ADVERTISEMENT

ಬಾಗಲಕೋಟೆ: ಕಾಂಗ್ರೆಸ್, ಬಿಜೆಪಿಯೊಳಗೆ ಹೆಚ್ಚಿದ ಬೇಗುದಿ

ಬಸವರಾಜ ಹವಾಲ್ದಾರ
Published 1 ಮಾರ್ಚ್ 2023, 19:30 IST
Last Updated 1 ಮಾರ್ಚ್ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ವಿಧಾನಸಭಾ ಚುನಾವಣಾ ಟಿಕೆಟ್‌ಗಾಗಿ ಆಕಾಂಕ್ಷಿಗಳು ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಹಾಗೆಯೇ ಹೊಸ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಇದು ಈಗಿರುವ ಆಕಾಂಕ್ಷಿಗಳ ಸಂಕಷ್ಟ ಹೆಚ್ಚಿಸಿದೆ.

ಟಿಕೆಟ್‌ ಸಿಗುವ ಖಾತ್ರಿಯಾಗುವ ಮೊದಲೇ ಕೆಲವು ಆಕಾಂಕ್ಷಿಗಳು ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದಾರೆ. ತಮ್ಮ ಆಪ್ತರಲ್ಲಿ ನನಗೆ ಟಿಕೆಟ್‌ ಖಾತ್ರಿ ಎಂದು ಹೇಳುತ್ತಾ ಪ್ರಚಾರ ಮುಂದುವರಿಸಿದ್ದಾರೆ. ಇದು ಪಕ್ಷದ ಇತರ ಮುಖಂಡರನ್ನು ಗೊಂದಲಕ್ಕೆ ದೂಡುತ್ತಿದೆ.

ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯನ್ನು ಚುಣಾವಣೆಗಿಂತ ಮೂರು ತಿಂಗಳ ಮೊದಲೇ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ, ಬಿಡುಗಡೆ ದಿನಾಂಕವನ್ನು ಮುಂದೂಡತ್ತಲೇ ಸಾಗುತ್ತಿರುವುದು ಆಕಾಂಕ್ಷಿಗಳ ಬೇಗುದಿಯನ್ನು ಹೆಚ್ಚಿಸಿದೆ. ಟಿಕೆಟ್ ಸಿಗುವುದು ಖಾತ್ರಿಯಿಲ್ಲವಾದರೂ, ಪ್ರಚಾರಕ್ಕೆಂದು ಹೊರಗಡೆ ಬಿದ್ದರೆ, ನಿತ್ಯದ ಹಲವಾರು ಖರ್ಚುಗಳನ್ನು ನಿಭಾಯಿಸಬೇಕಿದೆ.

ADVERTISEMENT

ತೇರದಾಳದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು 16 ಮಂದಿ ಆಕಾಂಕ್ಷಿಗಳು ಪೈಪೋಟಿ ನಡೆಸಿರುವುದು ಕಾಂಗ್ರೆಸ್‌ ನಾಯಕರನ್ನೇ ಇಕ್ಕಟ್ಟಿಗೆ ದೂಡಿದೆ. ಯಾರಿಗೆ ಟಿಕೆಟ್‌ ಕೊಟ್ಟರೂ ಉಳಿದವರನ್ನು ಸಮಾಧಾನ ಮಾಡುವುದು ಸವಾಲಾಗಿದೆ. ಇತ್ತೀಚೆಗೆ ಪ್ರಜಾಧ್ವನಿ ಯಾತ್ರೆಗೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈಗಿರುವ ಒಗ್ಗಟ್ಟನ್ನು ಆಕಾಂಕ್ಷಿಗಳು ಒಬ್ಬರಿಗೆ ಟಿಕೆಟ್‌ ಹಂಚಿಕೆ ಮಾಡಿದ ನಂತರವೂ ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿಯೇ ಹೆಚ್ಚಿನ ಪೈಪೋಟಿ ಇಲ್ಲಿ ಕಂಡು ಬರುತ್ತಿದೆ. ಮಾಜಿ ಸಚಿವೆ ಉಮಾಶ್ರೀ ಜೊತೆಗೆ ಹಲವರು ಗಂಭೀರವಾಗಿಯೇ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ. ಈಗಲೇ ಟಿಕೆಟ್‌ ನೀಡಿದರೆ, ಪಕ್ಷದೊಳಗೆ ಏಳಬಹುದಾದ ಬಂಡಾಯ ತಪ್ಪಿಸಲು ಟಿಕೆಟ್ ಘೋಷಣೆ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.

ತೇರದಾಳ ಕ್ಷೇತ್ರಕ್ಕೆ ಹಾಲಿ ಶಾಸಕ ಸಿದ್ದು ತೇರದಾಳ ಇದ್ದರೂ ಹಲವರು ಟಿಕೆಟ್‌ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎಂಬ ಆಗ್ರಹವಿದೆ. ಜೊತೆಗೆ ನೇಕಾರ ಸಮಾಜದವರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಜೋರಾಗಿದೆ. ಇದೇ ಕ್ಷೇತ್ರದ ರಬಕವಿ ಬನಹಟ್ಟಿಗೆ ಬಂದಿದ್ದ ಮುಖ್ಯಮಂತ್ರಿ ನೇಕಾರ ಅಭಿವೃದ್ಧಿ ನಿಗಮ ರಚನೆ ಮಾಡುವುದಾಗಿ ಘೋಷಿಸುವ ಮೂಲಕ ನೇಕಾರರ ಮತಬುಟ್ಟಿಗೆ ಕೈ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.