ADVERTISEMENT

ಕಿತ್ತೂರು ಆರ್‌ಜೆಎಸ್‌ ಪದವಿ ಪೂರ್ವ ಕಾಲೇಜು: ಆಧುನಿಕ ಸೌಲಭ್ಯ, ಉತ್ತಮ ಬೋಧನೆ

ಕಿತ್ತೂರು ಆರ್‌ಜೆಎಸ್‌ ಪದವಿ ಪೂರ್ವ ಕಾಲೇಜಿನ ಹಿರಿಮೆ

ಪ್ರದೀಪ ಮೇಲಿನಮನಿ
Published 27 ಮೇ 2021, 19:30 IST
Last Updated 27 ಮೇ 2021, 19:30 IST
ಚನ್ನಮ್ಮನ ಕಿತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು
ಚನ್ನಮ್ಮನ ಕಿತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಒಂದೂವರೆ ದಶಕದ ಹಿಂದೆ ಆರಂಭಗೊಂಡ ಇಲ್ಲಿಯ ರಾಜಗುರು ಗುರುಸಿದ್ಧ ಸ್ವಾಮೀಜಿ (ಆರ್‌ಜೆಎಸ್‌) ಪದವಿ ಪೂರ್ವ ಸರ್ಕಾರಿ ಕಾಲೇಜು ಆಧುನಿಕ ಸವಲತ್ತುಗಳೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಗಮನಸೆಳೆದಿದೆ.

2006ರಲ್ಲಿ ಕಲಾ ವಿಭಾಗದೊಂದಿಗೆ ಪ್ರಾರಂಭವಾದ ಈ ಸರ್ಕಾರಿ ಕಾಲೇಜು ಬಳಿಕ ಕೆಲವೇ ವರ್ಷಗಳಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳನ್ನು ತೆರೆಯಿತು. 116 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡಿದ್ದ ಕಾಲೇಜಿನಲ್ಲಿ ಈಗ ಮೂರು ವಿಭಾಗಗಳಲ್ಲಿ 350 ವಿದ್ಯಾರ್ಥಿಗಳು ಓದುತ್ತಿದ್ದಾರೆ.

₹ 10 ಲಕ್ಷ ಮೌಲ್ಯದ ಪುಸ್ತಕಗಳು:

ADVERTISEMENT

ವಿದ್ಯಾರ್ಥಿಗಳ ಜೀವನದಲ್ಲಿ ದ್ವಿತೀಯ ಪಿಯು ಮಹತ್ವದ ಕಾಲಘಟ್ಟವಾಗಿದ್ದು, ನಂತರ ವೃತ್ತಿ ಶಿಕ್ಷಣ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಅವಕಾಶಗಳು ಹೇರಳವಾಗಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡ ಕಾಲೇಜು ಪ್ರಾಚಾರ್ಯ ಜಿ.ಎಂ. ಗಣಾಚಾರಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಆಗುವಂತೆ ಕಾಲೇಜು ಗ್ರಂಥಾಲಯದಲ್ಲಿ ₹ 10 ಲಕ್ಷಕ್ಕೂ ಅಧಿಕ ಮೊತ್ತದ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ₹ 4 ಲಕ್ಷ ವೆಚ್ಚದ ಪುಸ್ತಕಗಳನ್ನು ಬೋಸ್ಕೊದವರು ನೀಡಿದ್ದಾರೆ. ದಾನಿಗಳಿಂದ ₹ 6 ಲಕ್ಷ ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ಪಡೆದಿರುವುದು ಪ್ರಾಚಾರ್ಯ ಗಣಾಚಾರಿ ಅವರ ಹೆಗ್ಗಳಿಕೆಯಾಗಿದೆ ಎನ್ನುತ್ತಾರೆ ಉಪನ್ಯಾಸಕ ವೃಂದದವರು.

ಈ ಪುಸ್ತಕಗಳುವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಇದು ಸಹಕಾರಿಯಾಗಿವೆ.

