ADVERTISEMENT

ಹರಪನಹಳ್ಳಿ: ಹಿಂದುಳಿದ ತಾಲ್ಲೂಕಿನಲ್ಲಿ 30 ಏಕೋಪಾಧ್ಯಾಯ ಶಾಲೆ

672 ಶಿಕ್ಷಕರ ಹುದ್ದೆ ಖಾಲಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 1:09 IST
Last Updated 23 ಜನವರಿ 2021, 1:09 IST
   

ಹರಪನಹಳ್ಳಿ: ಡಾ.ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿರುವ ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆಯಾದ ಬಳಿಕ, ಶಿಕ್ಷಣ ಇಲಾಖೆ ಅಭಿಮತ ವರ್ಗಾವಣೆ ಪ್ರಕ್ರಿಯೆ ಪೂರೈಸಿದ ಪರಿಣಾಮವಾಗಿ ಈಗ ಇಲಾಖೆಯಲ್ಲಿ ಬರೋಬ್ಬರಿ 655 ಶಿಕ್ಷಕರದ್ದೂ ಒಳಗೊಂಡು ಒಟ್ಟು 672 ಹುದ್ದೆಗಳು ಖಾಲಿಯಾಗಿವೆ. ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ಏಕಕಾಲಕ್ಕೆ 600 ಶಿಕ್ಷಕರು ಕಲಬುರ್ಗಿ ಹೊರತುಪಡಿಸಿ ಇತರ ವಿಭಾಗಗಳಿಗೆ ವರ್ಗಾವಣೆ ಪಡೆದಿದ್ದಾರೆ. 30 ಗ್ರಾಮಗಳ 30 ಸರ್ಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿ ಮಾರ್ಪಟ್ಟಿವೆ. ಈ ಪೈಕಿ 13 ಶಾಲೆಗಳು ಶಿಕ್ಷಕರಿಲ್ಲದ ಶೂನ್ಯ ಶಿಕ್ಷಕ ಶಾಲೆಗಳಾಗಿದ್ದವು. ಇಲಾಖೆಯ ಅಧಿಕಾರಿಗಳು ಶಿಕ್ಷಕ-ವಿದ್ಯಾರ್ಥಿ ಅನುಪಾತ ಸರಿದೂಗಿಸಲು ಬೇರೆ ಬೇರೆ ಶಾಲೆಗಳ ಶಿಕ್ಷಕರನ್ನು ಮನವೊಲಿಸಿ, ತಲಾ ಒಬ್ಬರನ್ನು ನಿಯೋಜಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ತಾಲ್ಲೂಕಿನಲ್ಲಿ ಬೋಧಕೇತರ ಸಿಬ್ಬಂದಿ 14 ಹುದ್ದೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ 3 ಹುದ್ದೆಗಳು ಖಾಲಿ ಉಳಿದಿವೆ.

ಒಬ್ಬರೇ ಶಿಕ್ಷಕರು ಇರುವ ಶಾಲೆಗಳಲ್ಲಿ ತರಗತಿ ನಡೆಸುವುದು, ಇಲಾಖೆಯ ಸಭೆಗಳಿಗೆ ಹಾಜರಾಗುವುದು ತೊಂದರೆ ಆಗಿದೆ. ಇನ್ನು ಮುಂದಿನ ತಿಂಗಳು ಶಾಲೆಯ ಎಲ್ಲ ತರಗತಿಗಳು ಮತ್ತು ಬಿಸಿಯೂಟ ಯೋಜನೆಗೆ ಚಾಲನೆ ನೀಡಿದರೆ, ಶಿಕ್ಷಕರು ತೀವ್ರ ತೊಂದರೆಗೆ ಗುರಿಯಾಗುತ್ತಾರೆ.

