ADVERTISEMENT

ಬಿಜೆಪಿಗೆ ನಾನಾಗಿಯೇ ಹೋಗಿದ್ದೇನೆ: ಶ್ರೀಮಂತ ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 14:11 IST
Last Updated 12 ಸೆಪ್ಟೆಂಬರ್ 2021, 14:11 IST
ಶಾಸಕ ಶ್ರೀಮಂತ ಪಾಟೀಲ
ಶಾಸಕ ಶ್ರೀಮಂತ ಪಾಟೀಲ   

ಚನ್ನಮ್ಮನ ಕಿತ್ತೂರು: ‘ಬಿಜೆಪಿಗೆ ನಾನಾಗಿಯೇ ಹೋಗಿದ್ದೇನೆ. ನನ್ನನ್ನು ಅವರೇನೂ ಕರೆದಿಲ್ಲ; ಆಮಿಷ ಒಡ್ಡಿಲ್ಲ’ ಎಂದು ಕಾಗವಾಡದ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಸಮೀಪದ ಅಂಬಡಗಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಒಳ್ಳೆಯ ಕಾರ್ಯಕ್ರಮ ರೂಪಿಸುತ್ತಿದೆ. ಅದನ್ನು ಮೆಚ್ಚಿ ಪಕ್ಷಕ್ಕೆ ಸೇರಿದ್ದೇನೆ. ಏನು ಬಯಸುತ್ತೀರಿ ಎಂದು ಕೇಳಿದಾಗ ಒಳ್ಳೆಯ ಹುದ್ದೆ ನೀಡಿದರೆ ಕೆಲಸ ಮಾಡುತ್ತೇನೆ ಎಂದು ನಾಯಕರಿಗೆ ತಿಳಿಸಿದ್ದೆ’ ಎಂದು ಹೇಳಿದರು.

ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಮಾತನಾಡಿ, ‘ಶ್ರೀಮಂತ ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ನಾನೇ ಮೊದಲು ಧ್ವನಿ ಎತ್ತಿದ್ದೆ. ಈಗಲೂ ಆ ಹೇಳಿಕೆಗೆ ಬದ್ಧನಾಗಿದ್ದೇನೆ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತೇನೆ’ ಎಂದರು.

ADVERTISEMENT

‘ಅಣ್ಣ (ಶ್ರೀಮಂತ ಪಾಟೀಲ) ಅವರನ್ನು ಇಲ್ಲಿಗೆ (ಕಾಂಗ್ರೆಸ್‌) ಬನ್ನಿ ಎಂದು ಕರೆಯುತ್ತಿದ್ದೇನೆ. ಯಾವಾಗ ಬರುತ್ತಾರೆಯೋ ನೋಡಬೇಕಿದೆ’ ಎಂದು ಪಾಟೀಲರತ್ತ ನೋಡುತ್ತಾ ಹೇಳಿದರು.

‘ಹಣ ಕೊಡಲು ಬಂದಿದ್ದವರಾರು?’

ಅಥಣಿ: ‘ನಾನು ಕಾಂಗ್ರೆಸ್‌ನಿಂದ ಬರುವುದಕ್ಕೆ ಬಿಜೆಪಿಯವರು ಹಣದ ಆಫರ್ ಕೊಟ್ಟಿದ್ದರು ಎಂದು ಶಾಸಕ ಶ್ರೀಮಂತ ಪಾಟೀಲ ಅವರು ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಮಾತಿನ ಭರದಲ್ಲಿ ಅವರು ಆ ರೀತಿ ಹೇಳಿರಬಹುದು. ಸಿಕ್ಕಾಗ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು.

‘ಹಣ ಕೊಡಲು ಯಾರು ಬಂದಿದ್ದರು. ಆಮಿಷ ಒಡ್ಡಿದವರಾರು ಎನ್ನುವುದನ್ನು ಅವರನ್ನೇ ಕೇಳುತ್ತೇನೆ’ ಎಂದರು.

‘ಅಧಿಕಾರಿ ಶಾಶ್ವತವಲ್ಲ. ಇದ್ದಾಗ ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲ ಶಾಸಕರಿಗೂ ಸಚಿವ ಸ್ಥಾನ ಕೊಡಲಾಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.