ADVERTISEMENT

‘ಲಿಂಗಾಯತ ಧರ್ಮ ಪ್ರಚುರಪಡಿಸಿದ ಲಿಂಗಾನಂದ ಶ್ರೀ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 7:09 IST
Last Updated 13 ಸೆಪ್ಟೆಂಬರ್ 2021, 7:09 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಚತುರ್ ಶರಣೋತ್ಸವದಲ್ಲಿ ವಿಶ್ವಗುರು ಬಸವ ಮಂಟಪದ ಅಧ್ಯಕ್ಷ ಬಸವಪ್ರಕಾಶ ಸ್ವಾಮೀಜಿ ಮಾತನಾಡಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ಚತುರ್ ಶರಣೋತ್ಸವದಲ್ಲಿ ವಿಶ್ವಗುರು ಬಸವ ಮಂಟಪದ ಅಧ್ಯಕ್ಷ ಬಸವಪ್ರಕಾಶ ಸ್ವಾಮೀಜಿ ಮಾತನಾಡಿದರು   

ಬೆಳಗಾವಿ: ‘ಸರ್ವರಿಗೂ ಸಮಾನತೆ ಬಯಸುವ ಲಿಂಗಾಯತ ಧರ್ಮವನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಿದವರಲ್ಲಿ ಲಿಂಗಾನಂದ ಸ್ವಾಮೀಜಿ ‍ಪ್ರಮುಖರಾಗಿದ್ದಾರೆ’ ಎಂದು ಇಲ್ಲಿನ ವಿಶ್ವಗುರು ಬಸವ ಮಂಟಪದ ಅಧ್ಯಕ್ಷ ಬಸವಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಕಣಬರ್ಗಿ ರಸ್ತೆಯಲ್ಲಿರುವ ವಿಶ್ವಗುರು ಬಸವ ಮಂಟಪದಲ್ಲಿ ವಿಶ್ವಗುರು ಬಸವಜ್ಯೋತಿ ಯತ್ರಾ ಸಮಿತಿ, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಬಸವಾಂಕುರ ಸಹಯೋಗದಲ್ಲಿ ಭಾನುವಾರ ನಡೆದ 18ನೇ ಚತುರ್ ಶರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಳಗಾವಿ ನೆಲದಲ್ಲೇ ಬಸವಜ್ಞಾನೋದಯ ಹೊಂದಿದ ಲಿಂಗಾನಂದರು, ತಮ್ಮ ಅಸಾಮಾನ್ಯ ವಿದ್ವತ್ ಪ್ರತಿಭೆಯಿಂದ ಅನೇಕ ಭಕ್ತರನ್ನು ಆಕರ್ಷಿಸಿದರು. ಅವರಲ್ಲಿ ಆಧ್ಯಾತ್ಮದ ಅರಿವು ಮತ್ತು ಧರ್ಮದ ಪ್ರಜ್ಞೆ ಬೆಳೆಸಿದರು. ಸಮಾನತೆ, ಸಾಮಾಜಿಕ ಹಾಗೂ ಸಾಮೂಹಿಕ ಚಿಂತನೆಗೆ ಆಸ್ಪದ ಮಾಡಿಕೊಟ್ಟರು. ಬಸವಣ್ಣ ಎಂದರೆ ಎತ್ತಲ್ಲ; ಅಸಮಾನತೆ ಮತ್ತು ಮೌಢ್ಯಾಚರಣೆಯಲ್ಲಿ ಮಿಂದಿರುವ ಮಾನವರನ್ನು ಮೇಎತ್ತಲು ಬಂದ ಮಹಾ ಪ್ರವಾದಿ ಪುರಷರು ಎಂದು ವಚನಗಳ ಮೂಲಕ ವ್ಯವಸ್ಥಿತವಾಗಿ ಪ್ರಚಾರ ಮಾಡಿದರು’ ಎಂದು ತಿಳಿಸಿದರು.

ADVERTISEMENT

ಲಿಂ. ಲಿಂಗಾನಂದ ಸ್ವಾಮೀಜಿ 91ನೇ ಜಯಂತ್ಯುತ್ಸವ, ಮಾತೆ ಗಂಗಾದೇವಿ ತಾಯಿ 63ನೇ ವರ್ಧಂತ್ಯುತ್ಸವ, ಭಕ್ತಿ ಪಕ್ಷ ಬೆಳಗಾವಿ ರಾಷ್ಟ್ರೀಯ ಬಸವ ದಳದ 28ನೇ ವಾರ್ಷಿಕೋತ್ಸವ ಮತ್ತು ವಿಶ್ವಗುರು ಬಸವಜ್ಯೋತಿ ಯಾತ್ರೆಯ 18ನೇ ಮಂಗಲೋತ್ಸವವನ್ನು ಆಚರಿಸಲಾಯಿತು.

ಮಹಾನಗರಪಾಲಿಕೆ ಸದಸ್ಯ ರಾಜಶೇಖರ ಡೋಣಿ ಉದ್ಘಾಟಿಸಿದರು. ಕರಡಿಗುದ್ದಿ ಜಡೇಸಿದ್ದೇಶ್ವರ ಮಠ ಸೇವಾ ಸಮಿತಿಯ ಅಧ್ಯಕ್ಷ ಗಂಗಪ್ಪ ಮತ್ತಿಕೊಪ್ಪ ಬಸವಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರೀಯ ಬಸವ ದಳದ ಕಾರ್ಯಾಧ್ಯಕ್ಷ ಅಶೋಕ ಬೆಂಡಿಗೇರಿ ಸ್ವಾಗತಿಸಿದರು. ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಮಾರಯ್ಯ ಗಡಗಲಿ ಮತ್ತು ಗೌರವಾಧ್ಯಕ್ಷ ಕೆ. ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಗುಡಸ್ ಅತಿಥಿಗಳನ್ನು ಪರಿಚಯಿಸಿದರು. ಸಂಘಟನಾ ಕಾರ್ಯದರ್ಶಿ ಶರಣಪ್ರಸಾದ್ ನಿರೂಪಿಸಿದರು. ಶಿಲ್ಪಾ ಗೋಡ್ಯಾಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.