ADVERTISEMENT

ಬೆಳಗಾವಿ | ಪಿಯು ಮೌಲ್ಯಮಾಪನ: 1,640 ಉಪನ್ಯಾಸಕರು ಗೈರು!

​ಪ್ರಜಾವಾಣಿ ವಾರ್ತೆ
Published 29 ಮೇ 2020, 14:28 IST
Last Updated 29 ಮೇ 2020, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ನಗರದ ಐದು ಕೇಂದ್ರಗಳಲ್ಲಿ ಆರಂಭವಾದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಗೆ ನಿಯೋಜಿಸಿದ್ದ 2,240 ಉಪನ್ಯಾಸಕರ ಪೈಕಿ 600 ಮಂದಿಯಷ್ಟೇ ಹಾಜರಾಗಿದ್ದಾರೆ. ಬರೋಬ್ಬರಿ 1,640 ಮಂದಿ ಗೈರು ಹಾಜರಾಗಿದ್ದಾರೆ.

ಆರ್‌ಎಲ್‌ಎಸ್ ಪಿಯು ಕಾಲೇಜಿನಲ್ಲಿ ಕನ್ನಡ, ಜ್ಯೋತಿ ಪಿಯು ಕಾಲೇಜಿನಲ್ಲಿ ಅರ್ಥಶಾಸ್ತ್ರ, ಗೋಗಟೆ ಪಿಯು ಕಾಲೇಜಿನಲ್ಲಿ ಇತಿಹಾಸ, ಜಿಎಸ್‌ಎಸ್‌ ಪಿಯು ಕಾಲೇಜಿನಲ್ಲಿ ಮರಾಠಿ ಹಾಗೂ ರಾಜ್ಯಶಾಸ್ತ್ರ, ಜೆ.ಎ. ಸವದತ್ತಿ ಪಿಯು ಕಾಲೇಜಿನಲ್ಲಿ ಸಮಾಜವಿಜ್ಞಾನ ವಿಷಯದ ಮೌಲ್ಯಮಾಪನ ಕೇಂದ್ರಗಳನ್ನು ಮಾಡಲಾಗಿದೆ. ಆದರೆ, ಮೌಲ್ಯಮಾಪಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರಿಂದಾಗಿ, ಮೌಲ್ಯಮಾಪನ ಪ್ರಕ್ರಿಯೆ ವಿಳಂಬವಾಗುವ ಆತಂಕ ಎದುರಾಗಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ವಿವಿಧ ಏಳು ಜಿಲ್ಲೆಗಳ ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಬಹುತೇಕರು ಕೊರೊನಾ ಭೀತಿ, ಲಾಕ್‌ಡೌನ್‌ ಕಾರಣದಿಂದ ಕೆಲಸದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ. ಇದರೊಂದಿಗೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದವರು ಈಚೆಗೆ ವ್ಯಕ್ತಪಡಿಸಿದ್ದ ಅನುಮಾನ ನಿಜವಾಗಿದೆ. ‘ಆಯಾ ಜಿಲ್ಲಾ ಕೇಂದ್ರಗಳಲ್ಲೇ ಮೌಲ್ಯಮಾಪನಕ್ಕೆ ಅವಕಾಶ ನೀಡುವ ವಿಕೇಂದ್ರೀಕರಣಕ್ಕೆ ವ್ಯವಸ್ಥೆ ಮಾಡಬೇಕು. ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸಾರಿಗೆ, ವಸತಿ ಹಾಗೂ ಊಟೋಪಚಾರಕ್ಕೆ ತೊಂದರೆ ಆಗಬಹುದು’ ಎಂದು ಸಂಘದವರು ಹೇಳಿದ್ದರು.

ADVERTISEMENT

‘ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಂದ ಬರುವ ಮೌಲ್ಯಮಾಪಕರಿಗೆ ಊಟ ಮತ್ತು ವಸತಿ ಸಮಸ್ಯೆ ಕಾಡದಿರಲೆಂದು ಎರಡು ಕಾಲೇಜುಗಳ ಹಾಸ್ಟೆಲ್‌ಗಳು ಹಾಗೂ 10 ಲಾಡ್ಜ್‌ಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ. ಆದರೆ, ಲಾಕ್‌ಡೌನ್ ನೆಪವೊಡ್ಡಿ ಹೆಚ್ಚಿನ ಉಪನ್ಯಾಸಕರು ಬಂದಿಲ್ಲ. ನಿಯೋಜನೆಗೊಂಡ ಎಲ್ಲ ಉಪನ್ಯಾಸಕರು ಸಕಾಲಕ್ಕೆ ಹಾಜರಾದರೆ, 10-12 ದಿನಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇಲ್ಲದಿದ್ದರೆ ವಿಳಂಬವಾಗಲಿದೆ’ ಎಂದು ಡಿಡಿಪಿಯು ರಾಜಶೇಖರ ಪಟ್ಟಣಶೆಟ್ಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.