ADVERTISEMENT

PV Web Exclusive | ಕೋವಿಡ್ ಭೀತಿ: ಪ್ರಾಣಿಗಳ ಮೇಲೆ ನಿಗಾ

ಬೆಳಗಾವಿ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಮುಂಜಾಗ್ರತಾ ಕ್ರಮ

ಎಂ.ಮಹೇಶ
Published 6 ಮೇ 2021, 11:34 IST
Last Updated 6 ಮೇ 2021, 11:34 IST
ಬೆಳಗಾವಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ಸಿಂಹ ‘ನಕುಲ’ (ಸಂಗ್ರಹ ಚಿತ್ರ)
ಬೆಳಗಾವಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ಸಿಂಹ ‘ನಕುಲ’ (ಸಂಗ್ರಹ ಚಿತ್ರ)   

ಬೆಳಗಾವಿ: ಹೈದರಾಬಾದ್‌ನ ನೆಹರೂ ಜೈವಿಕ ಉದ್ಯಾನದ ಎಂಟು ಸಿಂಹಗಳಿಗೆ ಕೋವಿಡ್–19 ದೃಢಪಟ್ಟಿರುವ ಕಾರಣದಿಂದಾಗಿ ಇಲ್ಲಿನ ಭೂತರಾಮನಹಟ್ಟಿ ಸಮೀಪದಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಪ್ರಾಣಿಗಳ ಆರೋಗ್ಯದಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

ಈ ಮೃಗಾಲಯಕ್ಕೆ ಫೆಬ್ರುವರಿ ಕೊನೆಯ ವಾರದಲ್ಲಿ, ಬನ್ನೇರಘಟ್ಟ ಜೈವಿಕ ಉದ್ಯಾನದಿಂದ 3 ಸಿಂಹಗಳನ್ನು ತರಲಾಗಿದೆ. ‘ನಕುಲ’, ‘ಕೃಷ್ಣ’ ಹಾಗೂ ‘ನಿರುಪಮಾ’ ಹೆಸರಿನ ಈ ಸಿಂಹಗಳು 2010ರ ಫೆ.12ರಂದು ‘ಪ್ರೇಕ್ಷಾ’–‘ಗಣೇಶ’ ಜೋಡಿಗೆ ಜನಿಸಿದವಾಗಿವೆ. ಅವುಗಳಿಗೆ ಜಾಗ ಬದಲಾವಣೆ ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿ ಇರಿಸಿ, ಅವುಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿತ್ತು. ಮೈಸೂರು ಮೃಗಾಲಯದಿಂದ ಎರಡು ಗಂಡು ಹುಲಿಗಳನ್ನು ಬಳಿಕ ತರಲಾಗಿತ್ತು. ಅವು ಅರಣ್ಯ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದವಾಗಿವೆ. ಮೈಸೂರು ಮೃಗಾಲಯದಿಂದ ತಂದ ಅವುಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

ಆಕರ್ಷಣೆ ಹೆಚ್ಚಾಗಿದೆ

ADVERTISEMENT

ಇವೆಲ್ಲವನ್ನೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದ ಕೆಲವೇ ದಿನಗಳಲ್ಲಿ ಸಂದರ್ಶಕರ ಸಂಖ್ಯೆ ಜಾಸ್ತಿಯಾಗಿತ್ತು. ಈ ಪ್ರಾಣಿಧಾಮದ ಆಕರ್ಷಣೆಯೂ ಹೆಚ್ಚಾಗಿತ್ತು.

ಬಳಿಕ ಶಿವಮೊಗ್ಗ ಮೃಗಾಲಯದಿಂದ ಮೂರು ಚಿರತೆ ಹಾಗೂ ಗದಗದಿಂದ ಎರಡು ನರಿಗಳನ್ನು ತರಿಸಲಾಗಿದೆ. ಕೋವಿಡ್ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಸಂದರ್ಶಕರ ಭೇಟಿಗೆ ಅವಕಾಶ ಕಲ್ಪಿಸಿಲ್ಲ.

ಕೋವಿಡ್ ಹಿನ್ನೆಲೆಯಲ್ಲಿ ಮೃಗಾಲಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ದಿನಕ್ಕೆರಡು ಬಾರಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತಿದೆ. 15 ಮಂದಿ ಸಿಬ್ಬಂದಿ ಇದ್ದು, ಅವರೆಲ್ಲರಿಗೂ ಮಾಸ್ಕ್‌ಗಳು, ಕೈಗವಸುಗಳನ್ನು ಒದಗಿಸಲಾಗಿದೆ. ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ. ಪ್ರಾಣಿಗಳ ಮನೆಗಳ ಬಳಿಗೆ ಹೋಗುವಾಗ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಬೇಕು. ನೆಗಡಿ, ಕೆಮ್ಮೆ ಅಥವಾ ಜ್ವರದಂತಹ ಸೋಂಕಿನ ಲಕ್ಷಣವಿದ್ದರೆ ಕೆಲಸಕ್ಕೆ ಬರುವುದು ಬೇಡ ಎಂದು ಸಿಬ್ಬಂದಿಗೆ ತಿಳಿಸಲಾಗಿದೆ.

