ADVERTISEMENT

ಲಾಕ್‌ಡೌನ್‌ನಲ್ಲಿ ಸಿಂಗಾರಗೊಂಡ ಸಿಆರ್‌ಸಿ

ಸಿಆರ್‌ಪಿ ಗಣಪತಿ ಉಪ್ಪಾರ ಕಾಳಜಿ

ಬಾಲಶೇಖರ ಬಂದಿ
Published 26 ಜೂನ್ 2021, 19:30 IST
Last Updated 26 ಜೂನ್ 2021, 19:30 IST
ಸಮೂಹ ಸಂಪನ್ಮೂಲ ಕೇಂದ್ರದ ಗೋಡೆಗೆ ಬಣ್ಣ ಬಳಿಯುತ್ತಿರುವ ಸಿಆರ್‌ಪಿ ಗಣಪತಿ ಉಪ್ಪಾರ
ಸಮೂಹ ಸಂಪನ್ಮೂಲ ಕೇಂದ್ರದ ಗೋಡೆಗೆ ಬಣ್ಣ ಬಳಿಯುತ್ತಿರುವ ಸಿಆರ್‌ಪಿ ಗಣಪತಿ ಉಪ್ಪಾರ   

ಮೂಡಲಗಿ (ಬೆಳಗಾವಿ): ತಾಲ್ಲೂಕಿನ ಕಲ್ಲೋಳಿಯ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಗಣಪತಿ ಉಪ್ಪಾರ ಅವರು ಕೋವಿಡ್ ಲಾಕ್‌ಡೌನ್‌ನ ಸಮಯ ಸದ್ಬಳಕೆ ಮಾಡಿಕೊಂಡು, ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಕೇಂದ್ರದ ಸರ್ಕಾರಿ ಕಟ್ಟಡಕ್ಕೆ ಸ್ವತಃ ಸುಣ್ಣ–ಬಣ್ಣ ಹಚ್ಚಿ ವಿಶೇಷ ಮೆರಗು ನೀಡಿ ಗಮನಸೆಳೆದಿದ್ದಾರೆ.

ಕಲ್ಲೋಳಿಯ ಸರ್ಕಾರಿ ಕೇಂದ್ರ ಶಾಲೆಯ ಆವರಣದಲ್ಲಿ 2009ರಲ್ಲಿ ನಿರ್ಮಿಸಿರುವ ಸಮೂಹ ಕೇಂದ್ರವು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಒಟ್ಟು 30 ಪ್ರಾಥಮಿಕ, ಪ್ರೌಢ ಶಾಲೆಗಳ ವ್ಯಾಪ್ತಿ ಹೊಂದಿದೆ. ಸ್ಥಳೀಯರಿಂದ ಸಂಗ್ರಹಿಸಿದ ದೇಣಿಗೆ ಹಾಗೂ ಶಾಲಾ ಶಿಕ್ಷಕರ ಸಹಕಾರದೊಂದಿಗೆ ಕೇಂದ್ರವನ್ನು ಆಕರ್ಷಿಸುವಂತೆ ಮಾಡಿದ್ದು ವಿಶೇಷವಾಗಿದೆ.

ಕಣ್ಮನ ಸೆಳೆಯುತ್ತಿದೆ: ಕೇಂದ್ರವನ್ನು ಪ್ರವೇಶಿಸುತ್ತಿದ್ದಂತ ವರ್ಲಿ ಚಿತ್ರಕಲೆಯಿಂದ ಚಿತ್ತಾರಗೊಂಡ ಗೋಡೆಗಳು ಆಕರ್ಷಿಸುತ್ತವೆ. ಇನ್ನೊಂದೆಡೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಸಮಾಜ ಸುಧಾರಕರು, ವಿಜ್ಞಾನಿಗಳ ಫೋಟೊಗಳು ಗಮನಸೆಳೆಯುತ್ತವೆ.

ADVERTISEMENT

ಇಲ್ಲಿನ ಪುರಾತನ ಸ್ಥಳಗಳ ಚಿತ್ರ, ಪರಿಚಯ ಇರುವ ಮಾಹಿತಿ ಫಲಕ, ಕ್ಲಸ್ಟರ್‌ನಲ್ಲಿನ 30 ಶಾಲೆಗಳ ಸಮಗ್ರ ಮಾಹಿತಿ ಒಂದೇ ಫಲಕದಲ್ಲಿ ದೊರೆಯುವಂತೆ ಒಪ್ಪ ಒರಣವಾಗಿ ಕೇಂದ್ರದಲ್ಲಿ ಸಿದ್ಧಗೊಳಿಸಿದ್ದಾರೆ. ಅಲ್ಲಲ್ಲಿ ನುಡಿಗಟ್ಟುಗಳ ಫಲಕಗಳು ಜ್ಞಾನವನ್ನು ವೃದ್ಧಿಸುತ್ತವೆ.

