ADVERTISEMENT

ಸರ್ಕಾರಿ ಸಂಘದಲ್ಲಿ ಮಹಿಳೆರಿಗೆ ಶೇ 50ರಷ್ಟು ಆದ್ಯತೆ ಬೇಕು: ಡಾ.ಲತಾ ಎಸ್. ಮಳ್ಳೂರು

ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 7:13 IST
Last Updated 20 ಮಾರ್ಚ್ 2023, 7:13 IST
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ವಿಶ್ವ ಮಹಿಳಾ ದಿನವನ್ನು ಉದ್ಘಾಟಿಸಲಾಯಿತು
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ವಿಶ್ವ ಮಹಿಳಾ ದಿನವನ್ನು ಉದ್ಘಾಟಿಸಲಾಯಿತು   

ದೊಡ್ಡಬಳ್ಳಾಪುರ: ‘ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಇತರೆ ಸಂಘಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಸ್ಥಾನ ಮೀಸಲಿಡಬೇಕು. ಇಲ್ಲವಾದಲ್ಲಿ ಸಂಘಗಳಲ್ಲಿ ನಮ್ಮ ಸದಸ್ಯತ್ವ ಹಿಂದಕ್ಕೆ ಪಡೆಯಲಾಗುವುದು’ ಎಂದು ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಡಾ.ಲತಾ ಎಸ್‌. ಮಳ್ಳೂರ್‌ ಹೇಳಿದರು.

ಅವರು ನಗರದ ಕನ್ನಡ ಜಾಗೃತ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಶಿಕ್ಷಣ ಇಲಾಖೆಯಲ್ಲಿ ಶೇ 50 ಕ್ಕಿಂತಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ. ಆದರೆ ತಾಲ್ಲೂಕು ಹಂತದಿಂದ ರಾಜ್ಯ ಮಟ್ಟದವರೆಗೂ ಸಂಘದಲ್ಲಿ ಮಾತ್ರ ಮಹಿಳೆಯರಿಗೆ ಜವಾಬ್ದಾರಿಯುತ ಸ್ಥಾನಗಳನ್ನು ನೀಡುವುದಿಲ್ಲ, ಮಹಿಳೆಯರ ಸಂಖ್ಯೆ ಕಡಿಮೆ ಇರುವ ಇಲಾಖೆಗಳಲ್ಲಿ ಮೀಸಲಾತಿ ಬೇಡ. ಆದರೆ ಆರೋಗ್ಯ, ಕಂದಾಯ, ಶಿಕ್ಷಣ ಮತ್ತಿತರೆ ಇಲಾಖೆಗಳ ಸಂಘದಲ್ಲಿ ಶೇ 50ರಷ್ಟು ಮೀಸಲಾತಿ ನೀಡಲೇಬೇಕು ಎಂದರು.

ADVERTISEMENT

‘ಸರ್ಕಾರಿ ನೌಕರಿಯಲ್ಲಿ ಮಹಿಳೆಯರ ಬೇಡಿಕೆ, ಸಮಸ್ಯೆಗಳೇ ಬೇರೆಯಾಗಿವೆ. ಇವುಗಳನ್ನು ಕೇಳಿ ಪಡೆಯಲು ಮಹಿಳೆಯರಿಗೆ ಸೂಕ್ತ ವೇದಿಕೆ ಅಗತ್ಯ ಇದೆ. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಸಂಘಟನೆ ಮಾಡಿದ್ದೇವೆ. ನಮ್ಮ ಸಂಘಟನೆ ಈಗ ಇರುವ ಯಾವುದೇ ಸರ್ಕಾರಿ ಸಂಘಟನೆಗಳಿಗೆ ಪರ್ಯಾಯ ಅಲ್ಲ. ಅವರೊಂದಿಗೆ ನಾವು ಸಹ ಇದ್ದೇವೆ, ಎಲ್ಲಾ ಹೋರಾಟಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದೇವೆ’ ಎಂದು ಹೇಳಿದರು.

ಮೇ ತಿಂಗಳಲ್ಲಿ ಎಲ್ಲಾ ರಾಜ್ಯಗಳ ಮಹಿಳಾ ನೌಕರರ ಸಂಘಟನೆಗಳನ್ನು ಒಳಗೊಂಡ ರಾಷ್ಟ್ರ ಮಟ್ಟದ ಸಂಘಟನೆ ಅಸ್ಥಿತ್ವಕ್ಕೆ ಬರಲಿದೆ. ದೇಶದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಹಿಳಾ ಸಾಧಕೀಯರ ದಿನಾಚರಣೆಗಳು ನಡೆಯುವಂತೆ ಮಾಡಬೇಕಿದೆ ಎಂದರು.

ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯೆ ಡಾ.ಬಿ.ಸವಿತ ಅವರು ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎನ್‌.ಶ್ರೀಕಂಠ ಉದ್ಘಾಟಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಎಂ.ತೇಜೋವತಿ, ಸಮಾರಂಭದಲ್ಲಿ ಜಿಲ್ಲಾ ಶಿಕ್ಷಣ ಅಧಿಕಾರಿ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ರಂಗಪ್ಪ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಜಿ.ಎಸ್‌.ಸ್ಮಿತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ದ್ರಾಕ್ಷಾಯಿಣಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಪ್ರದಾನ ರಾಜಶ್ರೀ ಸಜ್ಜೇಶ್ವರ್‌, ಉಪಾಧ್ಯಕ್ಷೆ ಪಿ.ಎಸ್‌.ಅನುಸೂಯದೇವಿ, ಜಿಲ್ಲಾ ಗೌರವ ಅಧ್ಯಕ್ಷೆ ಶೈಲಜ, ಪ್ರದಾನ ಕಾರ್ಯದರ್ಶಿ ಕೆ.ಜೆ.ಜಯಶ್ರೀ, ತಾಲ್ಲೂಕು ಘಟಕದ ಅಧ್ಯಕ್ಷೆ ಎನ್‌.ವಿ.ಮಂಜುಳ, ಪ್ರದಾನ ಕಾರ್ಯದರ್ಶಿ ಎಂ.ಎಚ್‌.ಮಂಗಳಕುಮಾರಿ, ಕೋಶಾಧ್ಯಕ್ಷೆ ಎನ್‌.ಇಂದ್ರಮ್ಮ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಜೈಕುಮಾರ್‌ ಪ್ರದಾನ ಕಾರ್ಯದರ್ಶಿ ವಸಂತಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಎಸ್‌.ರಾಜಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.