ಸಿಬ್ಬಂದಿಗೆ ಪರೀಕ್ಷೆ, ಲಸಿಕೆ

ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆ ಒಳಪಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಎಲ್ಲರಿಗೂ ಕೋವಿಡ್ ರೋಗ ನಿರೋಧಕ ಲಸಿಕೆಯ 1ನೇ ಡೋಸ್ ಕೊಡಿಸಲಾಗಿದೆ.

‘ಹೈದರಾಬಾದ್‌ನಲ್ಲಿ ಎಂಟು ಸಿಂಹಗಳಿಗೆ ಕೋವಿಡ್ ದೃಢಪಟ್ಟಿದ್ದರಿಂದ ನಮ್ಮಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದೆ. ವೈದ್ಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ನಮ್ಮಲ್ಲಿರುವ ಮೂರು ಸಿಂಹಗಳಲ್ಲೂ ಯಾವುದೇ ಸೋಂಕಿನ ಲಕ್ಷಣಗಳಿಲ್ಲ. ಹೊಸ ಜಾಗಕ್ಕೆ ಹೊಂದಿಕೊಂಡಿದ್ದು, ಲವಲವಿಕೆಯಿಂದಿವೆ. ಆಹಾರ ಪದಾರ್ಥವನ್ನು ಚೆನ್ನಾಗಿ ಸೇವಿಸುತ್ತಿವೆ. ಇಡೀ ಮೃಗಾಲಯದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಆರ್‌ಎಫ್‌ಒ ರಾಕೇಶ ಅರ್ಜುನವಾಡ ‘ಪ್ರಜಾವಾಣಿ’ ತಿಳಿಸಿದರು.

ಸಿಂಹ, ಹುಲಿಗಳ ಸೇರ್ಪಡೆ ಬಳಿಕ ನಿತ್ಯ ಸರಾಸರಿ ₹ 20ಸಾವಿರದಿಂದ ₹25ಸಾವಿರ ಬರುತ್ತಿತ್ತು. ವಾರಾಂತ್ಯದಲ್ಲಿ ಸರಾಸರಿ ₹70ಸಾವಿರ ವರಮಾನ ಸಂಗ್ರಹವಾಗುತ್ತಿತ್ತು. ಕೋವಿಡ್ ಕರ್ಫ್ಯೂನಿಂದಾಗಿ ಆದಾಯ ಇಲ್ಲದಾಗಿದೆ. ಪರಿಣಾಮ, ಪ್ರಾಣಿಗಳ ನಿರ್ವಹಣೆಗೆ ತೊಡಕಾಗುತ್ತಿದೆ.

ಪ್ರಾಣಿ–ಪಕ್ಷಿ ಪ್ರೇಮಿಗಳು ವಾರ್ಷಿಕ ಇಂತಿಷ್ಟು ಹಣ ನೀಡಿ ದತ್ತು ಸ್ವೀಕರಿಸಲು ಮುಂದಾಗಬೇಕು. ಆನ್‌ಲೈನ್‌ನಲ್ಲೇ ದತ್ತು ಸ್ವೀಕಾರ ಪ್ರಕ್ರಿಯೆ ಮಾಡಿಕೊಳ್ಳಲು ಅವಕಾಶವಿದೆ. ಪ್ರವೇಶ ಶುಲ್ಕದಿಂದ ಬರುತ್ತಿದ್ದ ಆದಾಯ ನಿಂತಿರುವುದರಿಂದಾಗಿ ನಿರ್ವಹಣೆ ಕಷ್ಟವಾಗಿದೆ. ಸಾರ್ವಜನಿಕರು ನೆರವಾಗಬೇಕು ಎನ್ನುವುದು ಅಧಿಕಾರಿಗಳ ಮನವಿಯಾಗಿದೆ.

ಇಲ್ಲಿ ಕೃಷ್ಣಮೃಗಗಳು, ಕೊಂಡು ಕುರಿಗಳು, ಮೊಸಳೆಗಳು, ಆಮೆಗಳು ಹಾಗೂ 6 ರೀತಿಯ ಪಕ್ಷಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.