ADVERTISEMENT

ಬೆಳಗಾವಿ: 5 ದಿನಗಳ ನಿರ್ಬಂಧ ತೆರವು

ಸಂಪ್ರದಾಯದಂತೆ ಆಚರಿಸಲು ಅವಕಾಶ ನೀಡಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 14:51 IST
Last Updated 13 ಸೆಪ್ಟೆಂಬರ್ 2021, 14:51 IST

ಬೆಳಗಾವಿ: ‘ಸಾರ್ವಜನಿಕ ಗಣೇಶೋತ್ಸವಕ್ಕೆ 5 ದಿನಗಳವರೆಗೆ ಮಾತ್ರವೇ ಅವಕಾಶವಿದೆ’ ಎಂದು ವಿಧಿಸಲಾಗಿದ್ದ ನಿರ್ಬಂಧವನ್ನು ಸಡಿಲಿಕೆ ಮಾಡಲಾಗಿದೆ. ಕೋವಿಡ್–19 ನಿಯಮಾವಳಿಗಳನ್ನು ಪಾಲಿಸಿಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸರ್ಕಾರದಿಂದ ಸೂಚಿಸಲಾಗಿದೆ.

‘ಕೋವಿಡ್ ಕಾರಣದಿಂದ ಎರಡು ವರ್ಷಗಳು ಗಣೇಶೋತ್ಸವವನ್ನು ಸರಳವಾಗಿ ನಡೆಸಲಾಗಿತ್ತು. ಈ ಬಾರಿ ಕೊರೊನಾ ವೈರಾಣು ಹರಡುವಿಕೆ ಪ್ರಮಾಣ ಕಡಿಮೆ ಆಗಿರುವುದರಿಂದ 11 ದಿನಗಳವರೆಗೆ ಅವಕಾಶ ನೀಡಬೇಕು’ ಎನ್ನುವುದು ಗಣೇಶೋತ್ಸವ ಮಹಾಮಂಡಳಗಳು ಮತ್ತು ಭಕ್ತರ ಬೇಡಿಕೆಯಾಗಿತ್ತು.

‘ಕೋವಿಡ್ ಹರಡುವಿಕೆ ತಡೆಯುವ ಉದ್ದೇಶದಿಂದ ಐದು ದಿನಗಳವರೆಗೆ ಮಾತ್ರವೇ ಅನುವು ಮಾಡಿಕೊಡಲಾಗಿದೆ’ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿತ್ತು. ಆದರೆ, ಭಕ್ತರ ಬೇಡಿಕೆಗೆ ಸರ್ಕಾರ ಕೊನೆಗೂ ಮಣಿದಿದ್ದು, ಐದು ದಿನಗಳ ನಿರ್ಬಂಧವನ್ನು ತೆರವುಗೊಳಿಸಿದೆ. ಸಂಪ್ರದಾಯದ ಪ್ರಕಾರ ಉತ್ಸವ ನಡೆಸುವುದಕ್ಕೆ ಅವಕಾಶವನ್ನು ಸೋಮವಾರ ಕಲ್ಪಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

ADVERTISEMENT

‘ಸೆ.5ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಗಳಲ್ಲಿ ಗಣೇಶೋತ್ಸವವನ್ನು ಗರಿಷ್ಠ ಐದು ದಿನಗಳಿಗಿಂತ ಹೆಚ್ಚು ದಿನಗಳು ಆಚರಿಸುವಂತಿಲ್ಲ ಎಂದು ತಿಳಿಸಲಾಗಿತ್ತು. ಅದಕ್ಕೆ ಸಡಿಲಿಕೆ ನೀಡಲಾಗಿದೆ. ಉಳಿದೆಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸುವಂತೆ ಆಯಾ ದಿನಗಳಿಗೆ ಸೀಮಿತಗೊಳಿಸಿ ಅಚರಿಸಬಹುದು ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಗಣೇಶೋತ್ಸವಕ್ಕೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸುವಂತೆ ಇಲ್ಲಿನ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬೆಂಗಳೂರಿನಲ್ಲಿ ಚರ್ಚಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕೂಡ ಈ ವಿಷಯದಲ್ಲಿ ಗಮನಸೆಳೆದಿದ್ದರು. ಈಗ, ಸರ್ಕಾರದಿಂದ ಅವಕಾಶ ಸಿಕ್ಕಿರುವುದರಿಂದಾಗಿ ಬಹುತೇಕ ಗಣೇಶ ಮಹಾಮಂಡಳಗಳು 11 ದಿನಗಳವರೆಗೆ ಗಣೇಶೋತ್ಸವ ಆಚರಿಸಲಿವೆ. ಬಳಿಕ ಮೂರ್ತಿಗಳನ್ನು ವಿಸರ್ಜಿಸಲಿವೆ. ಆದರೆ, ಮಾರ್ಗಸೂಚಿಗಳ ಪ್ರಕಾರ ಮೆರವಣಿಗೆಗೆ ಅವಕಾಶ ನೀಡಲಾಗಿಲ್ಲ.

ವಾಹನಗಳ ವ್ಯವಸ್ಥೆ:

ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಕೆರೆ-ಬಾವಿಗಳಲ್ಲಿ ವಿಸರ್ಜಿಸಿ ಜಲ ಅಥವಾ ಪರಿಸರ ಮಾಲಿನ್ಯ ಮಾಡುತ್ತಿರುವುದನ್ನು ತಡೆಗಟ್ಟಲು ಮಹಾನಗರ ಪಾಲಿಕೆ ವತಿಯಿಂದ ಕೆಲವು ಸ್ಥಳಗಳನ್ನು ಆಯ್ಕೆ ಮಾಡಿ, ಅಲ್ಲಿ ಸಂಚಾರಿ ವಿಸರ್ಜನಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ವಿಸರ್ಜನಾ ವಾಹನಗಳಲ್ಲಿ ವಿಸರ್ಜಿಸಬೇಕು. ವಾಹನಗಳು ಸೆ.14ರಂದು ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಲಭ್ಯ ಇರಲಿವೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. ಸಂಖ್ಯೆ: 9632605358 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.