ADVERTISEMENT

ದೊಡ್ಡಬಳ್ಳಾಪುರ: ಪಕ್ಷಿಗಳಿಗೆ ಫಲ ನೀಡದ ಮರಗಳೇ ಅಧಿಕ, ವೈವಿಧ್ಯಮಯ ಮರಗಳು ಕ್ಷೀಣ

ಅಭಿವೃದ್ಧಿ ನೆಪದಲ್ಲಿ ಮರಗಳಿಗೆ ಕತ್ತರಿ

ನಟರಾಜ ನಾಗಸಂದ್ರ
Published 25 ಜೂನ್ 2020, 5:24 IST
Last Updated 25 ಜೂನ್ 2020, 5:24 IST
ಮೈ.ತಿ.ಶ್ರೀಕಂಠಯ್ಯ ಉದ್ಯಾನದಲ್ಲಿ ಬೆಳೆಸಲಾಗಿರುವ ಅಶೋಕ ಮರ
ಮೈ.ತಿ.ಶ್ರೀಕಂಠಯ್ಯ ಉದ್ಯಾನದಲ್ಲಿ ಬೆಳೆಸಲಾಗಿರುವ ಅಶೋಕ ಮರ   

ದೊಡ್ಡಬಳ್ಳಾಪುರ:ತಾಲ್ಲೂಕು ಕಚೇರಿ ವೃತ್ತದಿಂದ ಗ್ರಾಮಾಂತರ ಪೊಲೀಸ್‌ ಠಾಣೆವರೆಗೆ, ಕೋರ್ಟ್ ರಸ್ತೆಯುದ್ದಕ್ಕೂಆಲ, ಅರಳಿ, ಹಿಪ್ಪೆ, ಗೋಣಿ, ನೇರಳೆ ಸೇರಿದಂತೆ ಹತ್ತಾರು ರೀತಿಯ ವೈವಿಧ್ಯಮಯ ಸ್ಥಳೀಯ ಜಾತಿ ಮರಗಳ ಸಾಲು ಇದ್ದವು. ಆದರೆ, ಇತ್ತೀಚಿಗೆ ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕತ್ತರಿಸಿ ಹಾಕಲಾಗಿದೆ.

ಸದ್ಯಕ್ಕೆ ಕೋರ್ಟ್‌ ರಸ್ತೆ, ಹಾಲಿನ ಡೈರಿ ರಸ್ತೆ, ಕೋರ್ಟ್‌ ಆವರಣ, ರೋಜಿಪುರ, ಎಂ.ಎ.ಪ್ರಕಾಶ್‌ ಬಡವಾಣೆ ಪಾರ್ಕ್‌ ಸೇರಿದಂತೆ ಕೆಲವೇ ಪಾರ್ಕ್‌ನಲ್ಲಿ ಮಾತ್ರ ಸ್ಥಳೀಯ ವೈವಿಧ್ಯಮಯ ಮರಗಳನ್ನು ಕಾಣಬಹುದು. ಉಳಿದಂತೆ ನಗರಸಭೆ ವ್ಯಾಪ್ತಿಯ ಪಾರ್ಕ್‌ ಸೇರಿದಂತೆ ರಸ್ತೆ ಬದಿಗಳಲ್ಲಿ ನೆಡಲಾಗಿರುವ ಮರಗಳಲ್ಲಿ ಹಣ್ಣು, ಕಾಯಿ ಯಾವುದೂ ಇಲ್ಲ. ಇದ್ದರು ಸಹ ಯಾವುದೇ ಪಕ್ಷಿ, ಕೀಟ ತಿನ್ನುವುದಿಲ್ಲ. ಇಂತಹ ಮರ ಬೆಳೆಸಿರುವುದರಿಂದ ಮನುಷ್ಯರಿಗೆ ನೆರಳು ದೊರೆಯಬಹುದೇ ಹೊರತು ಪ್ರಕೃತಿಯ ಸಸ್ಯ ವೈವಿಧ್ಯತೆಯನ್ನು ಕಾಣಲು ಸಾಧ್ಯವಿಲ್ಲದಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮರಗಳು ಪ್ರಮಾಣ ಹೆಚ್ಚಾಗಬೇಕಿತ್ತು. ಆದರೆ, ವಿರುದ್ಧ ದಿಕ್ಕಿನಲ್ಲಿ ಮರಗಳ ಪ್ರಮಾಣ ಕಡಿಮೆಯಾಗಿದೆ ಎನ್ನುವುದು ಜೀವ ವೈವಿಧ್ಯ ಸಮೀಕ್ಷೆಯಿಂದ ತಿಳಿದುಬಂದಿದೆ. ನೆರಳಿಗಾಗಿ ಬೆಳೆಯುವ ಮರಗಳನ್ನು ಮಾತ್ರ ಬೆಳೆಸಲಾಗಿದೆ. ವಿದೇಶಗಳಿಂದ ಇಲ್ಲಿಗೆ ವಲಸೆ ಬಂದಿರುವ ಅಶೋಕ, ಕಾಡು ಬಾದಾಮಿ, ಗುಲ್‌ ಮೊಹರ್‌ ಸೇರಿದಂತೆ ಬರೀ ಹೂವು, ಎಲೆಗಳಷ್ಟೇ ಇರುವ ಮರ ಬೆಳೆಸಲಾಗಿದೆ. ಇದು ಸಸ್ಯ ವೈವಿಧ್ಯಕ್ಕೆ ಧಕ್ಕೆಯಾಗಿರುವುದಲ್ಲದೆ ಪಕ್ಷಿ ಸಂಕುಲಕ್ಕೂ ಉಪಯೋಗವೇ ಇಲ್ಲ ಎನ್ನುತ್ತಾರೆ ಪರಿಸರಾಸಕ್ತ ಸುಂ.ಸು.ಬದ್ರಿನಾಥ್‌.

