ADVERTISEMENT

ಸೋಮವಾರ ಬೆಳಿಗ್ಗೆವರೆಗೂ ನಡೆದ ಗಣೇಶ ಮೂರ್ತಿಗಳ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 13:34 IST
Last Updated 20 ಸೆಪ್ಟೆಂಬರ್ 2021, 13:34 IST
ಗಣೇಶ ಮೂರ್ತಿಗಳ ವಿಸರ್ಜನೆ ಕಾಲಕ್ಕೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಮೇಲ್ಸೇತುವೆಯಲ್ಲಿ ಭಾನುವಾರ ತಡರಾತ್ರಿ ಕಂಡುಬಂದ ಜನಸಂದಣಿ
ಗಣೇಶ ಮೂರ್ತಿಗಳ ವಿಸರ್ಜನೆ ಕಾಲಕ್ಕೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಮೇಲ್ಸೇತುವೆಯಲ್ಲಿ ಭಾನುವಾರ ತಡರಾತ್ರಿ ಕಂಡುಬಂದ ಜನಸಂದಣಿ   

ಬೆಳಗಾವಿ: ನಗರದಲ್ಲಿ ಭಾನುವಾರ ಬೆಳಿಗ್ಗೆ ಆರಂಭಗೊಂಡಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ 6ಕ್ಕೆ ಮುಗಿಯಿತು. ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ನಗರದ ಕಪಿಲೇಶ್ವರ ಹೊಂಡ ಬಳಿಯ 2 ಸೇರಿದಂತೆ ಹಲವೆಡೆ ಹೊಂಡಗಳಲ್ಲಿ ವಿಸರ್ಜನೆಗೆ ವ್ಯವವ್ಥೆ ಮಾಡಲಾಗಿತ್ತು. ‘ಕೋವಿಡ್ ಕಾರಣದಿಂದ ಮೆರವಣಿಗೆಗೆ ಅವಕಾಶವಿಲ್ಲ. 10 ಮಂದಿಯಷ್ಟೆ ಬರಬೇಕು. ಡಾಲ್ಬಿ ಬಳಸುವಂತಿಲ್ಲ. ಮಾಸ್ಕ್‌ ಧರಿಸುವುದು ಮತ್ತು ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಪೊಲೀಸ್ ಇಲಾಖೆಯಿಂದ ಸೂಚಿಸಲಾಗಿತ್ತು. ಆದರೆ, ಇದ್ಯಾವುದನ್ನೂ ಭಕ್ತರು ಪಾಲಿಸಲಿಲ್ಲ. ಭಕ್ತಿ–ಭಾವ ಮತ್ತು ಸಂಭ್ರಮದ ನಡುವೆ ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದು ಕಂಡುಬಂತು.

ಕಪಿಲೇಶ್ವರ ಹೊಂಡ ಹಾಗೂ ಅದನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಈ ಮೂಲಕ ರಾತ್ರಿ ಕರ್ಫ್ಯೂ (ರಾತ್ರಿ 9ರ ನಂತರ) ಪಾಲನೆ ಆಗಲಿಲ್ಲ. ಜನರನ್ನು ನಿಯಂತ್ರಿಸಲು ಮತ್ತು ಗುಂಪುಗೂಡುತ್ತಿದ್ದವರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಅಲ್ಲಲ್ಲಿ ಕೆಲವರು ಪೊಲೀಸರ ವಿರುದ್ಧವೇ ತಿರುಗಿಬಿದ್ದರು. ಕೆಲವು ಮಹಾಮಂಡಳದವರು ಡಾಲ್ಬಿ ಬಳಸಿದ್ದಕ್ಕೆ ಡಿಸಿಪಿ ವಿಕ್ರಂ ಅಮಟೆ ಗರಂ ಆಗಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ADVERTISEMENT

