ADVERTISEMENT

ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 21:42 IST
Last Updated 20 ಸೆಪ್ಟೆಂಬರ್ 2021, 21:42 IST

ಬೆಂಗಳೂರು: ‘ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ 2021’ ಕ್ಕೆ ಕಾಂಗ್ರೆಸ್‌ ಪ್ರತಿರೋಧದ ಮಧ್ಯೆಯೂ ವಿಧಾನಸಭೆ ಅಂಗೀಕಾರ ನೀಡಿತು.

‘ಈ ಮಸೂದೆಗೆ ತರಾತುರಿಯಲ್ಲಿ ಒಪ್ಪಿಗೆ ನೀಡಬಾರದು ಇದರ ಸಾಧಕ– ಬಾಧಕವನ್ನು ಪರಿಶೀಲಿಸಿ ಮತ್ತೊಮ್ಮೆ ಚರ್ಚಿಸಲು ಅವಕಾಶ ನೀಡಬೇಕು’ ಎಂದು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು. ಆದರೆ ಅದಕ್ಕೆ ಅವಕಾಶ ನೀಡದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಂಗೀಕಾರ ನೀಡಿದರು.

ಸಹಕಾರಿ ಸಂಘಗಳ ಉದ್ಯೋಗಿಗಳು ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಅವರ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.

ADVERTISEMENT

ಮಸೂದೆಯನ್ನು ಮಂಡಿಸಿದ ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ಅವರು, ಚುನಾಯಿತ ನಿರ್ದೇಶಕರು ಮೃತಪಟ್ಟರೆ, ಚುನಾವಣೆ ನಡೆಸುವ ಬದಲು ಆ ಸ್ಥಾನಕ್ಕೆ ಒಬ್ಬರನ್ನು ಕೋ–ಆಪ್ಟ್‌ ಮಾಡಿಕೊಳ್ಳಲು ಅವಕಾಶ ಇದೆ ಎಂದರು.

ಸೌಹಾರ್ದ ಸಹಕಾರಿ ಮಸೂದೆ ಅಂಗೀಕಾರ: ಸಹಕಾರಿ ಕಾರ್ಯಕ್ಷೇತ್ರದಲ್ಲಿನ ಕೆಲವು ನಿಯಮಗಳ ಅಸ್ಪಷ್ಟತೆಯನ್ನಯ ತೆಗೆದು ಹಾಕಲು ಮತ್ತು ಸೌಹಾರ್ದ ಸಹಕಾರಿಯನ್ನು ಸಹಕಾರ ಕ್ಷೇತ್ರವೆಂದು ಪರಿಗಣಿಸಲು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ 2021 ಕ್ಕೆ ಅಂಗೀಕಾರ ನೀಡಲಾಯಿತು.

ಠೇವಣಿಗಳ ಹೊರತಾಗಿ ಹಣಕಾಸು ಸಂಸ್ಥೆಗಳಿಂದ ಸಂಪನ್ಮೂಲ ಸಂಗ್ರಹಿಸಬಹುದು. ಒಟ್ಟು ಷೇರುಗಳ ಶೇ 5 ರಷ್ಟು ಷೇರುಗಳನ್ನು ಯಾವುದೇ ವ್ಯಕ್ತಿಯು ಹೊಂದುವುದಕ್ಕೆ ನಿರ್ಬಂಧ ವಿಧಿಸುವ ಅಂಶವನ್ನು ಮಸೂದೆ ಒಳಗೊಂಡಿದೆ.

ಮಂಡನೆಯಾದ ಮಸೂದೆಗಳು
*ಸುಗ್ರೀವಾಜ್ಞೆ ರೂಪದಲ್ಲಿರುವ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ಮಸೂದೆ 2021
* ಕರ್ನಾಟಕ ಸರಕು ಮತ್ತು ಸೇವೆಗಳ ತಿದ್ದುಪಡಿ ತೆರಿಗೆ ಮಸೂದೆ 2021

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.