ADVERTISEMENT

ಬುದ್ನಿಖುರ್ದ್‌ನಲ್ಲಿ ನೀರಿಗಾಗಿ ಹಾಹಾಕಾರ, ಪರದಾಡುತ್ತಿರುವ ಜನ

ನೀರು ಕಣ್ಣೀರು: ಕೊಳವೆಬಾವಿ ಕೊರೆದರೂ ಪ್ರಯೋಜನವಾಗಿಲ್ಲ

ಚನ್ನಪ್ಪ ಮಾದರ
Published 28 ಏಪ್ರಿಲ್ 2019, 19:49 IST
Last Updated 28 ಏಪ್ರಿಲ್ 2019, 19:49 IST
ರಾಮದುರ್ಗ ತಾಲ್ಲೂಕಿನ ಬುದ್ನಿಖುರ್ದ್‌ನಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿರುವುದು
ರಾಮದುರ್ಗ ತಾಲ್ಲೂಕಿನ ಬುದ್ನಿಖುರ್ದ್‌ನಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿರುವುದು   

ರಾಮದುರ್ಗ: ತಾಲ್ಲೂಕಿನ ತೊಂಡಿಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬುದ್ನಿಖುರ್ದ್‌ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ.

ನೀರು ಸಂಗ್ರಹಣೆಗೆ ಮಹಿಳೆಯರು, ಮಕ್ಕಳು ದಿನವಿಡೀ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲವರು ಒಂದೂವರೆ ಕಿ.ಮೀ. ದೂರ ನಡೆದು ನೀರು ತರಬೇಕಾದ ಸ್ಥಿತಿ ಇದೆ.

ತೊಂಡಿಕಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗವ್ವ ಹೊಸಮನಿ ಮತ್ತು ಉಪಾಧ್ಯಕ್ಷೆ ಲಕ್ಷ್ಮಿ ರಂಗನಾಥ ನಾಯಿಕ ಅವರ ಸ್ವಗ್ರಾಮ ಬುದ್ನಿಖುರ್ದ್‌ ಗ್ರಾಮದಲ್ಲಿಯೇ ನೀರಿಗೆ ತಾತ್ವಾರ ಎದುರಾಗಿರುವುದು ಅಚ್ಚರಿ ಮೂಡಿಸಿದೆ. ನೀರಿನ ಅಭಾವ ಕಡಿಮೆಗೊಳಿಸಲು ಪಂಚಾಯ್ತಿ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆ ಇದೇ ವರ್ಷ ಗ್ರಾಮದಲ್ಲಿ ಒಟ್ಟು 4 ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಲಭ್ಯವಾಗದೇ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜನರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಲಾಗಿದೆ.

ADVERTISEMENT

ಘಟಪ್ರಭಾ ಎಡದಂಡೆ ಕಾಲುವೆಯಿಂದ ಕೆರೆ ತುಂಬಿಸಲು ಪೈಪ್‌ಲೈನ್‌ ಅಳವಡಿಸಲಾಗಿದೆ. ಫೆ. 28ಕ್ಕೆ ಕಾಲುವೆ ನೀರು ಹರಿಯುವುದು ನಿಂತು ಹೋಗಿದೆ. ಅದರಿಂದಲೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಮೂರ್ನಾಲ್ಕು ವರ್ಷಳಿಂದಲೂ ಈ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಕಾಣಿಸಿಕೊಂಡಿದ್ದರೂ ಅಧಿಕಾರಿಗಳು ಕೊಳವೆಬಾವಿ ಕೊರೆಸುತ್ತಲೇ ಇದ್ದಾರೆ. ನೀರಿನ ಲಭ್ಯತೆ ಇಲ್ಲದೇ ಕೈಚೆಲ್ಲಿ ಕುಳಿತ್ತಿದ್ದಾರೆ. ಕುಡಿಯುವ ನೀರಿನ ಪೂರೈಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ ಎನ್ನುತ್ತಾರೆ ಅಲ್ಲಿನ ಜನರು. ಜನಪ್ರತಿನಿಧಿಗಳು ಕುಡಿಯುವ ನೀರಿನ ಸಲುವಾಗಿ ಯಾವುದೇ ಪ್ರಯತ್ನ ಮಾಡದಿರುವುದು ಶೋಚನೀಯವಾಗಿದೆ.

ಗ್ರಾಮದಲ್ಲಿ ಲಭ್ಯವಿರುವ ಒಂದೇ ಒಂದು ಕೊಳವೆ ಬಾವಿಯಿಂದ ಒಂದಿಂಚಿನಷ್ಟು ನೀರು ದೊರೆಯುತ್ತಿದೆ. ಬಹಳಷ್ಟು ಸಮಯ ಕೊಳವೆಬಾವಿಯಿಂದ ನೀರು ಎತ್ತಲು, ನೀರು ತುಂಬಿಕೊಳ್ಳಲು ಗ್ರಾಮದ ಬಹುತೇಕರು ಕೆಲಸ ಕಾರ್ಯಗಳನ್ನು ಬಿಟ್ಟು ಸಮಯ ಕಳೆಯಬೇಕಿದೆ. ಶಾಲಾ ಮಕ್ಕಳು ಶಾಲೆಗೆ ಬಿಡುವು ಇದ್ದಾಗಲೆಲ್ಲ ನೀರಿಗಾಗಿಯೇ ನಿಲ್ಲಬೇಕಿದೆ. ಶಾಲೆಗಳು ಆರಂಭಗೊಂಡರೆ ಮಕ್ಕಳು ಶಾಲೆ ಬಿಟ್ಟು ನೀರು ಹಿಡಿದು ತರುವಲ್ಲಿ ಮುಂದಾಗುತ್ತಿರುವುದು ಸಂಕಷ್ಟಕ್ಕೆ ಗುರಿಯಾಗಿದೆ.

ಗ್ರಾಮದ ಪ್ಲಾಟ್‌ (ನವಗ್ರಾಮ)ಗಳಲ್ಲಿ ವಾಸಿಸುವ ಪರಿಶಿಷ್ಟರಿಗಂತೂ ನೀರು ತರುವುದೊಂದೇ ಮುಖ್ಯ ಕೆಲಸವಾಗಿದೆ. ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಅವರು ಅಲ್ಲಿಂದ ನೀರು ಸಾಗಿಸುವ ಸೈಕಲ್‌ಗಳನ್ನು ಬಳಸಿಕೊಂಡು ನೀರು ಒಯ್ಯಬೇಕಿದೆ. ದುಡಿದು ತಿನ್ನುವ ಬಡವರು ಹೊಟ್ಟೆಗೆ ಹಿಟ್ಟಿಲ್ಲ ಎಂದರೂ ಕುಡಿಯುವ ನೀರಿಗಾಗಿ ಉದ್ಯೋಗ ಬಿಟ್ಟು ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ತೊಂಡಿಕಟ್ಟಿ ಗ್ರಾಮದ ತಿರುವಿಗೆ ಒಂದು ಕೊಳವೆ ಬಾವಿ ಕೊರೆಸಿದ್ದರೂ ನೀರು ಲಭ್ಯವಾಗುತ್ತಲ್ಲ. ಘಟಪ್ರಭಾ ಎಡದಂಡೆ ಕಾಲುವೆಯಿಂದ ಕೆರೆ ತುಂಬಿಸುವ ಪ್ರಯತ್ನ ಸಹ ನಡೆದಿದೆ. ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ದೇಶಪಾಂಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.