ADVERTISEMENT

ಹುಲಿ ಸಂಚಾರ ಭೀತಿ: ಅಧಿಕಾರಿಗಳ ಪರಿಶೀಲನೆ

ಆತಂಕಕ್ಕೆ ಒಳಗಾದ ಕೋಹಳ್ಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 14:58 IST
Last Updated 19 ಸೆಪ್ಟೆಂಬರ್ 2021, 14:58 IST
ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮದ ತೋಟದಲ್ಲಿ ಹುಲಿಮರಿ ಸಂಚರಸಿದೆ ಎನ್ನಲಾದ ಸ್ಥಳವನ್ನು ಅರಣ್ಯ ಇಲಾಖೆಯವರು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದರು
ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮದ ತೋಟದಲ್ಲಿ ಹುಲಿಮರಿ ಸಂಚರಸಿದೆ ಎನ್ನಲಾದ ಸ್ಥಳವನ್ನು ಅರಣ್ಯ ಇಲಾಖೆಯವರು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದರು   

ಅಥಣಿ: ತಾಲ್ಲೂಕಿನ ಕೋಹಳ್ಳಿ ಗ್ರಾಮದ ಕೆರೆ ರಸ್ತೆಯ ತೋಟದಲ್ಲಿ ಶನಿವಾರ ಸಂಜೆ ಹುಲಿಮರಿ ಹಾಗೂ ಕಾಡುಕೋಣ ಕಾಣಿಸಿಕೊಂಡಿದೆ ಎಂಬ ವದಂತಿ ಹರಿದಾಡಿದ್ದರಿಂದಾಗಿ ಅಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಗ್ರಾಮದ ಡಂಬಳಿಯವರ ತೋಟದಲ್ಲಿ ಹುಲಿ ಮರಿಯನ್ನು ಹೋಲುವಂತಹ ಪ್ರಾಣಿ ಕಾಣಿಸಿಕೊಂಡಿವೆ ಎನ್ನಲಾಗಿದೆ. ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರಿಂದಾಗಿ ಜನರು ಆತಂಕದಲ್ಲೇ ರಾತ್ರಿ ಕಳೆದಿದ್ದಾರೆ.

ವಿಷಯ ತಿಳಿದ ವಲಯ ಅರಣ್ಯ ಅಧಿಕಾರಿ ಪ್ರಶಾಂತ ಗಾಣಿಗೇರ ನೇತೃತ್ವದ ತಂಡ ಬಂದು ಸ್ಥಳ ಪರಿಶೀಲನೆ ನಡೆಸಿತು.

ADVERTISEMENT

‘ಇಲ್ಲಿ ಸಂಚರಿಸಿರುವುದು ಹುಲಿ ಮರಿ ಅಲ್ಲ; ಅದು ಕಾಡು ಬೆಕ್ಕು. ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದಾಗ ಇದು ಸ್ಪಷ್ಟವಾಗಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಪ್ರಶಾಂತ ಹೇಳಿದರು.

‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿರುವ ಪ್ರಾಣಿಯೂ ಕಾಡು ಬೆಕ್ಕು ರೀತಿಯೇ ಕಾಣಿಸುತ್ತಿದೆ. ಹೆಜ್ಜೆ ಗುರುತು ಸಹ ಹುಲಿ ಮರಿಯದ್ದಲ್ಲ. ಇಲ್ಲಿಗೆ ಹುಲಿ ಬರಲು ಸಾಧ್ಯವೇ ಇಲ್ಲ. ಜನರು ವದಂತಿಗಳಿಗೆ ಕಿವಿಕೊಡಬಾರದು’ ಎಂದರು.

‘ಮತ್ತೊಂದು ಸ್ಥಳದಲ್ಲಿ ಕಾಣಿಸಿಕೊಂಡ ಕಾಡುಕೋಣವನ್ನು ಪತ್ತೆ ಹಚ್ಚಿ, ಊರಿಂದ ಹೊರಗಡೆಗೆ ಓಡಿಸಲಾಗುವುದು’ ಎಂದು ತಿಳಿಸಿದರು.

ಅರಣ್ಯ ಅಧಿಕಾರಿಗಳಾದ ಮಂಜುನಾಥ ಪಾಟೀಲ, ಸುರೇಶ ಬಾಗಿ, ಮಹಾಂತೇಶ ಚೌಗಲಾ, ಇಸ್ಮಾಯಿಲ್ ಪಠಾಣ, ಶಂಕರಯ್ಯ ಪೂಜಾರಿ, ನಾಗಪ್ಪ ಆಚಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.