ADVERTISEMENT

ದೂದ್‌ ಸಾಗರ ಬಳಿ ರೈಲು ಅಪಘಾತ ತಪ್ಪಿಸಿದ ಯುವಕರು!

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 13:54 IST
Last Updated 8 ಸೆಪ್ಟೆಂಬರ್ 2021, 13:54 IST
ಕ್ಯಾಸಲ್‌ರಾಕ್‌ ಬಳಿ ಹಳಿಯ ಮೇಲೆ ಬಿದ್ದಿದ್ದ ಮರ ತೆರವು ಕಾರ್ಯದಲ್ಲಿ ಪ್ರವಾಸಿಗರು ಹಾಗೂ ರೈಲ್ವೆ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದಾರೆ
ಕ್ಯಾಸಲ್‌ರಾಕ್‌ ಬಳಿ ಹಳಿಯ ಮೇಲೆ ಬಿದ್ದಿದ್ದ ಮರ ತೆರವು ಕಾರ್ಯದಲ್ಲಿ ಪ್ರವಾಸಿಗರು ಹಾಗೂ ರೈಲ್ವೆ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದಾರೆ   

ಬೆಳಗಾವಿ: ಕ್ಯಾಸಲ್‌ರಾಕ್‌ ಬಳಿ ಹಳಿಯ ಮೇಲೆ ಮರ ಬಿದ್ದಿದ್ದರಿಂದ ಉಂಟಾಗಬಹುದಾಗಿದ್ದ ಅಪಘಾತವನ್ನು ಅಲ್ಲಿಗೆ ಪ್ರವಾಸಕ್ಕೆ ತೆರಳಿದ್ದ ಯುವಕರ ತಂಡ ತಪ್ಪಿಸಿದ ಘಟನೆ ಸೋಮವಾರ ನಡೆದಿದೆ. ಈ ವಿಷಯ ಬುಧವಾರ ಗೊತ್ತಾಗಿದೆ.

ದೂಧ್‌ಸಾಗರ ಜಲಪಾತ ವೀಕ್ಷಣೆಗೆ ತೆರಳಿದ್ದ ಬೆಂಗಳೂರಿನಿಂದ ಆರು ಮಂದಿ ಯುವಕರು, ಮರಳುವುದಕ್ಕಾಗಿ ರೈಲು ಹಿಡಿಯುವುದಕ್ಕಾಗಿ ನಿಲ್ದಾಣದತ್ತ ಹಳಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಗುಡ್ಡದ ಮೇಲಿದ್ದ ದೊಡ್ಡ ಮರವೊಂದು ಹಳಿ ಮೇಲೆ ಉರುಳಿಬಿದ್ದಿತು. ಇದನ್ನು ಗಮನಿಸಿದ ಯುವಕರು, ಅದೇ ಸಮಯಕ್ಕೆ ಕೊಂಚ ದೂರದಲ್ಲಿ ಬರುತ್ತಿದ್ದ ರೈಲಿಗೆ ಕೆಂಪು ಅಂಗಿ, ಪ್ಲಾಸ್ಟಿಕ್‌ ಮೊದಲಾದವುಗಳನ್ನು ತೋರಿಸಿದರು. ಇದನ್ನು ಗಮನಿಸಿದ ಚಾಲಕ ಬ್ರೇಕ್‌ ಹಾಕಿದ್ದರಿಂದ ರೈಲು ಮರಕ್ಕೆ ಸಮೀಪವೇ ಬಂದು ನಿಂತಿಕೊಂಡಿದೆ. ಆ ಯುವಕರ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅಪಘಾತವೊಂದು ತಪ್ಪಿತು. ಆ ರೈಲು ಸರಕು ಸಾಗಣೆಯದ್ದಾಗಿತ್ತು.

ಈ ವಿಷಯವನ್ನು ಪ್ರವಾಸಿಗ ಬೆಂಗಳೂರಿನ ಟಿ.ಕೆ. ಗೌರವ್ ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

ADVERTISEMENT

‘ಅಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆಯಿತು. ಮಳೆಯೂ ಕೂಡ ಇತ್ತು. ಜೋರಾಗಿ ಶಬ್ದ ಬಂತು. ಸಮೀಪ ಹೋಗಿ ನೋಡಿದರೆ ಮರ ಉರುಳಿತ್ತು. ಅದನ್ನು ಸರಿಸಲೆಂದು ಪ್ರಯತ್ನಪಟ್ಟೆವು. ಆದರೆ, ದೊಡ್ಡದಾಗಿದ್ದರಿಂದ ಸಾಧ್ಯವಾಗಲಿಲ್ಲ. ಕೊಂಚ ದೂರದಲ್ಲಿದ್ದ ಟ್ರ್ಯಾಕ್‌ಮನ್‌ಗೆ ವಿಷಯ ತಿಳಿಸಿದೆವು. ಅವರ ಬಳಿ ಇದ್ದ ಮಚ್ಚಿನಿಂದ ಮರ ಕಡಿಯಲು ಪ್ರಾರಂಭಿಸಿದ್ದೆವು. ಈ ನಡುವೆ, ರೈಲಿನವರು ನಿಲ್ದಾಣದವರಿಗೆ ಮಾಹಿತಿ ಕೊಟ್ಟಿದ್ದರು. ಇಲಾಖೆಯ ಸಿಬ್ಬಂದಿ ಹಾಗೂ ನಾವೆಲ್ಲರೂ ಸೇರಿ ಮರವನ್ನು ಕತ್ತರಿಸಿ ಬದಿಗೆ ಸರಿಸಿದೆವು. ಒಂದೂವರೆ ತಾಸು ತಡವಾಗಿ ಅಲ್ಲಿಂದ ರೈಲು ಹೊರಟಿತು. ನಮ್ಮನ್ನೂ ನಿಲ್ದಾಣಕ್ಕೆ ಬಿಟ್ಟು ರೈಲಿನವರು ಸಹಾಯ ಮಾಡಿದರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.