ADVERTISEMENT

ನಗರಸಭೆ ವ್ಯಾಪ್ತಿಯಲ್ಲಿನ ಯಾವುದೇ ಪಾರ್ಕ್‌ಗಳಿಗೆ ಭೇಟಿ ನೀಡಿದರೂ ಒಂದೇ ರೀತಿಯ ವಿದೇಶಿ ಮರಗಳೇ ಕಾಣುತ್ತವೆ. ಆದರೆ, ನಗರದ ನ್ಯಾಯಾಲಯ ಆವರಣದಲ್ಲಿ ಮಾತ್ರ ಆಲ, ಅರಳಿ, ಗೋಣಿ, ನೇರಳೆ ಸೇರಿದಂತೆ ಸ್ಥಳೀಯ ಹಾಗೂ ಹತ್ತಾರು ಪಕ್ಷಿ, ಕೀಟಗಳಿಗೆ ಉಪಯುಕ್ತವಾದ, ವಾಯು ಮಾಲಿನ್ಯ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿರುವ ಮರ ಬೆಳೆಸಲಾಗಿದೆ.

‘ಸಮೀಕ್ಷೆಯೇ ತಿಳಿಸಿರುವಂತೆ ಹೊಂಗೆ, ಸಿಲ್ವರ್‌ ಮರಗಳ ಸಂಖ್ಯೆ ಹೆಚ್ಚಾಗಿದೆ. ಹೊಂಗೆ ಮನುಷ್ಯರ ದೃಷ್ಟಯಲ್ಲೇನೋ ಒಳ್ಳೆಯ ಮರ. ಆದರೆ, ಪಕ್ಷಿಗಳ ಆಹಾರದ ದೃಷ್ಟಿಯಿಂದ ನೋಡಿದರೆ ಉಪಯೋಗವಿಲ್ಲದ ಮರವಾಗುತ್ತದೆ. ಅಲ್ಲದೆ, ಯಾವುದೇ ಒಂದೇ ಜಾತಿಯ ಮರವನ್ನು ಹೆಚ್ಚಾಗಿ ಬೆಳೆಸುವುದು ಸಹ ಪರಿಸರ ಸಮತೋಲನ ದೃಷ್ಟಿಯಿಂದ ತಪ್ಪಾಗುತ್ತದೆ’ ಎನ್ನುತ್ತಾರೆ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌.

ಈಗ ನಡೆಯುತ್ತಿರುವ ಜೀವ ವೈವಿಧ್ಯದ ಸಮೀಕ್ಷೆಯಲ್ಲಿ ಗುರುತಿಸಿರುವ ಕೊರತೆಗಳನ್ನು ಸರಿಪಡಿಕೊಳ್ಳುವ ಕಡೆಗೆ ನಗರಸಭೆ ಆದ್ಯತೆ ನೀಡಬೇಕು. ಸಮೀಕ್ಷೆ ಬರೀ ಸರ್ಕಾರಕ್ಕೆ ಸಲ್ಲಿಸಲು ಸಿದ್ಧಪಡಿಸುವ ವರದಿಯಾಗಿ ಮಾತ್ರ ಉಳಿಯಬಾರದು ಎನ್ನುವುದು ಪರಿರಪ್ರೇಮಿಗಳ ಆಗ್ರಹ.

