ADVERTISEMENT

ಬಳ್ಳಾರಿಯಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ

ರಾಜ್ಯದಲ್ಲಿಯೇ ನೂರರ ಗಡಿ ದಾಟಿದ ಮೊದಲ ಜಿಲ್ಲೆ ಇದು.

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 8:43 IST
Last Updated 6 ಜೂನ್ 2021, 8:43 IST
   

ಹೊಸಪೇಟೆ (ವಿಜಯನಗರ): ಬಳ್ಳಾರಿಯಲ್ಲಿ ಭಾನುವಾರ ಪ್ರತಿ ಲೀಟರ್ ಪೆಟ್ರೋಲ್ ದರ ಶತಕದ ಗಡಿ ದಾಟಿದರೆ, ವಿಜಯನಗರ ಜಿಲ್ಲೆಯಲ್ಲಿ ನೂರರ ಸನಿಹಕ್ಕೆ ಬಂದಿದೆ. ಅಂದಹಾಗೆ, ರಾಜ್ಯದಲ್ಲಿಯೇ ನೂರರ ಗಡಿ ದಾಟಿದ ಮೊದಲ ಜಿಲ್ಲೆ ಬಳ್ಳಾರಿಯಾಗಿದೆ.

ಬಳ್ಳಾರಿಯಲ್ಲಿ ಭಾನುವಾರ ಪ್ರತಿ ಲೀಟರ್ ಪೆಟ್ರೋಲ್ ದರ 100.08 ಪೈಸೆಗೆ ಏರಿಕೆ ಕಂಡರೆ, ವಿಜಯನಗರ ಜಿಲ್ಲೆಯಲ್ಲಿ ₹ 99.45ಕ್ಕೆ ಹೆಚ್ಚಾಗಿದೆ. ಅವಳಿ ಜಿಲ್ಲೆಗಳಲ್ಲಿ ಹೋದ ವಾರ ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ಪ್ರತಿ ಲೀಟರ್ ಗೆ ₹ 98.33 ಇತ್ತು. ಸತತ ನಾಲ್ಕು ವಾರಗಳಿಂದ ಏರಿಕೆಯ ಹಾದಿಯಲ್ಲಿದ್ದ ತೈಲ ದರ ಈ ವಾರ ನೂರರ ಗಡಿ ದಾಟಿ ಹೊಸ ದಾಖಲೆ ಬರೆದಿದೆ. ಪ್ರತಿ ಲೀಟರ್ ಡೀಸೆಲ್ ದರ ₹ 92.30 ಇದೆ. ಪೆಟ್ರೋಲ್ ದರ ಮೂರಂಕಿ ದಾಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

‘ಕೋವಿಡ್ ಲಾಕ್‌ಡೌನ್‌ನಿಂದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಉದ್ಯೋಗ ಕಳೆದುಕೊಂಡು, ವ್ಯಾಪಾರ ವಹಿವಾಟು ಮಾಡದೆ ಮನೆಯಲ್ಲಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸತತವಾಗಿ ತೈಲ ದರ ಹೆಚ್ಚಿಸುತ್ತಿರುವುದು ಖಂಡನಾರ್ಹ. ಆಡಳಿತ ನಡೆಸುತ್ತಿರುವವರು ಸಂವೇದನೆ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇಲ್ಲವಾದರೆ ತೈಲ‌ ದರ ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದರು’ ಎಂದು ಸಾಮಾಜಿಕ ಹೋರಾಟಗಾರ ಕೆ.ಎಂ. ಸಂತೋಷ್ ಕುಮಾರ್ ಟೀಕಿಸಿದ್ದಾರೆ.

ADVERTISEMENT

‘ತೈಲ ದರ ಏರಿಕೆಯಿಂದ ಹಣ್ಣು, ತರಕಾರಿ, ದಿನಸಿ ಸೇರಿದಂತೆ ಇತರೆ ವಸ್ತುಗಳ ಬೆಲೆ ಹೆಚ್ಚಾಗಲಿದೆ. ಇದು ನೇರವಾಗಿ ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ತೈಲ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಪೆಟ್ರೋಲ್‌ ಬಂಕ್‌ ಮಾಲೀಕರೂ ಕೂಡ ಹೆಚ್ಚಿನ ಬಂಡವಾಳ ಹಾಕಬೇಕಾಗುತ್ತದೆ. ಬೆಲೆ ಹೆಚ್ಚಳದಿಂದ ಪರೋಕ್ಷ, ಅಪರೋಕ್ಷವಾಗಿ ಎಲ್ಲ ವಲಯದವರಿಗೂ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಸರ್ಕಾರ ಕೂಡಲೇ ತೆರಿಗೆ ಕಡಿತ ಮಾಡಿ, ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪೆಟ್ರೋಲ್‌ ಪಂಪ್‌ ಸಂಘದ ಕಾರ್ಯದರ್ಶಿ ಅಶ್ವಿನ್‌ ಕೊತಂಬ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.