ADVERTISEMENT

ಅಂಗವಿಕಲರಿಗೆ ಸ್ಥೈರ್ಯ ತುಂಬಬೇಕು: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 15:34 IST
Last Updated 13 ಸೆಪ್ಟೆಂಬರ್ 2021, 15:34 IST
ಬೆಳಗಾವಿಯಲ್ಲಿ ರೆಡ್‌ ಕ್ರಾಸ್ ಸಂಸ್ಥೆಯಿಂದ ಶ್ರವಣೋಪಕರಣಗಳ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೋಮವಾರ ಚಾಲನೆ ನೀಡಿದರು
ಬೆಳಗಾವಿಯಲ್ಲಿ ರೆಡ್‌ ಕ್ರಾಸ್ ಸಂಸ್ಥೆಯಿಂದ ಶ್ರವಣೋಪಕರಣಗಳ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೋಮವಾರ ಚಾಲನೆ ನೀಡಿದರು   

ಬೆಳಗಾವಿ: ‘ಅಂಗವಿಕಲರ ಬಗ್ಗೆ ಅನುಕಂಪ ತೋರದೆ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಲಹೆ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಮುಂಬೈನ ಅಲಿಯಾವರ್ ಜಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಡಿಸೆಬಿಲಿಟೀಸ್ ಸಹಯೋಗದಲ್ಲಿ ಇಲ್ಲಿನ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದ ವಾಕ್‌ ಮತ್ತು ಶ್ರವಣದೋಷವುಳ್ಳವರ ತ‍ಪಾಸಣೆ ಹಾಗೂ ಶ್ರವಣೋ‍ಪಕರಣಗಳ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಅಂಗವಿಕಲರು ಹಾಗೂ ವಿಶೇಷ ವ್ಯಕ್ತಿಗಳು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಅವರೂ ನಮ್ಮವರೆ. ಅವರಿಗೆ ಆತ್ಮವಿಶ್ವಾಸ ತುಂಬುವ ಕೆಸಲವನ್ನು ಎಲ್ಲರೂ ಮಾಡಬೇಕು. ಅವರಲ್ಲಿನ ಕೀಳರಿಮೆ ಹೋಗಲಾಡಿಸಬೇಕು. ಅವರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೊಡುಗೆ ಕೊಡಬೇಕು’ ಎಂದು ತಿಳಿಸಿದರು.

ADVERTISEMENT

‘ಅವರಿಗೆ ಅಗತ್ಯ ಸಲಕರಣೆಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು. ನ್ಯೂನತೆ ಉಳ್ಳವರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮುಂದೆ ಬರಬೇಕು. ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಮೊದಲ ದಿನವಾದ ಸೋಮವಾರ 76 ಮಂದಿಗೆ ಶ್ರವಣಯಂತ್ರಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ತಪಾಸಣೆ ನಡೆಸಿ, 300 ಮಂದಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಆಯೋಜಕರು ತಿಳಿಸಿದರು.

ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ವಿಕಾಸ ಕಲಘಟಗಿ, ಮುಂಬೈನ ಅಲಿಯಾವರ್ ಜಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಇಯರಿಂಗ್ ಡಿಸೆಬಿಲಿಟೀಸ್ ಮುಖ್ಯಸ್ಥ ಡಾ.ಎಸ್.ಪಿ. ಶರ್ಮಾ, ಅಂಗವಿಕಲರ ಕಲ್ಯಾಣ ಅಧಿಕಾರಿ ನಾಮದೇವ ಬಿಲ್ಕರ, ರೆಡ್‌ಕ್ರಾಸ್‌ನ ಕಾರ್ಯಕಾರಿಣಿ ಸದಸ್ಯರಾದ ವಿನೋದಿನಿ ಶರ್ಮಾ, ಪ್ರಿಯಾ ಪುರಾಣಿಕ, ಪ್ರೊ.ಎಸ್.ಎನ್. ಮೂಲಿಮನಿ, ಪ್ರಾಂಶುಪಾಲೆ ಅನಿತಾ ಗಾವಡೆ ಪಾಲ್ಗೊಂಡಿದ್ದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಿ.ಎನ್. ಮಿಸಾಳೆ ಸ್ವಾಗತಿಸಿದರು. ಡಾ.ವಿ.ಡಿ. ಡಾಂಗಿ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.