ADVERTISEMENT

ಶಿಕ್ಷಕರ ನಡಿಗೆ ಅಂಗವಿಕಲರ ಮನೆಗೆ

ಮೂಡಲಗಿಯಲ್ಲಿ ಶಿಕ್ಷಕರ ದಿನ ವಿಶೇಷವಾಗಿ ಆಚರಣೆ

ಬಾಲಶೇಖರ ಬಂದಿ
Published 11 ಸೆಪ್ಟೆಂಬರ್ 2021, 14:09 IST
Last Updated 11 ಸೆಪ್ಟೆಂಬರ್ 2021, 14:09 IST
ಮೂಡಲಗಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ವಿಶೇಷ ಮಗುವಿನ ಮನೆಗೆ ಭೇಟಿ ನೀಡಿದರು
ಮೂಡಲಗಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ವಿಶೇಷ ಮಗುವಿನ ಮನೆಗೆ ಭೇಟಿ ನೀಡಿದರು   

ಮೂಡಲಗಿ: ಇಲ್ಲಿನ ಶಿಕ್ಷಕರು ಐದು ದಿನಗಳವರೆಗೆ ಅಂಗವಿಕಲ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಅವರಲ್ಲಿ ಶೈಕ್ಷಣಿಕ ಚೈತನ್ಯವನ್ನು ತುಂಬುವ ಮೂಲಕ ಶಿಕ್ಷಕರ ದಿನವನ್ನು ಈ ಬಾರಿ ಅರ್ಥಪೂರ್ಣ ಮತ್ತು ವಿಶೇಷವಾಗಿ ಆಚರಿಸಿದ್ದು ಗಮನಸೆಳೆಯಿತು.

ಶಿಕ್ಷಕರ ದಿನಾಚರಣೆಗೆ ಐದು ದಿನಗಳು ಬಾಕಿ ಇರುವಾಗಲೇ ಕಾರ್ಯಕ್ರಮ ಆರಂಭಿಸಲಾಯಿತು.

ಅಂಗವಿಕಲರು ನಿರ್ಲಕ್ಷ್ಯಕ್ಕೆ ಒಳಗಾಗಬಾರದು. ಎಲ್ಲ ಮಕ್ಕಳಂತೆ ಅಕ್ಷರ ಕಲಿತು ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಬೆಳೆಯಬೇಕು ಎನ್ನುವುದು ಇಲಾಖೆಯ ಉದ್ದೇಶ ಸಾಕಾರಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಅವರು ರೂಪಿಸಿರುವ ‘ಗುರುಗಳ ನಡಿಗೆ ಅಂಗವಿಕಲ ಮಕ್ಕಳ ಮನೆಯ ಕಡೆಗೆ’ ಅಭಿಯಾನಕ್ಕೆ ವಲಯದ ಶಿಕ್ಷಕರು ಕೈಜೋಡಿಸಿ ಯಶಸ್ವಿಗೊಳಿಸಿದ್ದಾರೆ.

ADVERTISEMENT

ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಸರ್ಕಾರಿ ಶಾಲೆಗಳು, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಸೇರಿ ಒಟ್ಟು 419 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಆಯಾ ಶಾಲಾ ವ್ಯಾಪ್ತಿಯಲ್ಲಿರುವ ಅಂಗವಿಕಲ ಮಕ್ಕಳನ್ನು ಗುರುತಿಸಿ ಅವರ ಮನೆಗಳಿಗೆ ಶಿಕ್ಷಕರು ಖುದ್ದು ಭೇಟಿ ನೀಡಿದ್ದಾರೆ. ‘ಅಂಗವಿಕಲ ಮಗು ಶಾಲೆಯ ದಾಖಲಾತಿಗೆ ಸೀಮಿತವಾಗಿರುತ್ತಿತ್ತು. ಈಗ ಮನೆಗೆ ಭೇಟಿ ನೀಡಿದ್ದರಿಂದ ಮಗುವಿನ ನಿಜಸ್ಥಿತಿ ತಿಳಿಯುವಂತಾಗಿದೆ’ ಎಂದು ಶಿಕ್ಷಕ ಶಿವಾನಂದ ಸೋಮವ್ವಗೋಳ ತಿಳಿಸಿದರು.

