ADVERTISEMENT

ದೇವನಹಳ್ಳಿ: ಹೈಟೆಕ್‌ ಸರ್ಕಾರಿ ಶಾಲೆ–ಪ್ರತಿಷ್ಠಿತ ಖಾಸಗಿ ಶಾಲೆ ಪೈಪೋಟಿ

ಡೊನೇಷನ್‌– ಉಚಿತ ಶಿಕ್ಷಣ ಸ್ಪರ್ಧೆ

ವಡ್ಡನಹಳ್ಳಿ ಬೊಜ್ಯನಾಯ್ಕ
Published 20 ಜೂನ್ 2020, 8:58 IST
Last Updated 20 ಜೂನ್ 2020, 8:58 IST
ದೇವನಹಳ್ಳಿ ನಗರದ ಕೊರಚರಪಾಳ್ಯದಲ್ಲಿರುವ ಹೈಟೆಕ್ ಮಾದರಿ ಸರ್ಕಾರಿ ಶಾಲೆ
ದೇವನಹಳ್ಳಿ ನಗರದ ಕೊರಚರಪಾಳ್ಯದಲ್ಲಿರುವ ಹೈಟೆಕ್ ಮಾದರಿ ಸರ್ಕಾರಿ ಶಾಲೆ   

ದೇವನಹಳ್ಳಿ: ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಗೊಂದಲದ ನಡುವೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ಪೋಷಕರು ದುಂಬಾಲು ಬೀಳುತ್ತಿದ್ದಾರೆ.

ಇಲ್ಲಿನ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಕನಿಷ್ಠ ₹ 35 ಸಾವಿರದಿಂದ ₹ 1.5 ಲಕ್ಷದಷ್ಟು ಪ್ರಾಥಮಿಕ ಪೂರ್ವ ತರಗತಿದಿಂದ 10ನೇ ತರಗತಿರವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಡೊನೇಷನ್‌ ನೀಡಲೇಬೇಕು. ಪ್ರಸ್ತುತ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಕದ್ದುಮುಚ್ಚಿ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿದೆ.

‘ತಾಲ್ಲೂಕಿನಲ್ಲಿ ಸಾಮಾಜಿಕ ಹೊಣೆ ಗಾರಿಕೆ ಯೋಜನೆಯಡಿ ನಿರ್ಮಿಸಲಾದ ಸುಸಜ್ಜಿತ ಹೈಟೆಕ್ ಅತ್ಯಾಧುನಿಕ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸರ್ಕಾರ ಈಗಾಗಲೇ ಅಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ಆರಂಭಿಸಿದೆ. ಸಾವಿರಾರು ರೂಪಾಯಿ ಡೊನೇಷನ್‌ ನೀಡುವ ಬದಲು ಉಚಿತವಾಗಿ ಸಿಗುವ ಸೌಲಭ್ಯವನ್ನು ಯಾಕೆ ಸದುಪಯೋಗ ಪಡೆದುಕೊಳ್ಳಬಾರದು’ ಎನ್ನುತ್ತಾರೆ ದಾಖಲಾತಿಗಾಗಿ ಸರತಿಯ ಸಾಲಿನಲ್ಲಿರುವ ಪೋಷಕರು.

ADVERTISEMENT

‘ತಾಲ್ಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (1 ರಿಂದ 5) 115, ಹಿರಿಯ ಪ್ರಾಥಮಿಕ ಶಾಲೆ (5 ರಿಂದ 7) 66, 8ನೇ ತರಗತಿ ಉನ್ನತೀಕರಿಸಿದ ಶಾಲೆ 26, (8 ರಿಂದ 10 ) 20 ಸರ್ಕಾರಿ ಪ್ರೌಢಶಾಲೆಗಳಿವೆ. 2019-20ನೇ ಸಾಲಿನಲ್ಲಿ 11,400 ವಿದ್ಯಾರ್ಥಿಗಳು 1 ರಿಂದ 7ನೇ ತರಗತಿವರೆಗೆ ವ್ಯಾಸಂಗಕ್ಕೆ ದಾಖಲಾಗಿದ್ದರು. 2020-21ನೇ ಸಾಲಿನಲ್ಲಿ 12,600 ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ ಇದೆ. ಹೈಟೆಕ್ ಮಾದರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಬೋಧನೆಗೆ ಅವಕಾಶವಿರುವುದರಿಂದ ಪೋಷಕರು ಮಕ್ಕಳನ್ನು ದಾಖಲಿಸಲು ಒತ್ತಡ ತರುತ್ತಿದ್ದಾರೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ.

ಜೂನ್‌ 8 ರಿಂದ ದಾಖಲಾತಿ ಆರಂಭಿಸಲಾಗಿದೆ. 15 ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಬಂದು ದಾಖಲಾಗಿದ್ದಾರೆ. ಕಳೆದ ವರ್ಷ 1ರಿಂದ 8ನೇ ತರಗತಿವರೆಗೆಗ 196 ವಿದ್ಯಾರ್ಥಿಗಳಿದ್ದರು. ಈ ಬಾರಿ ಕನಿಷ್ಠ 300 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಬೇಕಾಗಿದೆ. ವಿದ್ಯಾರ್ಥಿಗಳ ಪೊಷಕರ ಮತ್ತು ಶಾಲೆಯ ಶಿಕ್ಷಕರೊಂದಿಗೆ ಸಭೆ ನಡೆಸಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲೆ ಆರಂಭದ ಬಗ್ಗೆ ಅಧಿಕೃತ ಆದೇಶ ಬಂದಿಲ್ಲವಾದರೂ ಸಮವಸ್ತ್ರ, ಪಠ್ಯ ಪುಸ್ತಕ, ಇತರ ಪರಿಕರಗಳನ್ನು ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಕೊರಚರಪಾಳ್ಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಗಿರಿಜಾ.

ಖಾಸಗಿ ಶಾಲೆ ಭ್ರಮೆಯಿಂದ ಪೋಷಕರು ಹೊರಬೇಕು ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.