ADVERTISEMENT

'ಮಹಿಳಾ ಮತದಾರರು ಹೆಚ್ಚಿರುವುದರಿಂದ ಸ್ತ್ರೀಯರಿಗೆ ಹೆಚ್ಚು ಆಮಿಷ'

ಜಿಲ್ಲಾಮಟ್ಟದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 14:00 IST
Last Updated 20 ಮಾರ್ಚ್ 2023, 14:00 IST
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಿಐಟಿಯು ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಮಾತನಾಡಿದರು
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಿಐಟಿಯು ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರಾಜಕೀಯ ಪಕ್ಷಗಳ ಮುಖಂಡರು ಸ್ತ್ರೀಯರಿಗೆ ಹೆಚ್ಚು ಆಮಿಷ ಒಡ್ಡುತ್ತಿದ್ದಾರೆ’ ಎಂದು ‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌’ (ಸಿಐಟಿಯು) ರಾಜ್ಯ ಘಟಕದ ಅಧ್ಯಕ್ಷೆ ಎಸ್‌. ವರಲಕ್ಷ್ಮಿ ತಿಳಿಸಿದರು.

ಸಿಐಟಿಯುನಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಶೀಘ್ರದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ. ರಾಜಕೀಯ ಪಕ್ಷಗಳು ಮತದಾರರಿಗೆ ಸೀರೆ, ಕುಕ್ಕರ್‌ ಸೇರಿದಂತೆ ಇತರೆ ವಸ್ತುಗಳನ್ನು ಕೊಟ್ಟು ಆಮಿಷ ಒಡ್ಡುತ್ತಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ಆಮಿಷ ಒಡ್ಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಮಹಿಳೆಯರನ್ನು ಹೆಚ್ಚಾಗಿ ಸೇರಿಸುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಹಿಳೆಯರನ್ನು ಹೆಚ್ಚಾಗಿ ಸೇರಿಸಲು ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ನಮ್ಮ ದೇಶದಲ್ಲಿ ಮಹಿಳೆಗೆ ಭಾರತ ಮಾತೆ, ದೇವತೆಯ ಸ್ಥಾನ ಕೊಡಲಾಗಿದೆ. ಆದರೆ, ವಾಸ್ತವ ಪರಿಸ್ಥಿತಿಯೇ ಬೇರೆ ಇದೆ. ನಮ್ಮ ಸಂಸತ್ತಿನ ಒಟ್ಟು 545 ಸಂಸದರ ಪೈಕಿ 54 ಜನ ಮಹಿಳಾ ಸಂಸದೆಯರು ಇದ್ದಾರೆ. ಕೇಂದ್ರದಲ್ಲಿ 7ರಿಂದ 8 ಸಚಿವೆಯರು ಇದ್ದಾರೆ. ರಾಜ್ಯದ 224 ಶಾಸಕರಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಶಾಸಕಿಯರಾಗಿದ್ದಾರೆ. ಆದರೆ, ಇಂದಿಗೂ ಅನೇಕ ಹೆಣ್ಣು ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಆದಾಯವಿಲ್ಲದೆ ದೇಹ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಸಮಾನತೆ ಬಂದಿಲ್ಲ. ಮಹಿಳೆಯರು ಹೇಗಿರಬೇಕೆಂದು ರಾಜಕಾರಣಿಗಳು ನಿರ್ಧರಿಸುತ್ತಿರುವುದು ಶೋಚನಿಯ ಎಂದರು.

ಲೇಖಕಿ ಉಷಾರಾಣಿ ಮಾತನಾಡಿ, ದೇಶದ ಬೆನ್ನೆಲುಬು ರೈತರು. ಅದರ ಜೊತೆಗೆ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತರು ಹೌದು. ಮಹಿಳೆಯರು ಅವರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕಿದೆ. ರಾಜಕಾರಣಿಯೊಬ್ಬರು ಹಣೆ ಮೇಲೆ ಬೊಟ್ಟು ಏಕಿಟ್ಟಿಲ್ಲ ಎಂದು ಕೇಳಿದಾಗ ಮಹಿಳೆಯರು ಒಗ್ಗಟ್ಟಿನಿಂದ ಬೊಟ್ಟು ಹಚ್ಚದೆ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ತಿಳಿಸಿದರು.

ದಲಿತ ಹಕ್ಕುಗಳ ಸಮಿತಿಯ ಬಿ. ಮಾಳಮ್ಮ, ವಕೀಲೆ ಶ್ವೇತಾಂಬರಿ, ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಂ. ಗೌರಮ್ಮ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಾಗರತ್ನಮ್ಮ, ಕಾರ್ಯದರ್ಶಿ ಕೆ.ಎಂ. ಸ್ವಪ್ನ, ಖಜಾಂಚಿ ಎಂ. ಮಾರಮ್ಮ, ಕೆ. ಗೌರಮ್ಮ, ಬಸವರಾಜ, ಆರ್‌. ಭಾಸ್ಕರ್‌ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.