ADVERTISEMENT

ಬೆಳಗಾವಿ ಮಹಾನಗರಪಾಲಿಕೆ: 'ತಪ್ಪು ಮತದಾರರ ಪಟ್ಟಿ’ಯಿಂದ ಗೊಂದಲ- ಡಿ.ಕೆ.ಶಿವಕುಮಾರ್

ಸೋಲಿನ ಅಧ್ಯಯನ ನಡೆಸಲು ಎಐಸಿಸಿ ತಂಡ ಬೆಳಗಾವಿಗೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 14:20 IST
Last Updated 12 ಸೆಪ್ಟೆಂಬರ್ 2021, 14:20 IST
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿದರು
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿದರು   

ಬೆಳಗಾವಿ: ‘ಮಹಾನಗರಪಾಲಿಕೆ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳು ನಮ್ಮ ಅಭ್ಯರ್ಥಿಗಳಿಗೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತರಿಗೆ ಹಾಗೂ ಪಕ್ಷೇತರರಿಗೆ ಕೊಟ್ಟಿದ್ದ ಮತದಾರರ ಪಟ್ಟಿ ಬೇರೆಯದ್ದೇ ಆಗಿತ್ತು. ತಪ್ಪು ಪಟ್ಟಿ ಕೊಟ್ಟಿದ್ದರು. ಇದರಿಂದ ಮತದಾರರಿಗೆ ಗೊಂದಲವಾಗಿದೆ. ಆದರೆ, ಬಿಜೆಪಿಯವರಿಗೆ ಸರಿಯಾದ ಪಟ್ಟಿ ನೀಡಿದ್ದಾರೆ’ ಎಂದು ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋ‍‍ಪಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ 1.50 ಲಕ್ಷ ಮತಗಳು ಬಂದಿವೆ. ಸಂಖ್ಯೆಯ ದೃಷ್ಟಿಯಲ್ಲಿ ನೋಡಿದರೆ ಹೆಚ್ಚು ಸ್ಥಾನಗಳು ಬಿಜೆಪಿಗೆ ಬಂದಿವೆ. ಸೋಲನ್ನು ಒ‍ಪ್ಪಿಕೊಳ್ಳುತ್ತೇವೆ. ಅದಕ್ಕೆ ಕಾರಣವೇನು ಎನ್ನುವುದನ್ನು ಅವಲೋಕಿಸುತ್ತೇವೆ’ ಎಂದು ತಿಳಿಸಿದರು.

‘ಚುನಾವಣೆಯಲ್ಲಿ ಎಂಇಎಸ್‌ನವರಿಗೂ ಬಹಳ ಅನ್ಯಾಯವಾಗಿದೆ. ಸರಿಯಾದ ಮತದಾರರ ಪಟ್ಟಿಯನ್ನು ಅವರಿಗೂ ಕೊಟ್ಟಿಲ್ಲ’ ಎಂದು ಎಂಇಎಸ್ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು.

ADVERTISEMENT

‘ನಮ್ಮಲ್ಲಿ ಯಾವ ಬಣವೂ ಇಲ್ಲ. ಎಲ್ಲ ಮುಖಂಡರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಯಾವ ಗುಂಪೂ ಇಲ್ಲ. ಎಲ್ಲರೂ ಕಾಂಗ್ರೆಸ್‌ ವೃತ್ತದಲ್ಲೇ ಇದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ನಗರಪಾಲಿಕೆ ಚುನಾವಣೆಯ ಫಲಿತಾಂಶದತ್ತ ಎಐಸಿಸಿ ಕೂಡ ಗಮನಹರಿಸಿದೆ. ಎಐಸಿಸಿಯಿಂದ ವಿಶೇಷ ತಂಡವೇ ಇಲ್ಲಿಗೆ ಬರಲಿದೆ. ಸತ್ಯಶೋಧನೆಗಾಗಿ ಅಧ್ಯಯನ ನಡೆಸಲಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಮುನ್ನಡೆಸಬೇಕು ಎಂದು ವರದಿ ನೀಡಲಿದೆ. ಅಭ್ಯರ್ಥಿಗಳು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಹೊಸದಾಗಿ ಕ್ರಿಯಾಯೋಜನೆ ತಯಾರಿಸಲಾಗುವುದು’ ಎಂದರು.

ನಿರೀಕ್ಷಿತ ಸ್ಥಾನಗಳು ಬಂದಿವೆ:

‘ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನಗಳನ್ನು ಗಳಿಸಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಹೊರಗಿನವರಿಗೆ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿದೆ ಎಂಬಂತೆ ಬಿಂಬಿತವಾಗಿದೆ. ಆದರೆ, ನಮ್ಮ ನಿರೀಕ್ಷೆಗೆ ತಕ್ಕಷ್ಟೇ ಸ್ಥಾನಗಳನ್ನು ನಾವು ಚುನಾವಣೆಯಲ್ಲಿ ಗಳಿಸಿದ್ದೇವೆ. ದಕ್ಷಿಣ ವಿಧಾನಸಭಾ ಮತಕ್ಷೇತ್ರದಲ್ಲಿ ನಮಗೆ ಹಿನ್ನಡೆಯಾಗಿದೆ. ಅಲ್ಲಿ ಇನ್ನೂ ಕೆಲವು ಸ್ಥಾನಗಳು ಬರಬೇಕಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಡಿಪಾಯ ಹಾಕಿಕೊಂಡಿದೆ. ಮುಂಬರುವ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಐದು ವರ್ಷಗಳಲ್ಲಿ ಉತ್ತಮವಾಗಿ ಜನ ಸೇವೆ ಮಾಡಿ, ನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ಪಕ್ಷದ ಸಂಘಟನೆಯನ್ನೂ ಮಾಡಬೇಕು. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಬೇಕು’ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಮುಖಂಡರಾದ ಫಿರೋಜ್ ಸೇಠ್, ಅಶೋಕ ಪಟ್ಟಣ, ಪಕ್ಷದ ಗ್ರಾಮೀಣ ಜಿಲ್ಲಾ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಸಮಿತಿ ಅಧ್ಯಕ್ಷ ರಾಜು ಸೇಠ್ ಪಾಲ್ಗೊಂಡಿದ್ದರು.

ನಾನೇಕೆ ಬೇಡ ಎನ್ನಲಿ?

ನಗರಪಾಲಿಕೆ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ ಎಂದು ‍ಪಕ್ಷದ ಕೆಲ ಅಭ್ಯರ್ಥಿಗಳು ಎಂಇಎಸ್ ಜೊತೆ ಸೇರಿಕೊಂಡು‌ ನ್ಯಾಯಾಲಯದ ‌ಮೊರೆ ಹೋಗುತ್ತಿರುವುದು ಅವರ ವೈಯಕ್ತಿಕ ನಿಲುವು. ಅದಕ್ಕೆ ನಾನೇಕೆ ಬೇಡ ಎನ್ನಲಿ?.

–ಡಿ.ಕೆ. ಶಿವಕುಮಾರ್‌, ಅಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.