ADVERTISEMENT

ಮೂಡಲಗಿ: ವಿದ್ಯಾರ್ಥಿಗಳ ಕಲಿಕೆಗೆ ಹಲವು ಸೌಲಭ್ಯ

ಎಂಇಎಸ್‌ ಕಾಲೇಜು ವಿಶೇಷ

ಬಾಲಶೇಖರ ಬಂದಿ
Published 11 ಮಾರ್ಚ್ 2021, 14:18 IST
Last Updated 11 ಮಾರ್ಚ್ 2021, 14:18 IST
ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿದ್ಯಾರ್ಥಿನಿಯರ ನೃತ್ಯದ ಸೊಬಗು
ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿದ್ಯಾರ್ಥಿನಿಯರ ನೃತ್ಯದ ಸೊಬಗು   

ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಕ್ಯಾಂಪಸ್‌ಗೆ ಕಾಲಿಡುತ್ತಿದ್ದಂತೆಯೇ ಹಸಿರಿನ ಗಿಡ–ಮರಗಳು ಸ್ವಾಗತಿಸಿ, ಮನಕ್ಕೆ ತಂಪು ನೀಡುತ್ತವೆ. ಸುಸಜ್ಜಿತ ಕಟ್ಟಡ ಕಣ್ಮನ ಸೆಳೆಯುತ್ತದೆ. ಒಳಾಂಗಣ ಕ್ರೀಡಾಂಗಣ, ಜಿಮ್‌, ಪ್ರತ್ಯೇಕ ಗ್ರಂಥಾಲಯ ಹೀಗೆ... ಶೈಕ್ಷಣಿಕ ಸೌಲಭ್ಯಗಳು ಅನಾವರಣಗೊಳ್ಳುತ್ತವೆ.

1984ರಲ್ಲಿ ಸ್ಥಾಪನೆಯಾದಾಗ ಕವಿವಿ ಸಂಯೋಜನೆಗೆ ಒಳಪಟ್ಟಿತ್ತು. ಸದ್ಯ ರಾಣಿ ಚನ್ನಮ್ಮ ವಿ.ವಿ.ಯಲ್ಲಿ ಸಂಯೋಜನೆಯಲ್ಲಿದೆ. ಯುಜಿಸಿ ಅನುದಾನಕ್ಕೆ ಒಳಪಟ್ಟಿದ್ದು, ನ್ಯಾಕ್‌ನಿಂದ 3 ಬಾರಿ ಉತ್ತಮ ಶ್ರೇಣಿ ಗಿಟ್ಟಿಸಿಕೊಂಡಿದೆ. 36 ವರ್ಷಗಳಲ್ಲಿ 14 ರಾಂಕ್‌ಗಳನ್ನು ಗಿಟ್ಟಿಸಿಕೊಂಡಿದೆ. ಕಲಾ ಹಾಗೂ ವಾಣಿಜ್ಯ ವಿಭಾಗ ಹೊಂದಿದೆ. ಕಲಾ ವಿಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಅನುಕೂಲ ಆಗುವಂತೆ 9 ಐಚ್ಛಿಕ ವಿಷಯಗಳಿವೆ.

ಇಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಶಿಕ್ಷಕರು, ಉಪನ್ಯಾಸಕರು, ಪೊಲೀಸ್‌ ಅಧಿಕಾರಿಗಳು, ಸಿಎ, ಕೆಇಎಸ್‌, ಕೆಎಎಸ್‌, ಕಾರ್ಪೊರೇಟ್‌ ಕಂಪನಿ, ಬ್ಯಾಂಕ್‌ ವ್ಯವಸ್ಥಾಪಕ ಮೊದಲಾದ ಕೆಲಸದಲ್ಲಿದ್ದಾರೆ. ಸೇನೆಗೆ ನೂರಾರು ವಿದ್ಯಾರ್ಥಿಗಳು ಸೇರಿದ್ದು, ವಿದ್ಯಾರ್ಥಿನಿಯರೂ ಇದ್ದಾರೆ. ಪ್ರೇಮಾ ನಡಗಟ್ಟಿ 20 ವರ್ಷಗಳಿಂದ ಬೆಂಗಳೂರಿನಲ್ಲಿ ಸಾರಿಗೆ ಸಂಸ್ಥೆ ಬಸ್‌ ಚಾಲಕಿ ಆಗಿದ್ದಾರೆ.

ADVERTISEMENT

ಆರು ವರ್ಷಗಳ ಹಿಂದೆ ಅರಣ್ಯ ಇಲಾಖೆಯಿಂದ ನೆಟ್ಟಿರುವ 1,500 ಸಸಿಗಳು ಈಗ ಮರಗಳಾಗಿ ಪಕ್ಷಿಗಳಿಗೆ ಆಸರೆ ನೀಡಿವೆ.

