ADVERTISEMENT

ಸವದತ್ತಿ ಯಲ್ಲಮ್ಮ ದೇವಸ್ಥಾನ: ಸಾರ್ವಜನಿಕರ ದರ್ಶನಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 12:57 IST
Last Updated 22 ಸೆಪ್ಟೆಂಬರ್ 2021, 12:57 IST
ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಿ
ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಿ   

ಬೆಳಗಾವಿ: ಜಿಲ್ಲೆಯ ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಸೆ.28ರಿಂದ ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಈ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ 2020ರ ಮಾರ್ಚ್‌ 18ರಿಂದ ನಿಷೇಧ ಹೇರಲಾಗಿತ್ತು. ಇದು 10 ತಿಂಗಳವರೆಗೆ ಮುಂದುವರಿದಿತ್ತು. ಕೋವಿಡ್ ಪ್ರಕರಣಗಳು ಕಡಿಮೆಯಾದ್ದರಿಂದಾಗಿ 2021ರ ಫೆ.1ರಂದು ಪ್ರವೇಶಕ್ಕೆ ಅನುಮತಿ ಕೊಡಲಾಗಿತ್ತು. ಆದರೆ, ಮತ್ತೆ ಕೊರೊನಾ ಹೆಚ್ಚಾದ್ದರಿಂದಾಗಿ ಇಪ್ಪತ್ತೇ ದಿನಗಳಲ್ಲಿ ಜಿಲ್ಲಾಡಳಿತದಿಂದ ನಿರ್ಬಂಧ ವಿಧಿಸಲಾಗಿತ್ತು. ಈಗ ಕೊರೊನಾ ವೈರಾಣು ಹರಡುವಿಕೆ ನಿಯಂತ್ರಣದಲ್ಲಿರುವುದರಿಂದ, ಮಾರ್ಗಸೂಚಿ ಪಾಲನೆಯ ಷರತ್ತಿಗೆ ಒಳಪಟ್ಟು ಮುಕ್ತಗೊಳಿಸಲಾಗಿದೆ.

‘ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜನಸಂದಣಿ ಸೇರುವ ಸೇವೆ, ವಿಶೇಷ ಉತ್ಸವ, ಜಾತ್ರೆ ಮೊದಲಾದ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ದೇವಾಲಯದ ಸುತ್ತಮುತ್ತಲಿನ ಆವರಣದಲ್ಲಿ, 80 ಅಡಿ ರಸ್ತೆಯಲ್ಲಿ ಮತ್ತು ಬಳೆಗಾರ ಪೇಟೆ ಪ್ರದೇಶದಲ್ಲಿ ಯಾವುದೇ ರೀತಿಯ ಅಂಗಡಿಗಳನ್ನು ತೆರೆಯುವಂತಿಲ್ಲ. ಈ ಹಿಂದಿನಿಂದಲೂ ವ್ಯಾಪಾರ ನಡೆಸುತ್ತಿದ್ದ ಅಂಗಡಿಕಾರರು ದೇವಾಲಯದಿಂದ ವರ್ತುಲ ರಸ್ತೆಯ ಬಳಿ ಕಲ್ಪಿಸಿರುವ ಜಾಗದಲ್ಲಿ ಮಾತ್ರವೇ ಅಂಗಡಿ ಹಾಕಲು ಅವಕಾಶವಿದೆ. ಎಲ್ಲ ರೀತಿಯ ವಾಹನಗಳನ್ನೂ ಚೆಕ್‌ಪೋಸ್ಟ್‌ಗಳ ಬಳಿಯೇ ನಿಗದಿಪಡಿಸಿದ ಸ್ಥಳದಲ್ಲೇ ನಿಲುಗಡೆ ಮಾಡಬೇಕು’ ಎಂದು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.