ನಗರಸಭೆಗೆ ಬೇಕಿದೆ ಪರಿಸರ ವಿಭಾಗ:ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಹಸಿರು ಉಳಿಸಬೇಕಾದ ಹೊಣೆಗಾರಿಕೆ ನಗರಸಭೆಯದ್ದು. ಜನರ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಲು ನಗರಸಭೆಯಲ್ಲಿ ಪರಿಸರ ಅಭಿವೃದ್ಧಿ ಅಥವಾ ನಿರ್ವಹಣೆ ವಿಭಾಗವೇ ಪ್ರತ್ಯೇಕವಾಗಿ ತೆರೆಯಬೇಕು.

ನಗರದಲ್ಲಿನ ಉದ್ಯಾನಗಳ ನಿರ್ವಹಣೆ, ಅಭಿವೃದ್ಧಿ, ಹೊಸ ಬಡಾವಣೆಗಳಲ್ಲಿ ಪಾಳು ಬಿದ್ದಿರುವ ಉದ್ಯಾನಗಳ ಅಭಿವೃದ್ಧಿ, ರಸ್ತೆ ಬದಿಗಳಲ್ಲಿ ನೆಟ್ಟಿರುವ ಸಸಿಗಳನ್ನು ಸಾಕು ಪ್ರಾಣಿಗಳಿಂದ ರಕ್ಷಿಸಿ ಬೇಸಿಗೆಯಲ್ಲಿ ನೀರು ಹಾಕಿ ಪೋಷಿಸುವ ಜವಾಬ್ದಾರಿ ಈ ವಿಭಾಗಕ್ಕೆ ವಹಿಸಬೇಕಿದೆ. ನಗರಸಭೆಯಲ್ಲಿ ಈಗಲು ಸಹ ಪರಿಸರ ಎಂಜಿನಿಯರ್‌ ಇದ್ದಾರೆ. ಆದರೆ, ಇವರು ಇಡೀ ನಗರದಲ್ಲಿನ ಕಸ ಎತ್ತಿಸುವುದು, ಚರಂಡಿಗಳ ಸ್ವಚ್ಛತೆ ನೋಡಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಇದರಿಂದಾಗಿಯೇ ನಗರದ ಹಸಿರೀಕರಣಕ್ಕೆ ಹಿನ್ನಡೆಯಾಗಿದೆ.

‘ಪರಿಸರ ಕೇಂದ್ರಿತ ಯೋಜನೆ ತಯಾರಾಗಲಿ’:ನಗರದ ಜನವಸತಿ ಪ್ರದೇಶದಲ್ಲಿ ಸಸಿಗಳನ್ನು ನೆಡುವಾಗ ಒಂದಿಷ್ಟು ಯೋಜನೆ ಅಗತ್ಯ. ಕಾರಣ ಮನೆಗಳ ಮುಂದೆ ಅರಳಿ, ಆಲ, ನೇರಳೆ ಸಸಿಗಳನ್ನು ನೆಟ್ಟರೆ ಯಾರೂ ಬೆಳೆಸಲು ಇಷ್ಟಪಡುವುದಿಲ್ಲ. ಕಟ್ಟಡಗಳಿಗೆ ಹಾನಿಯುಂಟಾಗದ ಹಣ್ಣಿನ ಸಸಿಗಳನ್ನು ನೆಟ್ಟರೆ ಜೋಪಾನ ಮಾಡಿ ಬೆಳೆಸುತ್ತಾರೆ ಎನ್ನುತ್ತಾರೆಚಿದಾನಂದ್‌.

ಸದ್ಯಕ್ಕೆ ನಗರದಲ್ಲಿ ಸುಮಾರು 60 ವಿವಿಧ ಜಾತಿಯ ಮರಗಳನ್ನು ಗುರುತಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವಾಗ ಹೊಂಗೆ, ಮಳೆ ಮರ, ಸಿಲ್ವರ್‌, ಗುಲ್‌ಮೊಹರ್‌ ನಂತಹ ಸಸಿಗಳನ್ನು ಮಾತ್ರ ನೆಡದೆ ವೈವಿಧ್ಯತೆಗೆ ಆದ್ಯತೆ ನೀಡಬೇಕಾಗಿದೆ. ಯಾವುದೇ ಯೋಜನೆಗಳನ್ನು ರೂಪಿಸುವಾಗಲು ಪರಿಸರ ಬೆಳವಣಿಗೆಗೆ ಅವಕಾಶ ಇರುವಂತೆಯೇ ಯೋಜನೆಯನ್ನು ರೂಪಿಸಬೇಕು ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.