ADVERTISEMENT

30 ಏಕೋಪಾಧ್ಯಾಯ ಶಾಲೆಗಳು: ತಾಲ್ಲೂಕಿನಲ್ಲಿ 24 ಕ್ಲಸ್ಟರ್‌ಗಳಿವೆ. ಶ್ರೀಕಂಠಾಪುರ, ಬಸವನಾಳು, ವಿ. ಕೊರಚರಹಟ್ಟಿ, ದಿದ್ಗಿತಾಂಡಾ, ನರೆಬೊಮ್ಮನಹಳ್ಳಿ, ಕೆಂಚಾಪುರ, ಉಚ್ಚಂಗಿದುರ್ಗ ಶಿಖರ, ಪುಣಬಗಟ್ಟಿ, ಅಣಿಮೇಗಳತಾಂಡಾ, ನಾಗಲಾಪುರ ತಾಂಡಾ, ಮಾದಿಹಳ್ಳಿ, ಅರಸೀಕೆರೆ, ಹನುಮಗೊಂಡನಹಳ್ಳಿ ಒಟ್ಟು 13 ಶಾಲೆಗಳಿಗೆ ಒಬ್ಬೊಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಕೆ.ಬಸಾಪುರ, ಪಾವನಪುರ, ಜೋಷಿಲಿಂಗಾಪುರ, ನಾಗಲಾಪುರ, ಚೌಡಾಪುರ, ಬಸಾಪುರ, ಯರಬಳ್ಳಿ ತಾಂಡಾ, ಎ. ತಿಮ್ಲಾಪುರ, ಪುಣಬಗಟ್ಟಿ ತಾಂಡಾ, ಗಿಡ್ಡ ನಾಗೇನಹಳ್ಳಿ, ರೇಣುಕಾ ಬಡಾವಣೆ, ಉಚ್ಚಂಗಿದುರ್ಗ ಕೋಟೆ, ಭಿಮ್ಲಾ ತಾಂಡಾ, ಅರಸಾಪುರ, ಕುಂಚೂರು ಕೆರೆತಾಂಡ, ಅಡವಿಹಳ್ಳಿ, ಹಗರಿ ಶೀನರಹಳ್ಳಿ, ನಾಗರಕೊಂಡ, ಮಾಡ್ಲಗೇರೆ ತಾಂಡಾ, ಮಾಡ್ಲಗೇರೆ, ಮೀನಹಳ್ಳಿ ತಾಂಡಾ, ಕರೆಕಾನಹಳ್ಳಿ, ಗಡಿಗುಡಾಳು, ಕುರೇಮಾಗನಹಳ್ಳಿ, ಕರಡಿದುರ್ಗ, ರಾಮಘಟ್ಟ ತಾಂಡಾ, ವ್ಯಾಸನತಾಂಡಾ, ಎಂ. ಕೊರಚರಹಟ್ಟಿ, ಮಾಚಿಹಳ್ಳಿ, ನಾಗತಿಕಟ್ಟೆ ತಾಂಡಾ ಸೇರಿ ಒಟ್ಟು 30 ಗ್ರಾಮಗಳಲ್ಲಿ ಏಕೋಪಾಧ್ಯಾಯ ಶಾಲೆಗಳಾಗಿವೆ.

ಹರಪನಹಳ್ಳಿಗೆ ಆದ್ಯತೆ ನೀಡಲಾಗುವುದು
ಪರಸ್ಪರ ಒಪ್ಪಿಗೆ ಪಡೆದು ನಡೆದ ವರ್ಗಾವಣೆಯಲ್ಲಿ ಏಕಕಾಲಕ್ಕೆ ಹೆಚ್ಚಿನ ಶಿಕ್ಷಕರು ದಾವಣಗೆರೆ ಜಿಲ್ಲೆಗೆ ವರ್ಗವಾಗಿದ್ದಾರೆ. ಈಗ ಬಳ್ಳಾರಿ ಜಿಲ್ಲೆಗೆ 1,350 ಪ್ರಾಥಮಿಕ ಶಾಲೆ, 350 ಪ್ರೌಢಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಪ್ರಸ್ತಾವ ಸಲ್ಲಿಸಿದ್ದು, ಶೀಘ್ರ ಮಂಜೂರಾಗುವ ನಿರೀಕ್ಷೆಯಿದ್ದು, ಹರಪನಹಳ್ಳಿಗೆ ಆದ್ಯತೆ ನೀಡಲಾಗುವುದು.
–ರಾಮಪ್ಪ, ಶಿಕ್ಷಣ ಇಲಾಖೆ ಉಪನಿರ್ದೇಶಕ, ಬಳ್ಳಾರಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.