ADVERTISEMENT

ಬಿಇಎಂಎಲ್ ನಿವೃತ್ತ ವ್ಯವಸ್ಥಾಪಕ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 19:33 IST
Last Updated 10 ಸೆಪ್ಟೆಂಬರ್ 2022, 19:33 IST
ಮಹಾದೇವಯ್ಯ
ಮಹಾದೇವಯ್ಯ   

ಬೆಂಗಳೂರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ನ (ಬಿಇಎಂಎಲ್) ನಿವೃತ್ತ ಹಿರಿಯ ವ್ಯವಸ್ಥಾಪಕ ಎಸ್‌. ಮಹಾದೇವಯ್ಯ (85) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೊಲೆ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

‘ರಾಜರಾಜೇಶ್ವರಿನಗರದ ಬಿಇಎಂ ಎಲ್ 5ನೇ ಹಂತದ ನಿವಾಸಿ ಮಹಾದೇವಯ್ಯ, ಬಿಇಎಂಎಲ್‌ನಿಂದ 15 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಬಳಿಕ, ಒಂಟಿಯಾಗಿ ವಾಸವಿದ್ದರು. ಪತ್ನಿ ಹಾಗೂ ಕುಟುಂಬಸ್ಥರು ಪ್ರತ್ಯೇಕವಾಗಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಮಹಾದೇವಯ್ಯ ಅವರು ಸೆ. 7ರಂದು ಮನೆಯಿಂದ ಹೊರಗಡೆ ಬಂದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗ ಮೃತದೇಹ ಕಂಡಿತ್ತು. ಮಹಿಳೆಯೊಬ್ಬರು ಮಹಾದೇವಯ್ಯ ಅವರ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪತ್ನಿ ಮನೆಗೆ ಬಂದು ನೋಡಿದಾಗ ಮೃತಪಟ್ಟಿದ್ದು ಖಾತ್ರಿಯಾಗಿತ್ತು’ ಎಂದು ತಿಳಿಸಿದರು.

ADVERTISEMENT

ಚಿನ್ನಾಭರಣ ದೋಚಿರುವ ಆರೋಪ: ‘ಮಹಾದೇವಯ್ಯ ಅವರ ಸಾವಿನ ಬಗ್ಗೆ ದೂರು ನೀಡಿರುವ ಪತ್ನಿ, ‘ಚಿನ್ನಾಭರಣ ಹಾಗೂ ನಗದು ದೋಚುವುದಕ್ಕಾಗಿ ಯಾರೋ ದುಷ್ಕರ್ಮಿಗಳು ಪತಿಯನ್ನು ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಹಾದೇವಯ್ಯ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಲಾಗಿದೆ. ಮೃತದೇಹದ ಹೊರಭಾಗದಲ್ಲಿ ಗಾಯಗಳು ಕಂಡುಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದ್ದು, ವರದಿ ಬರಬೇಕಿದೆ’ ಎಂದು ತಿಳಿಸಿದರು. ‘

ಒಂಟಿಯಾಗಿ ವಾಸವಿದ್ದ ಮಹಾದೇವಯ್ಯ ಅವರ ಚಲನವಲನದ ಬಗ್ಗೆ ತಿಳಿದುಕೊಂಡು, ದುಷ್ಕರ್ಮಿಗಳು ಕೃತ್ಯ ಎಸಗಿರುವ ಅನುಮಾನವಿದೆ. ಜೊತೆಗೆ, ಪರಿಚಯಸ್ಥರೇ ಕೃತ್ಯ ಎಸಗಿರುವ ಶಂಕೆಯೂ ಇದೆ. ತನಿಖೆ ಮುಂದುವರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.