ಮುಖ್ಯ ಕೊಠಡಿಯ ಅಂದ ಇಮ್ಮಡಿಯಾಗಿದೆ. ವಿವಿಧ ಪುಸ್ತಕ, ಶೈಕ್ಷಣಿಕ ಮಾಹಿತಿ ಕೈಪಿಡಿಗಳ ಸಂಗ್ರಹದ ಗ್ರಂಥಾಲಯ ಸಹ ಮಾಡಿದ್ದಾರೆ. ಕೇಂದ್ರದ ಪ್ರವೇಶದಲ್ಲಿ ವಿವಿಧ ಗಿಡಗಳಿಂದ ಪುಟ್ಟ ಉದ್ಯಾನವನದ ಮಾಡಿದ್ದಾರೆ.

‘ಗುತ್ತಿಗೆದಾರ ಬಸವಂತ ಯರನಾಳ, ನೀಲಕಂಠ ಕಪ್ಪಲಗುದ್ದಿ, ಕೆಲವು ವೈದ್ಯರು ಕೇಂದ್ರದ ಬೆಳವಣಿಗೆಗೆ ದೇಣಿಗೆ ನೀಡಿದ್ದಾರೆ. ಚಿತ್ರಕಲಾ ಶಿಕ್ಷಕ ಆರ್.ಎಸ್. ಬಡೇಸ್ ಗೋಡೆಗಳಿಗೆ ಚಿತ್ರ ಬರೆದಿದ್ದಾರೆ’ ಎಂದು ಗಣಪತಿ ಉಪ್ಪಾರ ದಾನಿಗಳ ಸಹಾಯವನ್ನು ನೆನೆಯುತ್ತಾರೆ.

‘ಲಾಕ್‌ಡೌನ್‌ ರಜೆ ದಿನಗಳನ್ನು ವ್ಯರ್ಥ ಮಾಡಬಾರದು ಎಂದು ಕೇಂದ್ರದ ಗೋಡೆಗೆ ಒಂದು ವಾರದವರೆಗೆ ನಾನೇ ಸುಣ್ಣ–ಬಣ್ಣ ಹಚ್ಚಿದೆ. ಕಟ್ಟಡದ ಅಂದವನ್ನು ಕಂಡು ಶಿಕ್ಷಕರು ಮತ್ತು ಜನರು ಖುಷಿ ಪಡುತ್ತಿದ್ದಾರೆ. ಇದು ನನಗೂ ಖುಷಿ ತಂದಿದೆ’ ಎನ್ನುತ್ತಾರೆ ಅವರು.

‘ನನ್ನ ಕೆಲಸವನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಗಜಾನನ ಮನ್ನಿಕೇರಿ, ಬಿಇಒ ಅಜಿತ ಮನ್ನಿಕೇರಿ ಮೆಚ್ಚಿದ್ದಾರೆ. ಬೆನ್ನು ತಟ್ಟಿದ್ದಾರೆ. ಹೀಗಾಗಿ, ಮತ್ತಷ್ಟು ಕೆಲಸ ಮಾಡಲು ಉತ್ಸಾಹ ಸಿಕ್ಕಿದೆ’ ಎಂದರು.

ಉಪ್ಪಾರ ಅವರು ಈ ಹಿಂದೆ ಕಡ್ಲ್ಯಾಳಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಡ್ಡಿ ಬರಡು ನೆಲದಲ್ಲಿ ಗಿಡಗಳನ್ನು ಬೆಳೆಸಿ ಜಿಲ್ಲಾ ಮಟ್ಟದ ‘ಪರಿಸರ ಮಿತ್ರ’ ಪ್ರಶಸ್ತಿ ಪಡೆದಿದ್ದಾರೆ. 2018ರಿಂದ ಸಿಆರ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರೇರಣೆಯಾಗಿದ್ದಾರೆ

ಕಲ್ಲೋಳಿ ಸಿಆರ್‌ಪಿಗೆ ಕೇಂದ್ರವು ಮಾದರಿಯಾಗಿದೆ. ಗಣಪತಿ ಉಪ್ಪಾರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಪ್ರೇರಣೆಯಾಗಿದ್ದಾರೆ

-ಅಜಿತ ಮನ್ನಿಕೇರಿ, ಬಿಇಒ, ಮೂಡಲಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.