ADVERTISEMENT

ವಿಷ ಮುಕ್ತ ಆಹಾರ ಉತ್ಪಾದನೆ ಆದ್ಯತೆಯಾಗಲಿ

ಸಾವಯವ ಕೃಷಿ ತರಬೇತಿಯಲ್ಲಿ ಡಾ.ಎಸ್.ಎಸ್. ಹಿರೇಮಠ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 16:37 IST
Last Updated 9 ಸೆಪ್ಟೆಂಬರ್ 2021, 16:37 IST
ಬೈಲಹೊಂಗಲ ತಾಲ್ಲೂಕಿನ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಸಾವಯವ ಕೃಷಿ ತರಬೇತಿ ಕಾರ್ಯಕ್ರಮವನ್ನು ರೈತರು ಉದ್ಘಾಟಿಸಿದರು
ಬೈಲಹೊಂಗಲ ತಾಲ್ಲೂಕಿನ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಸಾವಯವ ಕೃಷಿ ತರಬೇತಿ ಕಾರ್ಯಕ್ರಮವನ್ನು ರೈತರು ಉದ್ಘಾಟಿಸಿದರು   

ಬೆಳಗಾವಿ: ‘ವಿಷ ಮುಕ್ತ ಆಹಾರ ಉತ್ಪಾದನೆ ರೈತರ ಆದ್ಯತೆಯಾಗಬೇಕು’ ಎಂದು ಸಂಪನ್ಮೂಲ ವ್ಯಕ್ತಿ ಡಾ.ಎಸ್.ಎಸ್. ಹಿರೇಮಠ ಆಶಯ ವ್ಯಕ್ತಪಡಿಸಿದರು.

ಬಾಚಿ–ರಾಯಚೂರು ರಸ್ತೆಯಲ್ಲಿರುವ ಬೈಲಹೊಂಗಲ ತಾಲ್ಲೂಕಿನ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಸಾವಯವ ಕೃಷಿ ತರಬೇತಿ, ಸಾವಯವ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕ ಕೃಷಿಯಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಹಾಗೂ ಕೀಟನಾಶಕಗಳ ಅಸಮತೋಲನ ಬಳಕೆ ಜಾಸ್ತಿಯಾಗಿದೆ. ಇದರಿಂದ ಶೇ 21ರಷ್ಟು ಆಹಾರ ಪದಾರ್ಥಗಳು ಕಲುಷಿತಗೊಂಡಿರುತ್ತವೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರ ಸಾವಯವ ಕೃಷಿ ನೀತಿಯನ್ನು 2004ರಲ್ಲಿ ಜಾರಿಗೆ ತಂದಿದೆ. ಸಾವಯವ ಕೃಷಿ ಸುಧಾರಣೆಗೆ ಒತ್ತು ನೀಡಲಾಗಿದೆ. ಈ ಪದ್ಧತಿಯಿಂದ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಅನುಕೂಲಗಳಿವೆ. ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ಉತ್ಪಾದನೆ ಮಾಡಬಹುದಾಗಿದೆ. ಆರ್ಥಿಕ ಭದ್ರತೆ ಒದಗಿಸುವ, ಜೈವಿಕ ವೈವಿಧ್ಯ ಹೆಚ್ಚಿಸುವ ಕ್ರಮವೂ ಇದಾಗಿದೆ. ನೈಸರ್ಗಿಕ ಹಾಗೂ ಜೈವಿಕ ವಿಧಾನಗಳಿಂದ ಪೀಡೆ ನಿರ್ವಹಣೆ ಕೈಗೊಂಡು ಭೂಮಿ, ನೀರು, ಗಾಳಿ ಹಾಗೂ ಸಸ್ಯ ಸಂಕುಲ ಸಂಪತ್ತನ್ನು ರಕ್ಷಿಸಿ ಪರಿಸರ ಸಮತೋಲನ ಕಾಪಾಡುವ ಕಡಿಮೆ ಖರ್ಚಿನ ಸುಸ್ಥಿರ ಕೃಷಿ ಪದ್ಧತಿಯಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಬೈಲಹೊಂಗಲದ ವಕೀಲ ವಿಜಯಕುಮಾರ ಆರ್. ಪತ್ತಾರ, ‘ಪ್ರತಿ ಭಾನುವಾರ ಬೈಲಹೊಂಗಲ ತಾಲ್ಲೂಕಿನ ಗ್ರಾಹಕರಿಗೆ ಸಾವಯವ ಆಹಾರ ಪದಾರ್ಥಗಳನ್ನು ಲಭ್ಯವಾಗುವಂತೆ ಮಾಡುವ ಗುರಿಯನ್ನು ಸಾವಯವ ಸಂತೆ ಮೂಲಕ ಮಾಡಲಾಗುತ್ತಿದೆ’ ಎಂದರು.

ಪ್ರಗತಿಪರ ಕೃಷಿಕ ಬಾಬುರಾವ್ ಬಿ. ಪಾಟೀಲ, ‘ಸಾವಯವ ಕೃಷಿಗೆ ರಾಜ್ಯ ಸರ್ಕಾರ ಬಹಳಷ್ಟು ಒತ್ತು ಕೊಟ್ಟಿದೆ. ಆದರೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮುಂದುವರಿಸದೆ ಇರುವುದು ಕಳವಳಕಾರಿಯಾಗಿದೆ. ಸುಸ್ಥಿರ ಕೃಷಿಗಾಗಿ ನೈಸರ್ಗಿಕ ಕೃಷಿ ಅನುಕೂಲವಾಗಿದೆ’ ಎಂದು ತಿಳಿಸಿದರು.

‘ಸಾವಯವ ಪದ್ಧತಿಯಲ್ಲಿ ಮಣ್ಣು ಫಲವತ್ತತೆ ನಿರ್ವಹಣೆ’ ಕುರಿತು ಮಾತನಾಡಿದ ವಿಜ್ಞಾನಿ ಎಸ್.ಎಂ. ವಾರದ, ‘ಹೇರಳವಾಗಿ ಕೊಟ್ಟಿಗೆ ಗೊಬ್ಬರ ಬಳಸಬೇಕು. ಕೃಷಿ ತ್ಯಾಜ್ಯವನ್ನು ಎರೆಹುಳು ಗೊಬ್ಬರವಾಗಿ ತಯಾರಿಸಿ ಉಪಯೋಗಿಸಬೇಕು. ಮಣ್ಣಿನ ಭೌತಿಕ ಹಾಗೂ ಜೈವಿಕ ಗುಣ ಧರ್ಮ ಉತ್ತಮಗೊಳಿಸುವುದರಿಂದ ಬೆಳೆಗೆ ಬೇಕಾದ ಪೋಷಕಾಂಶಗಳ ಲಭ್ಯತೆ ಹೆಚ್ಚುತ್ತದೆ ಹಾಗೂ ಫಲವತ್ತತೆಯನ್ನು ಕಾಪಾಡಬಹುದು’ ಎಂದು ಸಲಹೆ ನೀಡಿದರು.

ವಿಜ್ಞಾನಿ ಜಿ.ಬಿ. ವಿಶ್ವನಾಥ ಅವರು ‘ಸಾವಯವ ಕೃಷಿಯಲ್ಲಿ ಕಳೆಗಳ ನಿರ್ವಹಣೆ ಹಾಗೂ ಬೆಳೆಗಳಲ್ಲಿ ನೀರು ನಿರ್ವಹಣೆ’ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.