ಶಿಕ್ಷಕರು, ಆ ಮಕ್ಕಳ ಬಳಲುವ ಶಾರೀರಿಕ ನ್ಯೂನ್ಯತೆ, ಈಗಾಗಲೇ ಅದಕ್ಕೆ ಮಾಡಿರುವ ಉಪಚಾರ, ಆಗಿರುವ ಪ್ರಗತಿ, ಶೈಕ್ಷಣಿಕ ಸೌಲಭ್ಯಗಳು, ಮನೆಯ ಪರಿಸರ, ಪಾಲಕರ ಆರ್ಥಿಕ ಪರಿಸ್ಥಿತಿ ಹೀಗೆ ಹತ್ತು ಹಲವಾರು ರೀತಿಯ ಪ್ರಶ್ನಾವಳಿಯ ಸಮೀಕ್ಷೆಯನ್ನು ಮಾಡಿಕೊಂಡು ವರದಿ ಸಿದ್ದಪಡಿಸಿದ್ದಾರೆ.

‘ಐದು ದಿನಗಳ ಅಭಿಯಾನದಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ಒಟ್ಟು 722 ಅಂಗವಿಕಲ ಮಕ್ಕಳ ಮನೆಗಳಿಗೆ ಅಲ್ಲಿರುವ ಶಿಕ್ಷಕರು ಭೇಟಿ ನೀಡಿದ್ದಾರೆ. ಮಕ್ಕಳ ಯೋಗಕ್ಷೇಮ ವಿಚಾರಿಸಿ ಪಾಲಕರಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿಕ್ಷಕರು ಮನೆಗಳಿಗೆ ಭೇಟಿ ನೀಡಿದ್ದರಿಂದಾಗಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪಾಲಕರು ಮನಸ್ಸು ಮಾಡುತ್ತಿದ್ದಾರೆ. ಮಗುವಿನ ವಾಸ್ತವ ತಿಳಿದು ಸಾಹಾಯಕ್ಕೆ ನಿಲ್ಲುವ ಮನೋಭಾವ ಶಿಕ್ಷಕರಲ್ಲೂ ಬಂದಿದೆ’ ಎನ್ನುತ್ತಾರೆ ಅವರು.

ಅಂಗವಿಕಲರಿಗೆ ಸರ್ಕಾರದಿಂದ ದೊರೆಯಬೇಕಾದ ಮಾಸಾಶನ, ಶಿಷ್ಯವೇತನ, ಬಸ್‌ಪಾಸ್, ವೈದ್ಯಕೀಯ ಪ್ರಮಾಣಪತ್ರ, ಶ್ರವಣ ಯಂತ್ರ, ಗಾಲಿ‌ ಕುರ್ಚಿಗಳಂತಹ ಅವಶ್ಯವಿರುವ ಸಾಧನ ಸಲಕರಣೆಗಳ ಲಭ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳನ್ನು ದೊರಕಿಸಿಕೊಡಲು ಯೋಜನೆ ಮಾಡಿರುವುದು ವಿಶೇಷವಾಗಿದೆ.

‘ನಮ್ಮ ಮನೆಗೆ ಶಿಕ್ಷಕರು ಬಂದು ಮಗ ಸಂದೇಶನ ಯೋಗಕ್ಷೇಮ ವಿಚಾರಿಸಿ ಕಾಳಜಿ ಮಾಡಿದ್ದರಿಂದ ನನಗ ಧೈರ್ಯ ಬಂದಿದೆ’ ಎಂದು ಬಸವರಾಜ ಅಥಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.