ADVERTISEMENT

ನೇಸರಗಿ: ನೀರಿಗಾಗಿ ತಪ್ಪದ ಅಲೆದಾಟ

ಮಲ್ಲಾಪುರ ಕೆರೆ ಅತಿಕ್ರಮಣದಿಂದಲೂ ತೊಂದರೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:30 IST
Last Updated 7 ಮೇ 2019, 19:30 IST
ನೇಸರಗಿಯಲ್ಲಿ ಜನರು ನೀರಿಗಾಗಿ ಮುಗಿಬಿದ್ದಿದ್ದ ಕ್ಷಣ
ನೇಸರಗಿಯಲ್ಲಿ ಜನರು ನೀರಿಗಾಗಿ ಮುಗಿಬಿದ್ದಿದ್ದ ಕ್ಷಣ   

ನೇಸರಗಿ: ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ.

‘ಬೇಸಿಗೆ ಸಂದರ್ಭದಲ್ಲಿ, ಗ್ರಾಮದಲ್ಲಿ ಎರಡು ದಶಕಗಳಿಂದಲೂ ನೀರಿನ ಸಮಸ್ಯೆ ತೀವ್ರವಾಗಿ ಕಾಣಿಸಿಕೊಳ್ಳುತ್ತಿದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸ್ಥಳೀಯ ಆಡಳಿತ, ಜಿಲ್ಲಾಡಳಿತದವರು ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಲ್ಲ. ಹೀಗಾಗಿ, ಇಂದಿಗೂ ಗ್ರಾಮಸ್ಥರು ಜೀವಜಲಕ್ಕಾಗಿ ಕಿಲೋ ಮೀಟರ್‌ಗಟ್ಟಲೆ ಅಲೆಯುವುದು ತಪ್ಪಿಲ್ಲ' ಎಂದು ಸ್ಥಳೀಯ ನಿವಾಸಿ ಸುರೇಶ ಇಂಚಲ ದೂರಿದರು.

‘ಮೂರು ದಶಕಗಳ ಹಿಂದೆ ನೇಸರಗಿಯಲ್ಲಿ ನೀರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಸಿಹಿ ನೀರಿನ ಝರಿ ಬಾವಿ ತುಂಬಿ ತುಳುಕುತ್ತಿತ್ತು. ಮಳೆಗಾಲದಲ್ಲಂತೂ ಬಾವಿಯಲ್ಲಿ ಹಗ್ಗದ ಸಹಾಯವಿಲ್ಲದೇ ನೀರು ಎತ್ತಬಹುದಿತ್ತು. ಕೈಗೆ ಎಟಕುವಷ್ಟು ನೀರು ಆ ಬಾವಿಯಲ್ಲಿ ಸಂಗ್ರಹವಾಗುತ್ತಿತ್ತು. ಸಮೀಪದ ಮಲ್ಲಾಪುರ ಕೆರೆಯಲ್ಲಿ ಕಾಯಂ ಆಗಿ ನೀರು ಸಂಗ್ರಹವಾಗಿರುತ್ತಿತ್ತು. ವರ್ಷದಲ್ಲಿ ಆರು ತಿಂಗಳು ಹಳ್ಳದಲ್ಲಿ ನೀರು ಹರಿಯುತ್ತಿತ್ತು. ಆಗ ನೀರಿನ ಸಮಸ್ಯೆಯೇ ಇರಲಿಲ್ಲ' ಎಂದು ನೆನಪಿಸಿಕೊಂಡರು ಮಲ್ಲಿಕಾರ್ಜುನ ಯತ್ತಿನಮನಿ.

ADVERTISEMENT

‘ಇತ್ತೀಚೆಗೆ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಮಲ್ಲಾಪುರ ಕೆರೆ ಬಹುತೇಕ ಅತಿಕ್ರಮಣಗೊಂಡಿದೆ. ಕೊಳವೆಬಾವಿಗಳ ಸಂಖ್ಯೆಯೂ ಮಿತಿಮೀರಿದೆ. ಇದ್ದ ನೀರಿನ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ನೀರಿನ ಸಮಸ್ಯೆ ಉಲ್ಬಣಿಸಿದೆ’ ಎಂದು ಗುರುರಾಜ ತುಬಚಿ ತಿಳಿಸಿದರು.

‘ಬಿಸಿಲಿನ ಪ್ರಮಾಣ ಹೆಚ್ಚಾದಾಗ, ಕಾಲಕಾಲಕ್ಕೆ ಮಳೆ ಆಗದಿದ್ದಾಗ ಖಾಸಗಿ ಕೊಳವೆಬಾವಿಗಳನ್ನು ಆಶ್ರಯಿಸಬೇಕಾಗುತ್ತದೆ. ಇಲ್ಲವೇ ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ, ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ರುದ್ರಪ್ಪ ಗೌಡರ ಒತ್ತಾಯಿಸಿದರು.

‘ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಲಪ್ರಭಾ ನದಿಯಿಂದ ನೀರು ತರಲು ಜಾಕ್‌ವೆಲ್ ಮತ್ತು ನೆಲಮಟ್ಟದ ಟ್ಯಾಂಕ್‌ಗಳನ್ನು ನಿರ್ಮಿಸಿದ್ದರೂ ಪ್ರಸ್ತುತ ಯೋಜನೆ ಸ್ಥಗಿತಗೊಂಡಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದೂ ಪ್ರಯೋಜನಕ್ಕೆ ಬಾರದಂತಾಗಿದೆ. ಇದಲ್ಲದೇ ಮಾರ್ಕಂಡೇಯ ನದಿಗೆ ನಿರ್ಮಿಸಿರುವ ಶಿರೂರ ಡ್ಯಾಂನಿಂದ ನೇಸರಗಿ ಹೋಬಳಿಗೆ ಉಪಯುಕ್ತವಾಗುವಂತೆ ಕಾಲುವೆ ನಿರ್ಮಿಸುವ ಯೋಜನೆ ಇತ್ತು. ಅದು ಕೂಡ ಕಾರ್ಯಗತವಾಗುವ ಲಕ್ಷಣ ಕಾಣುತ್ತಿಲ್ಲ. ಇನ್ನಾದರೂ ನೇಸರಗಿ ಹೋಬಳಿ ವ್ಯಾಪ್ತಿಯ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಕ್ರಮ ವಹಿಸಬೇಕು’ ಎಂದು ಮುಖಂಡ ಚನ್ನಬಸಪ್ಪ ಹೊಂಡಪ್ಪನವರ ಆಗ್ರಹಿಸಿದರು.

‘ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಸಮೀಪದ ಕೊಳದೂರ ಗ್ರಾಮದಲ್ಲಿ ಕೊರೆಸಿರುವ ಸಾರ್ವಜನಿಕ ಕೊಳವೆಬಾವಿಯಿಂದ ಆ ತೊಟ್ಟಿಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸಿ ಗ್ರಾಮಸ್ಥರಿಗೆ ಪೂರೈಸಲಾಗುತ್ತಿದೆ. ಬತ್ತಿರುವ ಕೊಳವೆಬಾವಿಗಳ ಜಲಮರುಪೂರಣ ಹಾಗೂ ಶಿಥಿಲ ಪೈಪ್‌ಲೈನ್ ದುರಸ್ತಿಗೆ ಕ್ರಮ ವಹಿಸಲಾಗುವುದು’ ಎಂದು ಪಿಡಿಒ ಸೌಮ್ಯಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.