ಕೈಮುಗಿದು ಒಳಗೆ ಬಾ: ವಿದ್ಯಾರ್ಥಿಗಳು ಪಾದರಕ್ಷೆ ಹೊರಬಿಟ್ಟು ಕೈಮುಗಿದು ಗ್ರಂಥಾಲಯದ ಒಳಗೆ ಬರುವುದು ವಿಶೇಷ. 30ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳು ಹಾಗೂ ನಿಯತಕಾಲಿಕೆಗಳ ರಾಶಿ ಇಲ್ಲಿದೆ. ‘ಬುಕ್‌ ಬ್ಯಾಂಕ್‌‘ ಯೋಜನೆಯಲ್ಲಿ ವಿದ್ಯಾರ್ಥಿಗೆ ಅವಶ್ಯವಿರುವ ಪುಸ್ತಕಗಳನ್ನು ಕೊಡಲಾಗುತ್ತಿದೆ. ಇದರೊಂದಿಗೆ ಈ ಕಾಲೇಜು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ‘ಶಿಕ್ಷಣ ಕಾಶಿ’ ಎನಿಸಿಕೊಂಡಿದೆ.

ಮೂರೂವರೆ ದಶಕದ ಹಿಂದಿನ ವಿಷಯವಾರು ಜರ್ನ್‌ಲ್‌ಗಳ ಪ್ರತಿಗಳು ಮತ್ತು ಹಳೆಯ ಪ್ರಶ್ನೆಪತ್ರಿಕೆಗಳ ಸಂಗ್ರಹವಿದೆ. ಪುಸ್ತಕ, ಹಳೆ ನಾಣ್ಯಗಳ ಪ್ರದರ್ಶನ, ಗ್ರಂಥಾಲಯ ಪರಿಚಯದಂತಹ ಉತ್ತಮ ರೂಢಿಗಳು ಇಲ್ಲಿವೆ. ಇ–ಲೈಬ್ರರಿ, ಇ–ಜರ್ನಲ್‌, ಇ–ಬುಕ್‌ ಸೌಲಭ್ಯವನ್ನು ಗ್ರಂಥಾಲಯ ಹೊಂದಿದೆ.

400 ಮೀ. ಓಟದ ಟ್ರ್ಯಾಂಕ್‌, ವಿವಿಧ ಆಟಗಳ ಅಂಕಣಗಳಲ್ಲಿವೆ. ಹೀಗಾಗಿ ಅಥ್ಲೆಟ್‌ದಿಂದ ಹಿಡಿದು ವಿವಿಧ ಟೂರ್ನಿಗಳಲ್ಲಿ ವಿಶ್ವವಿದ್ಯಾಲಯ, ಅಂತರ ವಿ.ವಿ., ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿದ್ದಾರೆ. ವಿವಿಧ ಕ್ರೀಡೆಗಳಲ್ಲಿ 95 ವಿದ್ಯಾರ್ಥಿಗಳು ವಿ.ವಿ. ಬ್ಲೂಗಳಾಗಿ ಹೊರಹೊಮ್ಮಿದ್ದಾರೆ. ಕ್ರೀಡೆಯಲ್ಲೂ ಮುಂದಿದ್ದಾರೆ.

‘ಯುಜಿಸಿ ಅನುದಾನದಲ್ಲಿ 100 ಕಂಪ್ಯೂಟರ್‌ಗಳ ಲ್ಯಾಬ್, ಭೂಗೋಳ ಹಾಗೂ ಭಾಷಾ ಲ್ಯಾಬ್‌ ಇವೆ. ಎನ್‌ಎಸ್‌ಎಸ್‌, ಸ್ಕೌಟ್ಸ್ ಘಟಕ, ವೃತ್ತಿ ಮಾರ್ಗದರ್ಶನ, ರೆಡ್‌ಕ್ರಾಸ್‌, ಇತಿಹಾಸ ಮತ್ತು ಪರಂಪರೆ ಕೂಟ, ಕನ್ನಡ ಸಂಘ, ಇಂಗ್ಲಿಷ್‌ ಸಂಘ, ಪರಿಸರ ವೇದಿಕೆ, ಚುನಾವಣಾ ಸಾಕ್ಷರತಾ ಕ್ಲಬ್‌ಗಳಿವೆ. ಅವುಗಳ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಜ್ಞಾನ ನೀಡಲಾಗುತ್ತಿದೆ’ ಎಂದು ಪ್ರಾಚಾರ್ಯ ಡಾ.ಆರ್.ಎ. ಶಾಸ್ತ್ರಿಮಠ ತಿಳಿಸಿದರು.

‘ಈಗ 818 ವಿದ್ಯಾರ್ಥಿಗಳ ಪ್ರವೇಶವಿದೆ. ಕೇಂದ್ರದ ಸ್ಕಿಲ್‌ ಇಂಡಿಯಾ ಯೋಜನೆಯಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ’ ಎಂದು ಅಧ್ಯಕ್ಷ ವಿಜಯಕುಮಾರ ಸೋನವಾಲಕರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.