ADVERTISEMENT

ಯುಪಿಎಸ್‌ಸಿ ಫಲಿತಾಂಶ: ಬೆಳಗಾವಿ ಜಿಲ್ಲೆಯ ಶಾಕೀರಅಹ್ಮದಗೆ 583ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 15:28 IST
Last Updated 24 ಸೆಪ್ಟೆಂಬರ್ 2021, 15:28 IST
ಶಾಕೀರಅಹ್ಮದ ಅಕಬರಸಾಬ ತೊಂಡಿಖಾನ
ಶಾಕೀರಅಹ್ಮದ ಅಕಬರಸಾಬ ತೊಂಡಿಖಾನ    

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕು ರಾಮಾಪುರಸೈಟ್‌ನವರಾದ ಶಾಕೀರಅಹ್ಮದ ಅಕಬರಸಾಬ ತೊಂಡಿಖಾನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 583ನೇ ರ‍್ಯಾಂಕ್‌ ಗಳಿಸಿದ್ದಾರೆ.

31 ವರ್ಷದ ಶಾಕೀರಅಹ್ಮದ ಹಲವು ಬಾರಿ ಪ್ರಯತ್ನ ಮಾಡಿದ್ದರು. 2ನೇ ಬಾರಿಗೆ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಬೆಂಗಳೂರಿನ ಬಿಎಂಎಸ್ ಕಾಲೇಜಿನಿಂದ ಬಿ.ಇ. ಪದವೀಧರರಾದ ಅವರು ಮೊದಲು ಬೆಂಗಳೂರಿನ ಸ್ಯಾಮ್‌ಸಂಗ್‌ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಕೆಪಿಎಸ್‌ಸಿಯು ನಡೆಸಿದ 2014ನೇ ಸಾಲಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದರು. ಮತ್ತೆ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದ ಅವರು 2015ರಲ್ಲಿ ಫಲಿತಾಂಶ ಸುಧಾರಿಸಿಕೊಂಡಿದ್ದರು. ಪ್ರಸ್ತುತ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ತರಬೇತಿಯಲ್ಲಿದ್ದಾರೆ. 2017ರಿಂದ ಅವರು ಸರ್ಕಾರಿ ಅಧಿಕಾರಿಯಾಗಿದ್ದಾರೆ. ಕೆಲಸದಲ್ಲಿದ್ದುಕೊಂಡೇ ಓದಿ ಯು‍ಪಿಎಸ್‌ಸಿಯಲ್ಲಿ ಸಾಧನೆ ತೋರಿದ್ದಾರೆ. ಅವರ ತಂದೆ ಅಕಬರಸಾಬ ತೊಂಡಿಖಾನ ಕೃಷಿ ಇಲಾಖೆ ನಿವೃತ್ತ ನೌಕರ ಹಾಗೂ ತಾಯಿ ಶಹನಾಜಬೇಗಂ ಗೃಹಿಣಿಯಾಗಿದ್ದಾರೆ.

ಹುಕ್ಕೇರಿಯಲ್ಲಿ ಎಸ್ಸೆಸ್ಸೆಲ್ಸಿ ಓದಿರುವ ಅವರು, ವಾರ್ಷಿಕ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದರು. ಬೆಳಗಾವಿಯ ಆರ್‌ಎಲ್ಎಸ್‌ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ. ಕಾಲೇಜಿನಲ್ಲಿ ನೀಡುವ ‘ಆದರ್ಶ ವಿದ್ಯಾರ್ಥಿ ಪ್ರಶಸ್ತಿ’ಗೆ ಭಾಜನವಾಗಿದ್ದರು. ಬೆಂಗಳೂರಿನ ಬಿಎಂಎಸ್ ಎಂಜಿಜಿಯರಿಂಗ್ (ಬಿಇ, ಇ ಅಂಡ್ ಸಿ ವಿಭಾಗ) ಪದವಿಯನ್ನು ರ‍್ಯಾಂಕ್‌ ಮತ್ತು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ.

ಕ್ಯಾಂಪಸ್‌ ಸಂದರ್ಶನದಲ್ಲಿ ಸ್ಯಾಮ್‌ಸಂಗ್‌ ಕಂಪನಿ ಕೆಲಸಕ್ಕೆ ಆಯ್ಕೆಯಾಗಿದ್ದ ಅವರು, 2012ರಿಂದ ಒಂದೂವರೆ ವರ್ಷ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಅಂಡ್ ಡಿ) ವಿಭಾಗದಲ್ಲಿ ಕೆಲಸ ಮಾಡಿದ್ದರು. ಸರ್ಕಾರಿ ಸೇವೆಗೆ ಸೇರಬೇಕೆಂದು ಆ ಕೆಲಸ ಬಿಟ್ಟು, ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಆರಂಭಿಸಿದ್ದರು.

‘ಪೋಷಕರ ಪ್ರೋತ್ಸಾಹ ಮತ್ತು ತ್ಯಾಗ ಹಾಗೂ ಗುರುಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಸರ್ಕಾರಿ ಸೇವೆಗೆ ಸೇರಬೇಕು ಮತ್ತು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬಯಕೆ ಇತ್ತು. ಹೀಗಾಗಿ, ಆ ಕೆಲಸ ಬಿಟ್ಟು ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಯುಪಿಎಸ್‌ಸಿಯಲ್ಲಿ ಹಲವು ಬಾರಿ ಪ್ರಯತ್ನ ಮಾಡಿದ್ದೇನೆ. ಆದರೆ, ಧೃತಿಗೆಡಲಿಲ್ಲ. ಸತತ ಪ್ರಯತ್ನ ಮಾಡಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು. ಕೆಎಎಸ್‌ ಅಧಿಕಾರಿಯಾಗಿ ಕೆಲಸದ ನಡುವೆಯೂ ಯುಪಿಎಸ್‌ಸಿ ಪರೀಕ್ಷೆಗೆ ಪ್ರಯತ್ನ ಮುಂದುವರಿಸಿದ್ದೆ. ಹಲವು ಬಾರಿ ಪ್ರಯತ್ನದಿಂದ ನೆರವಾಯಿತು. ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಹೋದೆ. ಸುಧಾರಿಸಿಕೊಂಡೆ’ ಎಂದು ತಿಳಿಸಿದರು.

‘ಆರಂಭದಲ್ಲಿ ಮಾತ್ರ ದೆಹಲಿಯಲ್ಲಿ ಕೋಚಿಂಗ್ ಪಡೆದಿದ್ದೆ. ಬಳಿಕ ಅನುಭವಗಳೇ ನನಗೆ ಕಲಿಸಿದವು. ಪ್ರಯತ್ನಗಳ ಮೂಲಕವೇ ಕಲಿತೆ. ಹೀಗಾಗಿ, ಸ್ವಯಂ ಸಿದ್ಧತೆ (ಅಭ್ಯಾಸ) ನಡೆಸುತ್ತಿದ್ದೆ’ ಎಂದು ಅನುಭವ ಹಂಚಿಕೊಂಡರು.

‘ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಯುಪಿಎಸ್‌ಸಿ, ಕೆಪಿಎಸ್‌ಸಿಯಂತಹ ಪರೀಕ್ಷೆ ಎದುರಿಸಲು ಕಠಿಣ ಪರಿಶ್ರಮ ಬೇಕೇ ಬೇಕು. ಪ್ರತಿ ಪ್ರಯತ್ನದಲ್ಲೂ ಸುಧಾರಣೆಗಾಗಿ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.