ADVERTISEMENT

ದಾಖಲೆ ಬರೆದ ದೇವನಹಳ್ಳಿ ವಿಮಾನ ನಿಲ್ದಾಣ: 2.75 ಕೋಟಿ ಮಂದಿ ಪ್ರಯಾಣ

ದಾಖಲೆ ಬರೆದ ದೇವನಹಳ್ಳಿ ವಿಮಾನ ನಿಲ್ದಾಣ: ಸರಕು ಸಾಗಣೆಯಲ್ಲೂ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 20:23 IST
Last Updated 7 ಫೆಬ್ರುವರಿ 2023, 20:23 IST
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಬಿಎಲ್‌ಆರ್‌) 2022ರಲ್ಲಿ ದೇಶದ ವಿವಿಧ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಒಟ್ಟು 2.75 ಕೋಟಿ ಪ್ರಯಾಣಿಕರು ಪಯಣಿಸಿದ್ದು, ವಿಮಾನ ನಿಲ್ದಾಣ ದಾಖಲೆ ಬರೆದಿದೆ.

ವಾಯು ಸರಕು ಸಾಗಣೆ (ಏರ್‌ ಕಾರ್ಗೋ) ಕ್ಷೇತ್ರದಲ್ಲಿಯೂ ಗಣನೀಯ ಅಭಿವೃದ್ಧಿ ಸಾಧಿಸಲಾಗಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಪ್ರಾಧಿಕಾರ ತಿಳಿಸಿದೆ.

ಕೋವಿಡ್‌ ಪೂರ್ವ ಅವಧಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಮಂದಿ ಪ್ರಯಾಣ ಬೆಳೆಸಿದ್ದಾರೆ. ದೇಶೀಯ ಪ್ರಯಾಣಿಕರ ಸಂಖ್ಯೆಯಲ್ಲಿ
ಶೇ 85ರಷ್ಟು ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 65ರಷ್ಟು ಏರಿಕೆಯಾಗಿದೆ.

ADVERTISEMENT

ಈ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಪ್ರಮುಖ ಮಹಾನಗರಗಳು ಹಾಗೂ ದೇಶೀಯವಾಗಿ ಮುಖ್ಯ ಪಟ್ಟಣಗಳಿಗೆ ನೇರವಾಗಿ ಹೊಸ ವಿಮಾನಯಾನ ಸಂಪರ್ಕ ಕಲ್ಪಿಸುವುದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ.

ವಾಯು ಮಾರ್ಗದ ಮೂಲಕ ಹೊಸ ಸ್ಥಳಗಳಿಗೆ ವಿಮಾನಯಾನದ ಮೂಲಕ ಸಂಪರ್ಕ ಕಲ್ಪಿಸುವುದರಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಮೊದಲ ಆದ್ಯತೆ ನೀಡಿದೆ. ದೇಶದಾದ್ಯಂತ ಒಟ್ಟು 75 ಸ್ಥಳಗಳಿಗೆ ಇಲ್ಲಿಂದ ನೇರವಾಗಿ ನಿತ್ಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಇಲ್ಲಿಂದ ಆಸ್ಟ್ರೇಲಿಯಾದ ಸಿಡ್ನಿ, ದುಬೈ, ಸ್ಯಾನ್‌ ಫ್ರಾನ್ಸಿಸ್ಕೊಗೆ ಪ್ರತಿನಿತ್ಯ ವಿಮಾನಗಳು ಹಾರಾಟ ನಡೆಸುತ್ತವೆ.

‘ಟರ್ಮಿನಲ್‌–2 ಆರಂಭವಾದ ಬಳಿಕ ಹೆಚ್ಚುವರಿಯಾಗಿ ವಿಮಾನಗಳು ಕಾರ್ಯಾಚರಣೆ ಪ್ರಾರಂಭಿಸಿವೆ. ವಿಮಾನ ನಿಲ್ದಾಣವೂ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಇದರ ಫಲವಾಗಿ ಇಂದು ದಕ್ಷಿಣ ಭಾರತ ಮತ್ತು ಮಧ್ಯ ಭಾರತದ ವಿಮಾನ ಯಾನದ ಹೆಬ್ಬಾಗಿಲು ಆಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ’ ಎಂದು ವಿಮಾನ ನಿಲ್ದಾಣದ ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸಾತ್ಯಕಿ ರಘುನಾಥ್‌ ತಿಳಿಸಿದ್ದಾರೆ.

ಕಾರ್ಗೋ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ: ವಿಶ್ವದ ಅತಿದೊಡ್ಡ ವಾಯು ಮಾರ್ಗ ಸರಕು ಸಾಗಣೆಯಲ್ಲಿ ಹೆಸರುವಾಸಿಯಾಗಿರುವ ಯುಪಿಎಸ್‌, ಡಿಎಚ್‌ಎಲ್‌, ಫೆಡ್‌ಎಕ್ಸ್‌ ಕಂಪನಿಗಳು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 41 ವಾಯು ಮಾರ್ಗದಲ್ಲಿ ಸರಕು ಸಾಗಣೆಯ ಸೇವೆ ಒದಗಿಸುತ್ತಿವೆ. 2022ರಲ್ಲಿ ಒಟ್ಟು 41.26 ಲಕ್ಷ ಮೆಟ್ರಿಕ್‌ ಟನ್‌ ಸರಕು ಸಾಗಣೆಯಾಗಿದೆ.

***

24.36 ದಶಲಕ್ಷ– ದೇಶೀಯ ಪ್ರಯಾಣಿಕರ ಸಂಚಾರ

3.14 ದಶಲಕ್ಷ– ಅಂತರರಾಷ್ಟ್ರೀಯ ಪ್ರಯಾಣಿಕರ ಸಂಚಾರ

1,07,825– ಡಿ. 23ರಂದು ಒಂದೇ ದಿನದಲ್ಲಿ ಪ್ರಯಾಣಿಸಿದ ಪ್ರಯಾಣಿಕರು

ಶೇ 85– ದೇಶೀಯ ಪ್ರಯಾಣಿಕರ ಏರಿಕೆ

ಶೇ 65– ಅಂತರರಾಷ್ಟ್ರೀಯ ಪ್ರಯಾಣಿಕರ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.