ADVERTISEMENT

ಹಲವು ದೇಗುಲ: ಜನರ ದರ್ಶನಕ್ಕೆ ಮುಕ್ತ

ಯಲ್ಲಮ್ಮನಗುಡ್ಡದಲ್ಲಿ ನಿರ್ಬಂಧ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 12:37 IST
Last Updated 21 ಸೆಪ್ಟೆಂಬರ್ 2021, 12:37 IST
ರಾಯಬಾಗ ತಾಲ್ಲೂಕು ಚಿಂಚಲಿಯ ಮಾಯಕ್ಕದೇವಿ ದೇವಸ್ಥಾನದ ನೋಟ
ರಾಯಬಾಗ ತಾಲ್ಲೂಕು ಚಿಂಚಲಿಯ ಮಾಯಕ್ಕದೇವಿ ದೇವಸ್ಥಾನದ ನೋಟ   

ಬೆಳಗಾವಿ: ‘ಜಿಲ್ಲೆಯ ಸವದತ್ತಿ ತಾಲ್ಲೂಕಿನ ಜೋಗುಳಭಾವಿ ಸತ್ತೆಮ್ಮದೇವಿ ದೇವಸ್ಥಾನ, ರಾಯಬಾಗ ತಾಲ್ಲೂಕು ಚಿಂಚಲಿ‌ ಮಾಯಕ್ಕ ದೇವಿ, ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿ ಹೊಳೆಮ್ಮದೇವಿ ಮತ್ತು ಕಾಗವಾಡ ತಾಲ್ಲೂಕಿನ ಮಂಗಸೂಳಿಯ ಮಲ್ಲಯ್ಯ ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನಕ್ಕೆ ಸೆ.22ರಿಂದ ಷರತ್ತಬದ್ಧ ಅನುಮತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಕಾರಣದಿಂದಾಗಿ ಈ ದೇವಾಲಯಗಳಲ್ಲಿ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈಗ, ಕೊರೊನಾ ವೈರಾಣು ಹರಡುವಿಕೆ ಹತೋಟಿಗೆ ಬರುತ್ತಿದ್ದು ಹಲವು ಜನಪ್ರತಿನಿಧಿಗಳು ಮತ್ತು ಭಕ್ತರ ಮನವಿಗಳನ್ನು ಪರಿಗಣಿಸಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ದೇವಾಲಯಗಳಲ್ಲಿ ಜನಸಂದಣಿ ಸೇರುವಂತಹ ವಿಶೇಷ ಉತ್ಸವ, ಜಾತ್ರೆ ಮೊದಲಾದ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ. ಅವುಗಳನ್ನು ದೇವಸ್ಥಾನದವರು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಿ ಪೂರ್ಣಗೊಳಿಸಬೇಕು. ಭಕ್ತರು ಪರಸ್ಪರ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ಬಂದು ದರ್ಶನ ಪಡೆಯಲು ಬೇಕಾದ ವ್ಯವಸ್ಥೆಗಳನ್ನು ಮಾಡಬೇಕು ಮತ್ತು ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆದೇಶಿಸಿದ್ದಾರೆ.

ADVERTISEMENT

ಮಾರ್ಗಸೂಚಿ ಪಾಲಿಸಬೇಕು:

ಮಾಸ್ಕ್‌ ಧರಿಸುವುದು, ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಸೈಟರ್‌ ಬಳಕೆ ಮೊದಲಾದವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದೇವಸ್ಥಾನದ ಪ್ರಾಂಗಣ ಪ್ರವೇಶಿಸುವುದಕ್ಕೆ ಮುನ್ನವೇ ಭಕ್ತರ ದೇಹದ ಉಷ್ಣಾಂಶ ಪರೀಕ್ಷಿಸಬೇಕು. ಆರೋಗ್ಯ ಸಮಸ್ಯೆ ಇಲ್ಲದವರಿಗೆ ಮಾತ್ರ ಅವಕಾಶ ಕೊಡಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ನಿಟ್ಟಿನಲ್ಲಿ ದೇವಸ್ಥಾನ ಆಡಳಿತ ಮಂಡಳಿಯವರು ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಸಾರ್ವಜನಿಕರರ ದರ್ಶನಕ್ಕೆ ನೀಡಿರುವ ಅವಕಾಶವನ್ನು ರದ್ದುಪಡಿಸಲಾಗುವುದು. ಪರಿಸ್ಥಿತಿ ಆಧರಿಸಿ ಹೆಚ್ಚುವರಿ ಷರತ್ತುಗಳನ್ನು ಕೂಡ ನೀಡಲಾಗುವುದು. ಸ್ಥಳೀಯ ಆಡಳಿತ ಪ್ರಾಧಿಕಾರಗಳು ಈ ನಿಟ್ಟಿನಲ್ಲಿ ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ.

ಯಲ್ಲಮ್ಮನಗುಡ್ಡದಲ್ಲಿ ಅವಕಾಶವಿಲ್ಲ:

ಇದರೊಂದಿಗೆ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ದೇವಸ್ಥಾನವೊಂದನ್ನು ಬಿಟ್ಟು ಎಲ್ಲ ದೇಗುಲಗಳಲ್ಲೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ದೊರೆತಂತಾಗಿದೆ. ಕೋವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದಾಗಿ, ಯಲ್ಲಮ್ಮನ ಗುಡ್ಡದಲ್ಲೂ ಜನರಿಗೆ ಷರತ್ತುಬದ್ಧ ಅನುಮತಿ ನಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

‘ಆ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದವರಿಗೆ ಬಹಳಷ್ಟು ತೊಂದರೆಯಾಗಿದೆ. ಪ್ರಸ್ತುತ ಕೊರೊನಾ ಪರಿಸ್ಥಿತಿಯೂ ಬದಲಾವಣೆಯಾಗಿದೆ. ಹೀಗಾಗಿ, ಮಾರ್ಗಸೂಚಿಗಳನ್ನು ರೂಪಿಸಿ ಯಲ್ಲಮ್ಮನಗುಡ್ಡದಲ್ಲೂ ಭಕ್ತರಿಗೆ ಅವಕಾಶ ಕೊಡುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.