ADVERTISEMENT

ಲಂಚದ ಹಣದ ಬದಲು ಮನೆಯಿಂದ ಟಗರು ತಂದು ಕೊಡು ಎಂದು ಕೇಳಿದ್ದ ಭ್ರಷ್ಟ ಅಧಿಕಾರಿ!

₹6 ಸಾವಿರ ಲಂಚ ಪಡೆಯುತ್ತಿದ್ದ ಪಿಡಿಒ, ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 13:22 IST
Last Updated 16 ಸೆಪ್ಟೆಂಬರ್ 2021, 13:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ : ಲಂಚ ಕೊಡಲು ಹಣ ಇಲ್ಲ ಎಂದು ಹೇಳಿದ ರೈತನಿಂದ ಹಣದ ಬದಲು ಆತ ಮನೆಯಲ್ಲಿ ಸಾಕಿದ್ದ ಟಗರು ಕೊಡುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬೇಡಿಕೆ ಇಟ್ಟಿದ್ದ ಸಂಗತಿ ಭ್ರಷ್ಟಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ವಿಚಾರಣೆ ವೇಳೆ ಬಯಲಾಗಿದೆ.

ಬಾದಾಮಿ ತಾಲ್ಲೂಕಿನಹೂಲಗೇರಿ ಗ್ರಾಮದಲ್ಲಿ ಕಂಪ್ಯೂಟರ್ ಉತಾರ ನೀಡಲು ರೈತ ಯಲಪ್ಪ ಹಿರೇಹೊಳ್ಳಿ ಅವರಿಂದ ₹6 ಸಾವಿರ ಲಂಚ ಪಡೆಯುವಾಗ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಶೌಕತ್‌ಅಲಿ ಮುರನಾಳ ಹಾಗೂ ಕಂಪ್ಯೂಟರ್ ಆಪರೇಟರ್ ಭರಮಣ್ಣ ಗುರುವಾರ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದಿದ್ದರು.

ಮಾಲಗಿ ಗ್ರಾಮದ ಯಲ್ಲಪ್ಪ ಹಿರೇಹೊಳ್ಳಿ ಉತಾರ ಪಡೆಯಲು ಹೋಗಿದ್ದಾಗ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಸೇರಿ ₹8 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ’ಅಷ್ಟೊಂದು ಹಣ ನನ್ನ ಬಳಿ ಇಲ್ಲ. ನಾನು ಬಡವ ಇದ್ದೇನೆ‘ ಎಂದು ಯಲ್ಲಪ್ಪ ಹೇಳಿದಾಗ ಟಗರು ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಯಲ್ಲಪ್ಪ ಒಪ್ಪಿಲ್ಲ. ಕೊನೆಗೆ ₹6 ಸಾವಿರ ಕೊಟ್ಟು ಉತಾರ ಪಡೆಯಲು ಹೇಳಿದ್ದರು ಎನ್ನಲಾಗಿದೆ.

ADVERTISEMENT

ಅದನ್ನು ಯಲ್ಲಪ್ಪ ಎಸಿಬಿ ಗಮನಕ್ಕೆ ತಂದಿದ್ದಾರೆ. ದೂರು ದಾಖಲಿಸಿಕೊಂಡು ಗುರುವಾರ ಗ್ರಾಮ ಪಂಚಾಯ್ತಿ ಕಚೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ರೈತನಿಂದ ಲಂಚ ಪಡೆಯುವಾಗ ಇಬ್ಬರನ್ನೂ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಎಸಿಬಿ ಸಿಪಿಐ ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.