ADVERTISEMENT

ತಂದೆಯೇ ಮಗನನ್ನು ಕೊಂದು ಕೊಳವೆಬಾವಿ ದುರಂತ ಎಂದು ಬಿಂಬಿಸಲು ಯತ್ನ?

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 16:18 IST
Last Updated 18 ಸೆಪ್ಟೆಂಬರ್ 2021, 16:18 IST
   

ಹಾರೂಗೇರಿ (ಬೆಳಗಾವಿ): ರಾಯಬಾಗ ತಾಲ್ಲೂಕು ಅಲಖನೂರು ಗ್ರಾಮದಲ್ಲಿ ಶುಕ್ರವಾರ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕ ತೋಟದಲ್ಲಿರುವ ಕೊಳವೆಬಾವಿಯಲ್ಲಿ ಶವವಾಗಿ ಶನಿವಾರ ಪತ್ತೆಯಾಗಿದ್ದಾನೆ. ‘ತಂದೆಯೇ ಆತನನ್ನು ಕೊಂದು ಕೊಳವೆಬಾವಿ ದುರಂತದಲ್ಲಿ ಸಾವಿಗೀಡಾಗಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದ’ ಎಂಬ ಆರೋಪ ಕೇಳಿಬಂದಿದೆ.

ಮಗ ಶರತ ಕಾಣೆಯಾಗಿದ್ದಾನೆ ಎಂದು ತಂದೆ ಸಿದ್ದಪ್ಪ ಹಾರೂಗೇರಿ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅನುಮಾನದ ಮೇಲೆ ಕೊಳವೆಬಾವಿಯಲ್ಲಿ ಪರಿಶೀಲನೆ ನಡೆಸಿದ್ದರು. ಅಲ್ಲಿ ಮಗುವಿನ ದೇಹ ಸಿಕ್ಕಿಕೊಂಡಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರೊಂದಿಗೆ ಕಾರ್ಯಾಚರಣೆ ನಡೆಸಿ ಶನಿವಾರ ರಾತ್ರಿ ಮೃತದೇಹವನ್ನು ಹೊರಕ್ಕೆ ತೆಗೆದರು. ತಾಯಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ನಡುವೆ, ‘ಮಗನ ಬಗ್ಗೆ ಅಪ್ಪನಿಗೆ ಪ್ರೀತಿ ಇರಲಿಲ್ಲ. ಹೀಗಾಗಿ, ಆತನೇ ಮಗನನ್ನು ಉಸಿರುಗಟ್ಟಿಸಿ ಕೊಳವೆಬಾವಿಗೆ ಹಾಕಿದ್ದಾನೆ. ಜನರನ್ನು ನಂಬಿಸುವುದಕ್ಕಾಗಿ ಹುಡುಕಾಡುತ್ತಿರುವುದಾಗಿ ನಾಟಕ ಮಾಡುತ್ತಿದ್ದ’ ಎಂದು ಬಾಲಕನ ಅಜ್ಜಿ (ತಾಯಿಯ ತಾಯಿ) ಸರಸ್ವತಿ ಜನರ ಎದುರು ಗಂಭೀರ ಆರೋಪ ಮಾಡಿದ್ದರು. ಇದಾದ ಬಳಿಕ ಸಿದ್ದಪ್ಪ ಕೂಡ ಗ್ರಾಮದ ಜನರು ಹಾಗೂ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಶನಿವಾರ ಸಂಜೆ ಬಹಿರಂಗವಾದ ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಂಡಿತು. ಬಾಲಕ ಆಡುತ್ತಿದ್ದಾಗ ಅಕಸ್ಮಾತ್‌ ಕೊಳವೆಬಾವಿಗೆ ಬಿದ್ದಿದ್ದಾನೆ ಎಂದು ಹೇಳಲಾಗಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್ಪಿ ಲಕ್ಷ್ಮಣ ನಿಂಬರಗಿ, ‘ಮಗು ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹಾರೂಗೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು. ಕೊಳವೆಬಾವಿಯಲ್ಲಿ ಬಾಲಕನ ಮೃತದೇಹ ಸಿಕ್ಕಿದೆ. ರಾಯಬಾಗ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ವಿವರ ತಿಳಿದುಬರಲಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಬಾಲಕನನ್ನು ಆತನ ತಂದೆಯೇ ಕೊಂದಿದ್ದಾನೆಎಂದು ಅಜ್ಜಿ ಆರೋಪಿಸಿದ್ದಾರೆ. ಈ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರ ಸ್ಪಷ್ಟ ಮಾಹಿತಿ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.