ADVERTISEMENT

ಹೊಸದಾಗಿ ಕೊರೆದ 28 ಬೋರ್‌ವೆಲ್‌ ವಿಫಲ! ಕಳವಳ ಮೂಡಿಸಿದ ಅಂತರ್ಜಲ ಮಟ್ಟ ಕುಸಿತ

ಖಾನಾಪುರದಲ್ಲಿ ಹೆಚ್ಚು

ಎಂ.ಮಹೇಶ
Published 13 ಮೇ 2019, 19:45 IST
Last Updated 13 ಮೇ 2019, 19:45 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

‌ಬೆಳಗಾವಿ: ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿಯಿಂದ 2018ರ ಏಪ್ರಿಲ್‌ನಿಂದ ಈ ವರ್ಷದ ಮೇ 11ರವರೆಗೆ ಹೊಸದಾಗಿ 965 ಬೋರ್‌ವೆಲ್‌ಗಳನ್ನು ಕೊರೆಯಲಾಗಿದ್ದು, ಈ ಪೈಕಿ 28 ವಿಫಲವಾಗಿವೆ! ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕ್ರಮೇಣ ಕುಸಿಯುತ್ತಿರುವುದಕ್ಕೆ ಇದು ಕನ್ನಡಿ ಹಿಡಿದಿದೆ.

‌ಇಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಂತರ್ಜಲ ಮಟ್ಟ ಕುಸಿದಿದೆ. ಈ ವರ್ಷದ ಜನವರಿಯಿಂದ ಏಪ್ರಿಲ್‌ ಅಂತ್ಯದವರೆಗೆ ಸರಾಸರಿ 3 ಮೀಟರ್‌ನಷ್ಟು ಪಾತಾಳಕ್ಕೆ ಇಳಿದಿದೆ. ಹೀಗಾಗಿ, ಕೊಳವೆಬಾವಿಗಳು ನಿಷ್ಕ್ರಿಯವಾಗುತ್ತಿರುವುದು, ಹೊಸದಾಗಿ ಕೊರೆದಾಗ ವಿಫಲವಾಗುತ್ತಿರುವುದು ಕಂಡುಬಂದಿದೆ. ಪರಿಣಾಮ, ಹಲವು ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದುಕೊಂಡು ನೀರನ್ನು ಟ್ಯಾಂಕರ್‌ ಮೂಲಕ ಪೂರೈಸಲಾಗುತ್ತಿದೆ. ಈವರೆಗೆ 95 ಜನವಸತಿಗಳಿಗೆ ಟ್ಯಾಂಕರ್‌ ನೀರೇ ಗತಿಯಾಗಿದೆ.

ಮಳೆ ಕೊರತೆ ಕಾರಣ:

ADVERTISEMENT

ಪಶ್ಚಿಮ ಘಟ್ಟದ ಸೆರಗಿನಲ್ಲಿರುವ, ಬಹುತೇಕ ಮಲೆನಾಡು ಪ್ರದೇಶದಿಂದಲೇ ಕೂಡಿರುವ ಖಾನಾಪುರ ತಾಲ್ಲೂಕಿನಲ್ಲಿ 124 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, ಇದರಲ್ಲಿ 109 ಸಫಲವಾಗಿವೆ. ಇಲ್ಲಿ ಬರೋಬ್ಬರಿ 15 ಕೊಳವೆಬಾವಿಗಳು ವಿಫಲವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಉಳಿದಂತೆ ರಾಮದುರ್ಗ ತಾಲ್ಲೂಕಿನಲ್ಲಿ 11 ಕೊಳವೆಬಾವಿಗಳು ವಿಫಲವಾಗಿವೆ.

ಅಚ್ಚರಿ ಎಂದರೆ ಬೆಳಗಾವಿ, ಬೈಲಹೊಂಗಲ, ಅಥಣಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಯಬಾಗ ತಾಲ್ಲೂಕುಗಳಲ್ಲಿ ಕೊರೆಯಲಾದ ಎಲ್ಲ ಕೊಳವೆಬಾವಿಗಳೂ ಸಫಲವಾಗಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಜಿಲ್ಲಾ ಪಂಚಾಯ್ತಿ ನೀಡಿರುವ ಮಾಹಿತಿ ಪ್ರಕಾರ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಹಾಗೂ ಕಾರ್ಯಪಡೆಯ ಅನುಮೋದನೆಯಂತೆ ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ.