ಅಪಾರ ಶಿಸ್ತು, ಕಟ್ಟುನಿಟ್ಟಿನ ಬೊಧನೆ ಗಣಾಚಾರಿ ತಂಡದ ಹಿರಿಮೆ. 2020ನೇ ಸಾಲಿನಲ್ಲಿ ಉತ್ತಮ ಪ್ರಾಚಾರ್ಯ ಪ್ರಶಸ್ತಿ ಪಡೆದಿರುವ ಅವರು, ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಸಮಾನವಾಗಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಪ್ರಾಚಾರ್ಯರ ಧ್ಯೇಯವಾಗಿದೆ ಎನ್ನುತ್ತಾರೆ ಅವರು.

ಗಣಾಚಾರಿ ಅವರು ಬಂದ ನಂತರ ಆಡಳಿತಕ್ಕೆ ಆಧುನಿಕ ಸ್ಪರ್ಶ ನೀಡಿದರು. ಕ್ಯಾಂಪಸ್‌ ಸಿಸಿಟಿವಿ ಕ್ಯಾಮೆರಾ ಸವಲತ್ತು ಪಡೆಯಿತು. ಶಿಕ್ಷಕರು, ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ತಂತ್ರಾಂಶ ಬಂತು. ವಿಎಂಎಸ್ ತಂತ್ರಾಂಶದ ಮೂಲಕ ಪ್ರವೇಶ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.

ವಿಶೇಷ ಕಾಳಜಿ ಶಾಸಕ:

ಶಾಸಕ ಮಹಾಂತೇಶ ದೊಡ್ಡಗೌಡರ ಅವರೂ ಇಲ್ಲಿ ಮೂಲಸೌಲಭ್ಯ ಒದಗಿಸಲು ವಿಶೇಷ ಕಾಳಜಿ ವಹಿಸಿದ್ದಾರೆ. ₹ 2.64 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳು ಮತ್ತು ಕಟ್ಟಡ ನಿರ್ಮಾಣಕ್ಕೆ ಅನುದಾನ ತಂದಿದ್ದಾರೆ. ಕಾಲೇಜಿನ ಅಭಿವೃದ್ಧಿಗೆ ಅವರ ಸಹಾಯವೂ ಸ್ಮರಣೀಯವಾಗಿದೆ ಎನ್ನುತ್ತಾರೆ ಸಿಬ್ಬಂದಿ.

ಇಲ್ಲಿ ಕಲಿತ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಬ್ಯಾಂಕ್ ನೇಮಕಾತಿಯಲ್ಲೂ ಉತ್ತಮ ಶ್ರೇಣಿಯೊಂದಿಗೆ ಪಾಸಾಗಿದ್ದಾರೆ. ಕೆಲವರು ಲೆಕ್ಕಪರಿಶೋಧಕರಾಗಿದ್ದಾರೆ. ನರ್ಸಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಗೂ ಅಭಿಮಾನ ತರುವ ವಿಷಯವಾಗಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

2020ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಕಲಾವಿಭಾಗದ ಫಲಿತಾಂಶ ಶೇ 80ರಷ್ಟು ಆಗಿದೆ. ವಿಜ್ಞಾನ ವಿಭಾಗ ಶೇ 85 ಮತ್ತು ವಾಣಿಜ್ಯ ವಿಭಾಗದ ಫಲಿತಾಂಶ ಶೇ 95ರಷ್ಟು ಗಳಿಸಿರುವುದು ಇಲ್ಲಿಯ ಬೋಧನಾ ಪದ್ಧತಿಗೆ ಸಿಕ್ಕ ಮನ್ನಣೆ ಎನ್ನುತ್ತಾರೆ ಅವರು.

‘ಏಕ ಭಾರತ ಶ್ರೇಷ್ಠ ಭಾರತ’ ಎನ್ನುವ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಈ ಕಾಲೇಜು ವಿದ್ಯಾರ್ಥಿಯೊಬ್ಬ ಎನ್‌ಎಸ್ಎಸ್‌ ವಿಭಾಗದ ರಾಜ್ಯದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಎಂದು ಉಪನ್ಯಾಸಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.