ADVERTISEMENT

ಮೋದಿಯಿಂದಾಗಿ ಜನರಿಗೆ ನರಕ ದರ್ಶನ: ಸಲೀಂ ಅಹಮದ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 10:49 IST
Last Updated 22 ಸೆಪ್ಟೆಂಬರ್ 2021, 10:49 IST
   

ಬೆಳಗಾವಿ: ‘ಸ್ವರ್ಗ ತೋರಿಸುತ್ತೇವೆ ಎಂಬ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರಿಂದ ಜನರಿಗೆ ನರಕ ದರ್ಶನವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಟೀಕಾಪ್ರಹಾರ ನಡೆಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆಂದು ₹20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ವರ್ಗದವರಿಗೂ ನಯಾಪೈಸೆಯೂ ಸಿಕ್ಕಿಲ್ಲ’ ಎಂದು ದೂರಿದರು.

‘ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ. ಸುಳ್ಳು ಹೇಳುವವರಿಗೆ ಆಸ್ಕರ್‌ ಪ್ರಶಸ್ತಿ ಕೊಡಬೇಕು ಎಂದಾದರೆ ಅದಕ್ಕೆ ಮೋದಿ ಭಾಜನವಾಗುತ್ತಾರೆ’ ಎಂದು ಟೀಕಿಸಿದರು.

ADVERTISEMENT

‘ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಿರುವ ಈ ನಿರ್ಜೀವ ಸರ್ಕಾರವನ್ನು ಕಿತ್ತೆಸೆಯಲು ಜನರು ಬಯಸಿದ್ದಾರೆ. ಬಿಜೆಪಿಯ ದುರಾಡಳಿತದಿಂದ ಜನರು ಭ್ರಮನಿರಸನಗೊಂಡಿದ್ದಾರೆ’ ಎಂದರು.

ಬಿಜೆಪಿ ಸರ್ಕಾರ ವಿಫಲ:‘ಕೋವಿಡ್‌ನಿಂದ ಮೃತರಾದವರ ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ, ಮೃತರ ಲೆಕ್ಕವನ್ನೂ ಕೊಟ್ಟಿಲ್ಲ; ಪರಿಹಾರವನ್ನೂ ನೀಡಿಲ್ಲ. ಈ ಭ್ರಷ್ಟ ಸರ್ಕಾರ ಸುಳ್ಳಿನ ಸರಮಾಲೆ ಕಟ್ಟುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಕೋವಿಡ್‌ನಿಂದ ಸಾವಿರಾರು ಜನರು ಮೃತರಾಗಿದ್ದಾರೆ. ಆ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ತೈಲ ಬೆಲೆ, ಅಡುಗೆ ಅನಿಲ ಸಿಲಿಂಡರ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತೈಲದ ಮೇಲಿನ ತೆರಿಗೆ ಕಡಿತಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಿತ್ತು. ಇದರ ಬದಲಿಗೆ ಸರ್ಕಾರವು ಪ್ರತಿ ಹಂತದಲ್ಲೂ ಲೂಟಿ ಮಾಡುತ್ತಿದೆ’ ಎಂದು ದೂರಿದರು.

ವೈಫಲ್ಯಗಳನ್ನು ತಿಳಿಸಲಾಗುವುದು:‘ಅ.2ರಿಂದ 30ರವರೆಗೆ ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಗ್ರಾಮ ಸ್ವರಾಜ್ಯ ಸಭೆ ನಡೆಸಲಾಗುವುದು. ನ.30ರ ಒಳಗಾಗಿ ಎಲ್ಲಾ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸಮಿತಿ ಸಭೆ ನಡೆಸಿ, ಪಕ್ಷ ಬಲಪಡಿಸುವ ಕೆಲಸ ಹಾಗೂ ದೇಶಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಗಳನ್ನು ಗ್ರಾಮೀಣ ಜನತೆಗೆತಿಳಿಸುವ ಕಾರ್ಯಕ್ರಮಗಳು ನಡೆಯಲಿವೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲಾಗುವುದು. ಅದಕ್ಕಾಗಿ ಬೂತ್‌ ಮಟ್ಟದಲ್ಲಿ ಚರ್ಚೆ, ಎರಡು ದಿನಗಳ ತರಬೇತಿ ಶಿಬಿರ ನಡೆಸುವ ಯೋಜನೆ ಇದೆ’ ಎಂದು ತಿಳಿಸಿದರು.

‘ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆ ಎದುರಿಸಲು ಪಕ್ಷವನ್ನು ತಳಮಟ್ಟದಿಂದ ಬಲಿಷ್ಠಗೊಳಿಸಬೇಕಾಗಿದೆ. ಈ ಉದ್ದೇಶದಿಂದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಲಾಗುವುದು’ ಎಂದು ಹೇಳಿದರು.

ನಗರ ಸಮಿತಿ ಅಧ್ಯಕ್ಷ ರಾಜು ಸೇಠ್, ಜಿಲ್ಲಾ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಶಾಸಕ ಫಿರೋಜ್ ಸೇಠ್, ಸುನೀಲ ಹನುಮಣ್ಣವರ, ಹಬೀಬ ಶಿಲ್ಲೇದಾರ, ರಾಜೇಂದ್ರ ಪಾಟೀಲ, ಇಮ್ರಾನ್ ತಪಕೀರ, ಮೋಹನ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.