌ ಟ್ರೋಫಿಗೆ ಕರ್ನಾಟಕ ತಂಡಕ್ಕೆ ಜಿಲ್ಲೆಯ ಇಬ್ಬರು ಯುವತಿಯರು ಆಯ್ಕೆಯಾಗಿದ್ದಾರೆ.

ವಿಕೆಟ್ ಕೀಪರ್ ಅನ್ನಪೂರ್ಣ ಜಿ.ಬೋಸಲೆ ಮತ್ತು ಅನುಶ್ರೀ ಸಮಗೊಂಡ ಅವರು ರಾಜ್ಯ ತಂಡವನ್ನು ಪ್ರತಿನಿಧಿಸುವಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಭಾರತ ತಂಡವನ್ನು ಈಗಾಗಲೇ ಪ್ರತಿನಿಧಿಸಿರುವ ಜಿಲ್ಲೆಯವರೇ ಆದ ರಾಜೇಶ್ವರಿ ಗಾಯಕವಾಡ ಅವರ ಬಳಿಕ ಇದೀಗ ಭವಿಷ್ಯದ ಉತ್ತಮ ಕ್ರಿಕೆಟ್‌ ಪಟುಗಳ ಸಾಲಿಗೆ ಇವರಿಬ್ಬರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಇಬ್ಬರೂ ಅದ್ಭುತ ಪ್ರದರ್ಶನ ತೋರುವ ಮೂಲಕ ರಾಜ್ಯ ಮಹಿಳೆಯರ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ADVERTISEMENT

ಅನುಶ್ರೀ ಸಮಗೊಂಡ

ಮಧ್ಯಮ ವೇಗದ ಬೌಲರ್ ಹಾಗೂ ಬ್ಯಾಟ್ಸ್‌ವುಮನ್‌ ಆಗಿರುವಅನುಶ್ರೀ ಸಮಗೊಂಡ ಅವರಿಗೆವಿಜಯಪುರದ ಬುಲ್ಸ್ ರಿಂಗ್ ಕ್ರಿಕೆಟ್‌ ಅಕಾಡೆಮಿಯ ತರಬೇತುದಾರ ರವಿ ಭರತಖಾನೆ ಇವರ ಪರಿಶ್ರಮ ಹಾಗೂ ಮಹಿಳಾ ಕ್ರಿಕೆಟ್ ಅನುಭವಿ ತರಬೇತುದಾರ ಡಾ. ಅಶೋಕ ಜಾಧವ, ಬಸವರಾಜ ಇಜೇರಿ, ಡಿ.ವಿ. ಕಲಾಲಮಾರ್ಗದರ್ಶನ ನೀಡಿದ್ದು, ಬೆಂಗಳೂರಿನಲ್ಲಿ ಮೂರ್ನಾಲ್ಕು ತಿಂಗಳು ತರಬೇತಿ ಪಡೆದುಕೊಂಡಿದ್ದಾರೆ.

ಅನುಶ್ರೀ ಸಮಗೊಂಡ ಅವರು ನಗರದ ಶಿಕ್ಷಕ ಕಾಶಿನಾಥ ಸಮಗೊಂಡ ಹಾಗೂ ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ದಾಕ್ಷಾಯಿಣಿ ಚಾಳಿಕಾರ ದಂಪತಿ ಎರಡನೆ ಪುತ್ರಿ.

ನಗರದ ಸೇಂಟ್‌ ಜಾನ್ಸ್‌ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಸಕ್ತ ವರ್ಷವೇ ಉತ್ತೀರ್ಣವಾಗಿದ್ದಾರೆ. ಇವರ ಅಜ್ಜ ವೈಜನಾಥ ಸಮಗೊಂಡ ಹಿರಿಯರ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಅಥ್ಲಿಟ್ ಆಗಿದ್ದಾರೆ. ಅಜ್ಜನ ಹಾದಿಯಲ್ಲಿ ಮೊಮ್ಮಗಳೂ ಕ್ರೀಡಾಪಟುವಾಗಿ ಅರಳುತ್ತಿದ್ದಾರೆ.

‘ಪ್ರೌಢಶಾಲಾ ಹಂತದಲ್ಲೇ ಕ್ರಿಕೆಟ್‌ನಲ್ಲಿ ತೀವ್ರ ಆಸಕ್ತಿ ತೋರಿಸಿದ ಕಾರಣ ಅವಳಿಗೆ ಕ್ರಿಕೆಟ್ ತರಬೇತಿಗೆ ಬಿಟ್ಟೆವು. ನಮ್ಮ ನಿರೀಕ್ಷೆ ಹುಸಿಮಾಡದೇ ತನ್ನ ಸಾಮರ್ಥ್ಯ ತೋರಿದ್ದು ನಮಗೆಲ್ಲ ಹೆಮ್ಮೆಎನ್ನಿಸಿದೆ’ ಎಂದು ಕಾಶಿನಾಥ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅನ್ನಪೂರ್ಣ ಜಿ.ಬೋಸಲೆ:

ಆರಂಭಿಕ ಬ್ಯಾಟ್ಸ್‌ ವುಮನ್‌ ಹಾಗೂ ವಿಕೆಟ್‌ ಕೀಪರ್‌ ಆಗಿರುವಅನ್ನಪೂರ್ಣ ಜಿ.ಬೋಸಲೆ ಅವರು ಈಗಾಗಲೇ 16 ವರ್ಷದೊಳಗಿನ ಕರ್ನಾಟಕ ರಾಜ್ಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿ, 2020ರಲ್ಲಿ ಪಾಂಡಿಚೇರಿಯಲ್ಲಿ ನಡೆದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ವಿಜಯಪುರದ ಕೊಹಿನೂರ್‌ ಕ್ರಿಕೆಟ್‌ ಕ್ಲಬ್‌, ಕರ್ನಾಟಕ ಕ್ರಿಕೆಟ್‌ ಕ್ಲಬ್‌ ಮತ್ತು ಓಂಕ್ರಿಕೆಟ್‌ ಕ್ಲಬ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಪ್ರಶಾಂತ ಹಜೇರಿ, ಮುರುಳಿ ಬೀಳಗಿ ಮತ್ತು ಸಲೀಂ ಬೇಪಾರಿ ಅವರು ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.

ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎಸ್‌.ಎಸ್‌.ಪಿಯು ಕಾಲೇಜಿನಲ್ಲಿ ವಾಣಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವಅನ್ನಪೂರ್ಣ ಜಿ.ಬೋಸಲೆ,ವಿಜಯಪುರದ ರಿಪಬ್ಲಿಕ್‌ ಸ್ಕೂಲ್‌ನ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ ಬೋಸಲೆ ಮತ್ತು ಶಿಕ್ಷಕಿ ಕೃಷ್ಣಾ ವಾಡಕರ್‌ ಅವರ ದ್ವಿತೀಯ ಪುತ್ರಿಯಾಗಿದ್ದಾರೆ.

‘ಮಗಳು ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯ ಇತರೆ ಯುವತಿಯರಿಗೂ ನನ್ನ ಮಗಳು ಪ್ರೇರಣೆಯಾಗಲಿದ್ದಾಳೆ’ ಎಂದು ಅನ್ನಪೂರ್ಣ ಬೊಸಲೆ ಅವರ ತಂದೆ ಗಣೇಶ ಬೋಸಲೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.