ADVERTISEMENT

ರಾಮದುರ್ಗ: ಇಂದಿನಿಂದ ವೆಂಕಟೇಶ್ವರ ಜಾತ್ರೆ ವೈಭವ

ಚನ್ನಪ್ಪ ಮಾದರ
Published 21 ಮಾರ್ಚ್ 2023, 23:45 IST
Last Updated 21 ಮಾರ್ಚ್ 2023, 23:45 IST
ರಾಮದುರ್ಗದ ವೆಂಕಟೇಶ್ವರ ದೇವಸ್ಥಾನ
ರಾಮದುರ್ಗದ ವೆಂಕಟೇಶ್ವರ ದೇವಸ್ಥಾನ   

ರಾಮದುರ್ಗ: ಪುಣೆಯ ಪೇಶ್ವೆಗಳ (ಮರಾಠಿಗರ) ಆಡಳಿತದಲ್ಲಿ ಪಟ್ಟಣದಲ್ಲಿ ನಿರ್ಮಿಸಿದ, ವೆಂಕಟೇಶ್ವರ ದೇವಸ್ಥಾನದ ಜಾತ್ರೆ ಮಾರ್ಚ್‌ 22ರಿಂದ ಏಪ್ರಿಲ್‌ 31ರವರೆಗೆ ನಡೆಯಲಿದೆ. ಗಡಿ ಭಾಗದಲ್ಲಿ ಕನ್ನಡ– ಮರಾಠಿ ಸಂಸ್ಕೃತಿಗಳ ಸಂಗಮವಾಗಿ ಈ ಉತ್ಸವ ಬೆಳೆದುಬಂದಿದೆ.

ರಾಮದುರ್ಗ ಸಂಸ್ಥಾನವು ಪುಣೆಯ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟಿತ್ತು. ನರಗುಂದ ಮತ್ತು ರಾಮದುರ್ಗದ ಸಂಸ್ಥಾನಗಳ ಉಭಯ ಸಹೋದರರ ಆಡಳಿತ ವಿಭಜನೆಯಾದ ನಂತರ ರಾಮದುರ್ಗದ ಕೊನೆಯ ಅರಸು ರಾಮ್‌ರಾವ್‌ ಭಾವೆ ಇಲ್ಲಿನ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಿ ಜಾತ್ರೆ ನಡೆಸಿಕೊಂಡು ಬಂದರು. ರಾಮನವಮಿ ಮರುದಿನ ಸಹಸ್ರಾರು ಜನರು ಶ್ರದ್ಧಾ ಭಕ್ತಿಯಿಂದ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವರು.

ರಥೋತ್ಸವ ವೈಭವ: ಕೊನೆಯ ದಿನ ಏ.31ರಂದು ಬೆಳಿಗ್ಗೆ 9.30ಕ್ಕೆ ಮಹಾರಥೋತ್ಸವ ನಡೆಯಲಿದೆ. ವೆಂಕಟೇಶ್ವರ ದೇವಸ್ಥಾನದಿಂದ ಹನುಮಂತ ದೇವರ ಗುಡಿಯ ತನಕ ತಂದು ನಿಲ್ಲಿಸಿದ ನಂತರ, ರಥವನ್ನು ಇಳಿಜಾರಿನಲ್ಲಿಯೇ ಒಂದೂವರೆ ಗಂಟೆಗಳ ಕಾಲ ಸನ್ನೆಗೋಲುಗಳ ಮೂಲಕ ಪೂರ್ಣ ಪ್ರಮಾಣದಲ್ಲಿ ತಿರುಗಿಸುವುದು ವಿಶೇಷ. ಈ ಪ್ರಯತ್ನದಲ್ಲಿ ಪಟ್ಟಣದ ಭೋವಿ ಜನಾಂಗದವರು ಬಹುದಿನಗಳ ಸೇವೆ ಮಾಡುತ್ತ ಬಂದಿದ್ದಾರೆ.

ADVERTISEMENT

ಜನರಿಂದಲೂ ಜಾತ್ರೆಯ ಸಿದ್ದತೆಗಳು ಭರದಿಂದ ನಡೆದಿವೆ. ಮನೆಗಳನ್ನು ಅಲಂಕರಿಸಿ, ಬಂಧು ಮಿತ್ರರಿಗೆ ಆಹ್ವಾನ ನೀಡಲಾಗಿದೆ.

ಮಾರ್ಚ್‌ 22ರಿಂದ 30ರವರೆಗೆ ವಾಹನೋತ್ಸವ ನೆರವೇರುವುದು. ಬುಧವಾರ ಪುಷ್ಪವಾಹನ, ಗುರುವಾರ ಗಜವಾಹನ, ಶುಕ್ರವಾರ ಅಶ್ವವಾಹನ, ಶನಿವಾರ ಚಂದ್ರವಾಹನ, ಭಾನುವಾರ ಸೂರ್ಯ ವಾಹನ, ಸೋಮವಾರ ನವಿಲು ವಾಹನ, ಮಂಗಳವಾರ ಸಿಂಹ ವಾಹನ, ಬುಧವಾರ ಹನುಮ ವಾಹನ, ಗುರುವಾರ ಗರುಡ ವಾಹನೋತ್ಸವ ಪ್ರತಿ ರಾತ್ರಿ 9ಕ್ಕೆ ಜರುಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.