ADVERTISEMENT

PV Web Exclusive: ಮತ್ತೊಂದು ಕಚೇರಿ ಮೇಲೆ ಧಾರವಾಡದವರ ಕಣ್ಣು!

ಗಡಿ ನಾಡಿನ ಕನ್ನಡ ಹೋರಾಟಗಾರರ ಆಕ್ರೋಶ

ಎಂ.ಮಹೇಶ
Published 29 ನವೆಂಬರ್ 2021, 12:31 IST
Last Updated 29 ನವೆಂಬರ್ 2021, 12:31 IST
ಅಶೋಕ ಚಂದರಗಿ ಮತ್ತು ದೀಪಕ ಗುಡಗನಟ್ಟಿ
ಅಶೋಕ ಚಂದರಗಿ ಮತ್ತು ದೀಪಕ ಗುಡಗನಟ್ಟಿ   

ಬೆಳಗಾವಿ: ಕಂದಾಯ ವಿಭಾಗದ ಕೇಂದ್ರ ಸ್ಥಾನವಾದರೂ ಶಿಕ್ಷಣ ಇಲಾಖೆ ವಿಭಾಗೀಯ, ಕೆ–ಶಿಪ್‌ ಮೊದಲಾದ ಕಚೇರಿಗಳನ್ನು ಕಳೆದುಕೊಂಡಿರುವ ಬೆಳಗಾವಿಯಿಂದ ಮತ್ತೊಂದು ಪ್ರಮುಖ ಕಚೇರಿಯನ್ನು ಕಸಿದುಕೊಳ್ಳಲು ನೆರೆಯ ಧಾರವಾಡ ಜಿಲ್ಲೆಯವರು ತಯಾರಿ ನಡೆಸಿದ್ದಾರೆ.

ಇಲ್ಲಿಗೆ ಹೊಸದಾಗಿ ದೊರೆತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ತಮ್ಮದಾಗಿಸಿಕೊಳ್ಳಲು ಅವರು ಮುಂದಡಿ ಇಟ್ಟಿದ್ದಾರೆ.

ಇಲಾಖೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ಅಧಿಕಾರ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ರಾಜ್ಯದ 4 ಕಂದಾಯ ವಿಭಾಗಗಳಿಗೆ ಜಂಟಿ ನಿರ್ದೇಶಕರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇತ್ತೀಚೆಗೆ ಆದೇಶ ಹೊರಡಿಸಿದೆ. ಬೆಳಗಾವಿ ಕಂದಾಯ ವಿಭಾಗಕ್ಕೆ ಬೆಳಗಾವಿ ವಲಯದ ಜಂಟಿ ನಿರ್ದೇಶಕರಾಗಿ ಬಸವರಾಜ ಹೂಗಾರ ಅವರನ್ನು ನೇಮಿಸಲಾಗಿದೆ. ಅವರು ಸೋಮವಾರವಷ್ಟೆ ಅಧಿಕಾರ ಸ್ವೀಕರಿಸಿದ್ದಾರೆ.

ADVERTISEMENT

ವಲಯವು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ, ಉತ್ತರಕನ್ನಡ ಮತ್ತು ಧಾರವಾಡ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಈ ಜಿಲ್ಲೆಗಳಲ್ಲಿ ಬರುವ ಟ್ರಸ್ಟ್‌ಗಳು, ಅಕಾಡೆಮಿಗಳು ಮತ್ತು ರಂಗಾಯಣ, ರಂಗಮಂದಿರಗಳು ಹಾಗೂ ಸಹಾಯಕ ನಿರ್ದೇಶಕರ ಮೇಲ್ವಿಚಾರಣೆಯ ಅಧಿಕಾರವನ್ನು ನೂತನ ಜಂಟಿ ನಿರ್ದೇಶಕರಿಗೆ ನೀಡಲಾಗಿದೆ. ಈ ಕಚೇರಿಯನ್ನು ಹೈಜಾಕ್ ಮಾಡಲು ಧಾರವಾಡದವರು ಕಾರ್ಯತಂತ್ರ ರೂಪಿಸಿರುವುದು ಇಲ್ಲಿನ ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ಹೋರಾಟದ ನಡುವೆಯೇ: ಪ್ರಮುಖ ಕಚೇರಿಗಳು ಅದರಲ್ಲೂ ಕನ್ನಡ ನಾಡು–ನುಡಿಗೆ ಸಂಬಂಧಿಸಿದ ಕಚೇರಿಗಳು ಗಡಿ ನಾಡಾದ ಬೆಳಗಾವಿಗೆ ಬರಬೇಕು ಎನ್ನುವುದು ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆಯಾಗಿದೆ. ಈಡೇರಿಕೆಗಾಗಿ ಹಿಂದಿನಿಂದಲೂ ಹೋರಾಟವನ್ನೂ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೊರೆತಿರುವ ಕಚೇರಿಯೊಂದನ್ನು ಬೆಳಗಾವಿಗರು ಕಳೆದುಕೊಳ್ಳುವ ಭೀತಿಯನ್ನು ಧಾರವಾಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದವರು ಉಂಟು ಮಾಡಿದ್ದಾರೆ.

