ADVERTISEMENT

ಬೆಳಗಾವಿಯಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆ

ಎಂ.ಮಹೇಶ
Published 16 ಸೆಪ್ಟೆಂಬರ್ 2021, 22:30 IST
Last Updated 16 ಸೆಪ್ಟೆಂಬರ್ 2021, 22:30 IST
ಬೆಳಗಾವಿಯ ಕೆಎಲ್ಎಸ್‌–ಜಿಐಟಿ ಕ್ಯಾಂಪಸ್‌ನಲ್ಲಿ ಸ್ಥಾಪಿಸಿರುವ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಆಡಳಿತ ಮಂಡಳಿಯವರು ಈಚೆಗೆ ಉದ್ಘಾಟಿಸಿ ವೀಕ್ಷಿಸಿದರುಪ್ರಜಾವಾಣಿ ಚಿತ್ರ
ಬೆಳಗಾವಿಯ ಕೆಎಲ್ಎಸ್‌–ಜಿಐಟಿ ಕ್ಯಾಂಪಸ್‌ನಲ್ಲಿ ಸ್ಥಾಪಿಸಿರುವ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಆಡಳಿತ ಮಂಡಳಿಯವರು ಈಚೆಗೆ ಉದ್ಘಾಟಿಸಿ ವೀಕ್ಷಿಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ಪೆಟ್ರೋಲ್ ಅಥವಾ ಡೀಸೆಲ್‌ ಬದಲಿಗೆ ಬ್ಯಾಟರಿಚಾಲಿತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಮುಂದಾಗುವ ಮೂಲಕ ಇಲ್ಲಿನ ಕೆಎಲ್‌ಎಸ್‌ ಸಂಸ್ಥೆಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ಪರಿಸರ ಸ್ನೇಹಿ ಕ್ರಮ ಕೈಗೊಂಡಿದೆ.

ಹಸಿರಿನಿಂದ ಕಂಗೊಳಿಸುವ ಈ ಕ್ಯಾಂಪಸ್‌ನಲ್ಲಿ ‘ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ’ ಸ್ಥಾಪಿಸಲಾಗಿದ್ದು, ಬ್ಯಾಟರಿಚಾಲಿತ ವಿದ್ಯುತ್ ವಾಹನಗಳ ಮಹತ್ವವನ್ನು ತಿಳಿಸುವ ಕೆಲಸವನ್ನು ಮಾಡಲಾಗಿದೆ.

ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗದಿಂದ ಈ ‘ಹಸಿರು ಉಪಕ್ರಮ’ ಕೈಗೊಳ್ಳಲಾಗಿದೆ. ಇದನ್ನು ನವೀಕರಿಸಬಹುದಾದ ಇಂಧನ ಹಾಗೂ ಶಕ್ತಿ ಕೋಶದಿಂದ ನಿರ್ವಹಣೆ ಮಾಡಲಾಗುತ್ತಿದೆ. ಇಲ್ಲಿ ದ್ವಿಚಕ್ರವಾಹನಗಳು ಹಾಗೂ ಕಾರುಗಳನ್ನು ಚಾರ್ಜ್‌ ಮಾಡಿಕೊಳ್ಳುವುದಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯು ಬಳಸಿಕೊಳ್ಳಬಹುದಾಗಿದೆ.

ADVERTISEMENT

ವಿದ್ಯಾರ್ಥಿಗಳಿಗೆ ಜಾಗೃತಿ:

12 ಟರ್ಮಿನಲ್‌ಗಳನ್ನು ಮಾಡಲಾಗಿದೆ. ಏಕಕಾಲಕ್ಕೆ 12 ದ್ವಿಚಕ್ರವಾಹನ ಅಥವಾ ಕಾರುಗಳನ್ನು ಚಾರ್ಜ್ ಮಾಡಬಹುದಾಗಿದೆ. ಅದಕ್ಕಾಗಿ ಸ್ಥಳಾವಕಾಶ ಒದಗಿಸಲಾಗಿದೆ. ಪ್ರಸ್ತುತ ಕಾಲೇಜಿನಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬ್ಯಾಟರಿಚಾಲಿತ 40 ದ್ವಿಚಕ್ರವಾಹನಗಳು ಹಾಗೂ 4 ಕಾರುಗಳನ್ನು ಬಳಸುತ್ತಿದ್ದಾರೆ. ಅವುಗಳನ್ನು ಚಾರ್ಜ್‌ ಮಾಡುವುದಕ್ಕಾಗಿ ಈ ಕೇಂದ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ತಗ್ಗಿಸಲು ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೂ ಜಾಗೃತಿ ಮೂಡಿಸಲಾಗುತ್ತಿದೆ.

ಕೆಎಲ್‌ಎಸ್ ಜಿಐಟಿಗೆ ಬೇಕಾಗುವ ವಿದ್ಯುತ್ ಅನ್ನು ಹೆಸ್ಕಾಂ ಹಾಗೂ ಚಾವಣಿಯ ಮೇಲೆ ಅಳವಡಿಸಿರುವ ಸೋಲಾರ್‌ ಘಟಕದಿಂದ ಪಡೆಯಲಾಗುತ್ತಿದೆ. ಆ ಎರಡೂ ಮೂಲಗಳಿಂದ ಪವರ್‌ಗ್ರಿಡ್ ಮೂಲಕ ಇಲ್ಲಿಗೆ ವಿದ್ಯುತ್‌ ಅನ್ನು ಬಳಸಲಾಗುತ್ತಿದೆ. ಕ್ಯಾಂಪಸ್‌ನ ಬಹುತೇಕ ಇಂಧನದ ಅಗತ್ಯಗಳನ್ನು ಚಾವಣಿಯಲ್ಲಿ ಉತ್ಪಾದಿಸುತ್ತಿರುವ ಸೌರಶಕ್ತಿಯ ಮೂಲಕವೇ ಪೂರೈಸುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.

‘ಹೆಚ್ಚುತ್ತಿರುವ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೆಎಲ್‌ಎಸ್ ಜಿಐಟಿಯ ಬದ್ಧವಾಗಿದೆ. 450 ಕೆ.ವಿ. ಸೌರಶಕ್ತಿ ಸ್ಥಾವರವನ್ನು ಜಿಐಟಿಯ ಚಾವಣಿಯಲ್ಲಿ ಸ್ಥಾಪಿಸುವ ಮೂಲಕ ಪರಿಸರ ರಕ್ಷಣೆಯ ಉದ್ದೇಶವನ್ನು ಸಂಸ್ಥೆ ಪೂರ್ಣಗೊಳಿಸುತ್ತಿದೆ. ವಿದ್ಯುತ್ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವುದರಿಂದ ಪರಿಸರದ ರಕ್ಷಣೆಯೂ ಸಾಧ್ಯವಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚವನ್ನೂ ಕಡಿಮೆ ಮಾಡುತ್ತದೆ’ ಎನ್ನುತ್ತಾರೆ ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಪ್ರದೀಪ ಸಾವಕಾರ.

ಉತ್ತೇಜನ

ಮಾಲಿನ್ಯ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಜಿಐಟಿ ಕಾಲೇಜಿನಲ್ಲಿ ಉತ್ತೇಜಿಸಲಾಗುತ್ತಿದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಹಸಿರು ಇಂಧನವನ್ನೂ ಬಳಸಿಕೊಳ್ಳಲಾಗುತ್ತಿದೆ.

–ಡಾ.ಜಯಂತ ಕೆ. ಕಿತ್ತೂರ, ಪ್ರಾಂಶುಪಾಲರು, ಜಿಐಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.