ADVERTISEMENT

ಬೆಳಗಾವಿ: ಉದ್ಯೋಗ ಖಾತ್ರಿ; ₹ 600 ಕೂಲಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 13:24 IST
Last Updated 14 ಸೆಪ್ಟೆಂಬರ್ 2021, 13:24 IST
ಉದ್ಯೋಗ ಖಾತ್ರಿ ಕೂಲಿಯನ್ನು ಕನಿಷ್ಠ ₹ 600ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರ್‌ಕೆಎಸ್ ಮತ್ತು ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದರು
ಉದ್ಯೋಗ ಖಾತ್ರಿ ಕೂಲಿಯನ್ನು ಕನಿಷ್ಠ ₹ 600ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರ್‌ಕೆಎಸ್ ಮತ್ತು ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ಬೆಳಗಾವಿ: ‘ಉದ್ಯೋಗ ಖಾತ್ರಿ ಕೂಲಿಯನ್ನು ಕನಿಷ್ಠ ₹ 600ಕ್ಕೆ ಹೆಚ್ಚಿಸಿ, ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಮತ್ತು ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಚನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಅವರು, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಖಜಾಂಚಿ ವಿ.ನಾಗಮ್ಮಾಳ್ ಮಾತನಾಡಿ, ‘ನರೇಗಾ ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನ ಮತ್ತು ಸೌಲಭ್ಯಗಳು ತಲುಪಬೇಕಾಗಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಕೊಡುವ ಅಲ್ಪ ವೇತನವನ್ನೂ ತಡವಾಗಿ ಕೊಟ್ಟರೆ ಜೀವನ ನಡೆಸುವುದು ಹೇಗೆ?’ ಎಂದು ಕೇಳಿದರು.

ADVERTISEMENT

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ದೆಹಲಿ ಗಡಿಗಳಲ್ಲಿ ರೈತರು ಒಂಬತ್ತು ತಿಂಗಳಿನಿಂದ ಹೋರಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು’ ಎಂದು ಕೋರಿದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಲಕ್ಕಪ್ಪ ಬಿಜ್ಜನ್ನವರ, ‘ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿರುವ ಜನತೆಗೆ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೆಟ್ರೋಲ್, ಡೀಸೆಲ್, ಖಾದ್ಯ ತೈಲ ಹಾಗೂ ಅಡುಗೆ ಅನಿಲ ಸಿಲಿಂಡರ್ ಮೊದಲಾದ ಅಗತ್ಯ ವಸ್ತುಗಳು ಗಗನಮುಖಿ ಆಗಿರುವಾಗ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೀಡುವ ₹289 ಕೂಲಿ ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ₹ 600ಕ್ಕೆ ಹೆಚ್ಚಿಸಬೇಕು. ವರ್ಷ ಪೂರ್ತಿ ಕೆಲಸ ಸಿಗುವಂತಾಗಬೇಕು. ಕೆಲಸ ನೀಡದಿದ್ದರೆ ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ಕೊಡಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ನರೇಗಾ ಜಿಲ್ಲಾ ಯೋಜನಾಧಿಕಾರಿ ರವೀಂದ್ರ ಬಂಗಾರೆಪ್ಪನವರ, ‘ಬಾಕಿ ವೇತನವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಕೆಲಸದ ದಿನಗಳನ್ನು 150 ದಿನಗಳಿಗೆ ಹೆಚ್ಚಿಸುವ ಆದೇಶ ಶೀಘ್ರದಲ್ಲೆ ಜಾರಿಯಾಗುವ ಸಾಧ್ಯತೆ ಇದೆ. ಕಾರ್ಮಿಕರಿಗೆ ಸಿಗಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪಿಡಿಒಗಳಿಗೆ ಆದೇಶಿಸಲಾಗುವುದು’ ಎಂದರು.

‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ನೀಡಬೇಕು. ವೇತನವನ್ನು ವಿಳಂಬ ಮಾಡದೇ ಸಕಾಲಕ್ಕೆ ಪಾವತಿಸಬೇಕು. ವೇತನ ನೀಡುವುದು ವಿಳಂಬವಾದರೆ ವಿಳಂಬ ವೇತನ ಭತ್ಯೆ ಕೊಡಬೇಕು’ ಎಂದು ಒತ್ತಾಯಿಸಿದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ರಾಜು ಗಾಣಗಿ, ಬೀರಪ್ಪ ಅದ್ದುಗೋಳ, ರಮೇಶ ಹುಲಕುಂದ, ಸಿದ್ದು ಪಾಟೀಲ, ಲಕ್ಷ್ಮಣ ಕಡಕೋಳ, ಗೋಪಾಲ ಬಿಜ್ಜನ್ನವರ, ರಾಣಿ ಪಾಟೀಲ, ಸುರೇಖಾ ಸದಾವರ, ಪದ್ಮಾವತಿ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.