‘ವಿಭಾಗದ ಎಲ್ಲ ಜಿಲ್ಲೆಗಳಿಗೆ ಕೇಂದ್ರದಲ್ಲಿರುವ, ವಿದ್ಯಾವರ್ಧಕ ಸಂಘ, ರಂಗಾಯಣ ಸೇರಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ರಿಯಾಶೀಲ ಸಂಘಟನೆಗಳ ಕೇಂದ್ರ ಸ್ಥಾನವಾದ ಧಾರವಾಡದಲ್ಲಿ ಸಾಹಿತಿಗಳು ಮತ್ತು ಕಲಾವಿದರ ಅನುಕೂಲಕ್ಕಾಗಿ ಸ್ಥಾಪಿಸಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ಸರ್ಕಾರದ ಗಮನಸೆಳೆಯುವುದಕ್ಕೂ ಮುಂದಾಗಿದ್ದಾರೆ.

ಅವಕಾಶ ಕೊಡುವುದಿಲ್ಲ: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯು ವಿಭಾಗದ ಕೇಂದ್ರ ಸ್ಥಾನವಾದ ಬೆಳಗಾವಿಯಲ್ಲೇ ಇರಬೇಕು. ಕಚೇರಿಯನ್ನು ಧಾರವಾಡಕ್ಕೆ ಒಯ್ಯಲು ಅಲ್ಲಿನವರು ಸಿದ್ಧತೆ ನಡೆಸಿರುವುದು ಸರಿಯಲ್ಲ. ಅದು ಖಂಡನೀಯ. ಪ್ರಮುಖ ಕಚೇರಿಗಳು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಬರಬೇಕು ಎಂದು ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಹೀಗಿರುವಾಗ, ನಮ್ಮಿಂದ ಮತ್ತೊಂದು ಕಚೇರಿ ಕಿತ್ತುಕೊಳ್ಳಲು ಅವಕಾಶ ಕೊಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ಇದನ್ನು ತರಲಾಗುವುದು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಧಿಕಾರಿಗಳಿಗೆ ಇಲ್ಲಿಗೆ ಬರುವುದಕ್ಕೆ ಇಷ್ಟವಿಲ್ಲ ಎನ್ನುವ ಕಾರಣಕ್ಕೆ ಕಚೇರಿಯನ್ನೇ ಧಾರವಾಡಕ್ಕೆ ಸ್ಥಳಾಂತರ ಮಾಡಿಸಿಕೊಳ್ಳುವುದು ತೀವ್ರ ಖಂಡನೀಯ. ಅಧಿಕಾರಿಗಳು ಬರದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಆದರೆ, ಕಚೇರಿಯನ್ನು ಇಲ್ಲೇ ಸ್ಥಾಪಿಸಬೇಕು. ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಮಣಿಯುವ ಪ್ರಶ್ನೆಯೇ ಇಲ್ಲ. ಸ್ಥಳಾಂತರಕ್ಕೆ ನಡೆದಿರುವ ಪ್ರಯತ್ನ ವಿರೋಧಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.