ADVERTISEMENT

ಹಂಪಿಯಲ್ಲಿ ಮೂರು ಟವರ್‌ ಸ್ಥಾಪನೆ

ನೆಟ್‌ವರ್ಕ್‌ ಸಮಸ್ಯೆ ನೀಗಿಸಲು ಸಚಿವ ಆನಂದ್‌ ಸಿಂಗ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 14:01 IST
Last Updated 21 ಸೆಪ್ಟೆಂಬರ್ 2021, 14:01 IST
ಸಚಿವ ಆನಂದ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಸಚಿವ ಆನಂದ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಹೊಸಪೇಟೆ (ವಿಜಯನಗರ): ‘ಹಂಪಿಯಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಆನ್‌ಲೈನ್‌ ಟಿಕೆಟ್‌ ಖರೀದಿಗೆ ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿದೆ. ಶೀಘ್ರದಲ್ಲೇ ಮೂರು ಟವರ್‌ ಸ್ಥಾಪಿಸಿ ಸಮಸ್ಯೆ ನೀಗಿಸಬೇಕು’ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್‌ ಸೂಚಿಸಿದರು.

ಹಂಪಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಸಭೆ ನಡೆಸಿದ ಅವರು, ‘ಹಂಪಿಯಲ್ಲಿ ಕೌಂಟರ್‌ಗಳಲ್ಲಿ ಟಿಕೆಟ್‌ ನೀಡಲಾಗುತ್ತದೆ. ಆದರೆ, ಹೆಚ್ಚಿನವರು ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸುತ್ತಾರೆ. ಆದರೆ, ಹಂಪಿ ಪರಿಸರದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಜನರಿಗೆ ತೊಂದರೆ ಆಗುತ್ತಿದೆ. ಇದು ಬಹುವರ್ಷಗಳ ಸಮಸ್ಯೆ. ಆದ್ಯತೆಯ ಮೇರೆಗೆ ಬಗೆಹರಿಸಬೇಕು’ ಎಂದು ತಾಕೀತು ಮಾಡಿದರು.

‘ಬರುವ ಅಕ್ಟೋಬರ್‌ 17ರಿಂದ 19ರ ವರೆಗೆ ಹಂಪಿಯಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯದ ಪ್ರವಾಸೋದ್ಯಮ ಸಚಿವರ ಸಭೆ ಆಯೋಜಿಸಲಾಗಿದೆ. ಸಭೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಹಂಪಿ ಸಮೀಪದ ಕಮಲಾಪುರದಲ್ಲಿ ಜಿ+1 ಮನೆ ನಿರ್ಮಾಣಕ್ಕೆ ಅನುಮತಿ ಇದೆ. ಅದನ್ನು ಜಿ+2 ಮಾಡಲು ನಿಯಮದಲ್ಲಿ ತಿದ್ದುಪಡಿ ಮಾಡಬೇಕು’ ಎಂದು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು.

ADVERTISEMENT

‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆ ಗಡಿ ಗುರುತಿಸಿ ನಾಮಫಲಕ ಹಾಕಬೇಕು. ಹಂಪಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಅನುಮತಿ ಪಡೆಯುವ ನಿಯಮ ಸರಳಗೊಳಿಸಬೇಕು. ಹೀಗೆ ಮಾಡಿದರೆ ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತದೆ. ಈ ಸಂಬಂಧ ಚಲನಚಿತ್ರ ನಿರ್ದೇಶಕರ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು. ಹಂಪಿಯ ಐದು ಕಡೆ ಈಗಾಗಲೇ ಇರುವ ಶೌಚಾಲಯಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು’ ಎಂದು ನಿರ್ದೇಶನ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಸಿಂಧೂ ಬಿ. ರೂಪೇಶ್, ಕರ್ನಾಟಕ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.