ಹಲವು ವರ್ಷಗಳಿಂದಲೂ ಮಳೆ ಕೊರತೆ ಉಂಟಾಗುತ್ತಿರುವುದು, ಮಳೆ ನೀರು ಸಂಗ್ರಹಕ್ಕೆ ಅಥವಾ ಇಂಗಿಸುವುದಕ್ಕೆ ಕ್ರಮ ಕೈಗೊಳ್ಳದಿರುವ ಭಾಗಗಳಲ್ಲಿ ಕೊಳವೆಬಾವಿಗಳನ್ನು ಕೊರೆದು ನೀರು ಪೂರೈಸುವ ಉದ್ದೇಶ ಸಫಲವಾಗುತ್ತಿಲ್ಲ. ನೀರಿನ ಸೆಲೆ ಇರಬಹುದಾದ ಜಾಗವೆಂದು ತಿಳಿದುಕೊಂಡು ಕೊರೆದಿದ್ದರೂ ನೀರು ದೊರೆತಿಲ್ಲ. ತಾಪಮಾನ ಏರುತ್ತಿರುವುದು, ನೀರಿನ ಇಂಗುವಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುತ್ತಿಲ್ಲ. ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಕೊರೆಯುವುದಕ್ಕೆ ತಡೆ:

‌ಅಂತರ್ಜಲ ಮಟ್ಟ ಕುಸಿತ ಚಿಂತಾಜನಕ ಸ್ಥಿತಿಯಲ್ಲಿರುವುದರಿಂದಾಗಿ, ಕುಡಿಯುವ ನೀರಿನ ಸಮಸ್ಯೆಯಾಗುವ 69 ಪ್ರದೇಶದಲ್ಲಿ ಕೊಳವೆಬಾವಿ ಕೊರೆಸುವುದನ್ನು ನಿಲ್ಲಿಸಿದೆ. ಖಾಸಗಿಯವರಿಂದ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಅಥವಾ ಪರ್ಯಾಯ ಮೂಲಗಳಿಂದ ನೀರು ಪೂರೈಸಲಾಗುತ್ತಿದೆ.

ಪ್ರತಿ ವರ್ಷದಂತೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಆಗದಿರುವುದರಿಂದಾಗಿ ಕೃಷ್ಣಾ ನದಿ ಸಂಪೂರ್ಣ ಬತ್ತಿದೆ. ಈ ನದಿ ತೀರದ ಚಿಕ್ಕೋಡಿ, ರಾಯಬಾಗ, ಅಥಣಿ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿನ ಕುಸಿತ ಕಾಣುತ್ತಿದೆ.

ತಾಲೂಕುವಾರು ಅಂತರ್ಜಲ ಕುಸಿತ ಮಾಹಿತಿ (ಮೀಟರ್‌ಗಳಲ್ಲಿ)
ತಾಲೂಕು; ಜನವರಿ; ಏಪ್ರಿಲ್‌

ಸವದತ್ತಿ; 25.76; 7.52
ರಾಮದುರ್ಗ; 15.56; 20.16
ಚಿಕ್ಕೋಡಿ; 13.88; 17.14
ಬೈಲಹೊಂಗಲ; 13.15; 16.13
ಹುಕ್ಕೇರಿ; 12.46; 16.35
ಖಾನಾಪುರ; 10.49; 13.18
ಅಥಣಿ; 9.84; 12.42
ಬೆಳಗಾವಿ; 7.97; 9.38
ಗೋಕಾಕ; 7.70; 9.35
ರಾಯಬಾಗ; 7.74; 8.31

ಬೋರ್‌ವೆಲ್‌ ಸಫಲ–ವಿಫಲ ಮಾಹಿತಿ
ತಾಲ್ಲೂಕು; ಕೊರೆದ್ದು; ಸಫಲ; ವಿಫಲ

ಬೆಳಗಾವಿ; 54;54;0
ಖಾನಾಪುರ; 124;109;15
ಬೈಲಹೊಂಗಲ; 89;89;0
ಸವದತ್ತಿ; 57;55;2
ರಾಮದುರ್ಗ; 130;119;11
ಅಥಣಿ; 98;98;0
ಚಿಕ್ಕೋಡಿ; 93;93;0
ಗೋಕಾಕ; 114;114;0
ಹುಕ್ಕೇರಿ; 54;54;0
ರಾಯಬಾಗ; 152;152;0
ಒಟ್ಟು; 965; 937; 28

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.