ಕಪಿಲೇಶ್ವರ ಮಂದಿರದ ಆವರಣ ಹಾಗೂ ಸಂಪರ್ಕಿಸುವ ರಸ್ತೆಗಳಲ್ಲಿ ಗುಲಾಲಿನ ರಂಗು ಕಂಡುಬಂತು. ಹೊಂಡಗಳ ಬಳಿ ಮಾಸ್ಕ್‌ ಧರಿಸುವಂತೆ ಹಾಗೂ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಪದೇ ಪದೇ ಮಾಡುತ್ತಿದ್ದ ಮನವಿಗೆ ಮನ್ನಣೆ ಸಿಗಲಿಲ್ಲ. ಕತ್ತಲಾಗುತ್ತಿದ್ದಂತೆಯೇ ಜನಸಂದಣಿ ಹೆಚ್ಚಾಗುತ್ತಲೇ ಇತ್ತು. ವಿವಿಧ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ಸ್ಥಳೀಯರು ತೆರೆದ ವಾಹನಗಳಲ್ಲಿ ಮೆರವಣಿಗೆಯಲ್ಲಿ ತಂದು ಸಂಭ್ರಮದಿಂದ ವಿಸರ್ಜಿಸಿದರು. ಚಳಿಯ ನಡುವೆಯೂ ಭಕ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕೋವಿಡ್ ಭೀತಿಯನ್ನೂ ಲೆಕ್ಕಿಸದೆ ಅವರು ಭಕ್ತಿಭಾವದ ಕಡಲಲ್ಲಿ ಮಿಂದೆದ್ದರು. ಪಟಾಕಿಗಳ ಸಿಡಿತದ ಸದ್ದು, ಸಿಳ್ಳೆ–ಕೇಕೆ ಹಾಗೂ ಜೈಕಾರ ಮುಗಿಲು ಮುಟ್ಟಿತ್ತು.

ದೊಡ್ಡ ದೊಡ್ಡ ಮೂರ್ತಿಗಳನ್ನು, ಮಹಾನಗರಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದ ಕ್ರೇನ್‌ಗಳ ಮೂಲಕ ವಿಸರ್ಜಿಸಲಾಯಿತು. ಸ್ಥಳದಲ್ಲಿದ್ದ ಪಾಲಿಕೆ ಅಧಿಕಾರಿಗಳು ವಿಸರ್ಜನೆಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡುತ್ತಿದ್ದರು.

ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಧಿಕಾರಿಗಳು ಗಸ್ತಿನ ಮೂಲಕ ಹೆಚ್ಚಿನ ನಿಗಾ ವಹಿಸಿದ್ದರು. ಡಿಸಿಪಿ ವಿಕ್ರಂ ಹಾಗೂ ಅಧಿಕಾರಿಗಳು ಫೀಲ್ಡಿಗಿಳಿದು ಕಾರ್ಯನಿರ್ವಹಿಸಿದರು.

ಶಾಸಕ ಭೇಟಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮುಂಜಾನೆ 2ರ ಸುಮಾರಿಗೆ ಕಪಿಲೇಶ್ವರ ಹೊಂಡದ ಬಳಿಗೆ ಬೆಂಬಲಿಗರೊಂದಿಗೆ ಭೇಟಿ ನೀಡಿ, ಮೂರ್ತಿಗಳ ವಿಸರ್ಜನಾ ಕಾರ್ಯವನ್ನು ವೀಕ್ಷಿಸಿದರು. ಬಳಿಕ ಗೋವಾವೇಸ್ ವೃತ್ತದಲ್ಲಿರುವ ತಿನಿಸು ಕಟ್ಟೆಯಲ್ಲಿ ಚಹಾ ಸೇವಿಸಿದರು.

ಕಕಮರಿಯಲ್ಲೂ ಸಂಭ್ರಮ

ಕಕಮರಿ: ಗ್ರಾಮದ ಗುರುಮಠದಲ್ಲಿ ಸತತವಾಗಿ 15ನೇ ವರ್ಷ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಭಾನುವಾರ ವಿಸರ್ಜಿಸಲಾಯಿತು.

ಬೆಳಿಗ್ಗೆ 10ರಿಂದ ಅನ್ನಪ್ರಸಾದ ವಿತರಣೆ ನಡೆಯಿತು. ಯುವಕರು ಗುಲಾಲು ಹಾಕಿಕೊಂಡು, ಗಣಪತಿ ಬಪ್ಪಾ ಮೋರಯಾ ಘೋಷಣೆ ಕೂಗಿ ಸಂಭ್ರಮಿಸಿದರು. ಗುರುಮಠದ ಯುವಕ ಮಂಡಳದ ಸಂತೋಷ ಮಠಪತಿ, ಕಲ್ಮೇಶ ಕನ್ನಾಳ, ಪ್ರವೀಣ ಹಿರೇಮಠ, ಶಿವಾನಂದ ಅವರಾದಿ, ಸದಾಶಿವ ಮಠಪತಿ, ಮುತ್ತು ಹಾಲಗುಣಕಿ, ಸುಮೀತ ಈರಗೌಡ, ಸಿದ್ದು ಕನ್ನಾಳ, ಶ್ರೀಧರ ಹೊನವಾಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.